Breaking News

ಕಾರ್ಕಳದಲ್ಲಿ ಖಾಸಗಿ ಪ್ರಯತ್ನದ ಜಲಕ್ರಾಂತಿ, ದಾನಿಗಳ ನೆರವಿನಿಂದ ೧೮೨ ಕೆರೆಗಳ ಅಭಿವೃದ್ಧಿಗೆ ಚಾಲನೆ


ಇದೆಂಥಾ ಬರಗಾಲವೋ ಗೊತ್ತಿಲ್ಲ. ಉಡುಪಿ ಜಿಲ್ಲೆ ಕಾರ್ಕಳದ ಜನ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಸ್ವಂತ ಖರ್ಚಿನಲ್ಲಿ ತಮ್ಮೂರಿನ ೧೮೨ ಕೆರೆಗಳ ಹೂಳೆತ್ತೋದಕ್ಕೆ ಮುಂದಾಗಿದ್ದಾರೆ. ಈ ಜಲ ಪುನಶ್ಚೇತನ ಅಭಿಯಾನ ಒಂದು ಕಣ್ತೆರೆಸುವ ಸ್ಟೋರಿ.
ಕಾರ್ಕಳ ಪಶ್ಚಿಮ ಘಟ್ಟದ ತಪ್ಪಲಿನ ತಾಲೂಕು, ಈ ಬಾರಿಯ ಬರಗಾಲ ಯಾವ ತರ ಪರಿಣಾಮ ಬೀರಿದೆ ಅಂದ್ರೆ ಹಸನಾಗಿರುವ ಕಾರ್ಕಳವೂ ಬೋಳು ಬಯಲಾಗಿದೆ. ತುಂಬಿ ಕಣ್ಣಿಗೆ ತಂಪು ನೀಡುತ್ತಿದ್ದ ಕೆರೆಗಳು ಮರಭೂಮಿಯಂತಾಗಿದೆ. ಇದಕ್ಕೆ ಕಾರಣ ಅಂತರ್ಜಲದ ಕುಸಿತ ಮತ್ತು ಪರಿಸರ ನಾಶ. ಇಲ್ಲಿ ನಾವು ಕಾಣುತ್ತಿರುವುದು ಪಾಳು ಬಿದ್ದು ಒಣಗಿಹೋದ ಬಂಜರು ಭೂಮಿಯಲ್ಲ. ಒಂದು ಕಾಲದಲ್ಲಿ ಇಡೀ ಊರಿಗೆ ಆಸರೆಯಾಗಿದ್ದ ಸಿಗಡಿ ಕೆರೆ. ನಗರ ಬೆಳಿತಾ ಹೋದಂತೆ ಕಾರ್ಕಳದ ಸಿಗಡಿ ಕೆರೆಗೆ ಈ ಸ್ಥಿತಿ ಬಂದಿದೆ. ತಾಲೂಕಿನಲ್ಲಿ ಸುಮಾರು ೧೮೨ ಕೆರೆಗಳು ಇದೇ ದುಸ್ಥಿತಿಯಲ್ಲಿದೆ. ಇದೀಗ ಜನರು ತಾವೇ ಸ್ವಂತ ಖರ್ಚಿನಲ್ಲಿ ಈ ಕೆರೆಗಳ ಪುನಶ್ಚೇತನ ಮಾಡಲು ಹೊರಟಿದ್ದಾರೆ.
ಕಾರ್ಕಳ ಒಂದು ಐತಿಹಾಸಿಕ ನಗರಿ, ಭೈರವ ಅರಸರ ಕಾಲದಲ್ಲಿ ೨೦೦ರಷ್ಟು ಕೆರೆಗಳನ್ನು ನಿರ್ಮಾಣ ಮಾಡಲಾಗಿತ್ತಂತೆ. ಆನೆ ಕೆರೆಯಲ್ಲಿ ಅರಮನೆಯ ನೂರಾರು ಆನೆಗಳ ಜಲವಿಹಾರ ಸ್ನಾನ, ಊರಿನ ಜನರ ಎಲ್ಲಾ ಉಪಯೋಗಕ್ಕೆ ಈ ನೀರು ಉಪಯೋಗವಾಗುತ್ತಿತ್ತು. ವರ್ಷ ಪೂರ್ತಿ ನೀರಿರುತ್ತಿದ್ದ ಕೆರೆ ಬತ್ತಿರುವುದರಿಂದ ಸುತ್ತಮುತ್ತಲ ಬಾವಿ ಬೋರ್ವೆಲ್‌ಗಳ ನೀರು ಪಾತಾಳಕ್ಕೋಗಿದೆ. ಇದರಿಂದ ಭೀತರಾದ ಜನರು ಹತ್ತಾರು ಸಂಘ ಸಂಸ್ಥೆಗಳು, ಸ್ಥಳೀಯ ದಾನಿಗಳ ನೆರವಿನಿಂದ ಕೆರೆಗಳಿಗೆ ಜೀವ ತುಂಬಲು ಹೊರಟಿದ್ದಾರೆ. ಸರ್ಕಾರದಿಂದ ನಯಾಪೈಸೆ ಪಡೆಯದೆ ಈ ಅಭಿಯಾನ ಆರಂಭಿಸಿದ್ದಾರೆ. ದಿನವೊಂದಕ್ಕೆ ೨೫ ಸಾವಿರ ರೂಪಾಯಿ ಜೆಸಿಬಿ, ಟಿಪ್ಪರ್ ಬಾಡಿಗೆ ಆಗುತ್ತೆ. ದಾನಿಗಳಿಂದ, ಸಂಘ ಸಂಸ್ಥೆಗಳಿಂದ ದಾನ ರೂಪದಲ್ಲಿ ಪಡೆದು ಈ ವರ್ಷ ಐದು ಕೆರೆಗಳ ಪುನಶ್ಚೇತನ ಮಾಡಲಾಗುತ್ತಿದೆ.
೨೦೧೬ರಿಂದ ೨೫ ಸಾವಿರ ಇಂಗು ಗುಂಡಿ, ೨೫ ಸಾವಿರ ಸಸಿಗಳನ್ನು ತಾಲೂಕಿನಲ್ಲಿ ನೆಟ್ಟು ಪೋಷಿಸಲಾಗುತ್ತಿದೆ. ಖಾಸಗಿ ಸಂಘ ಸಂಸ್ಥೆಗಳಿಗೆ, ಶಾಲಾ ಕಾಲೇಜುಗಳಿಗೆ ಈ ಜವಾಬ್ದಾರಿ ನೀಡಲಾಗಿದೆ. ರಾಜ್ಯಾದ್ಯಂತ ಒತ್ತುವರಿಯಾದ, ಬತ್ತಿದ ಕೆರೆಗಳ ಹೂಳು ತೆಗೆದ್ರೆ ಮತ್ತೆಂದೂ ಇಂತಹ ಬರ ಎದುರಾಗಲಿಕ್ಕಿಲ್ಲ.

Related posts

Leave a Reply