
ಕಾರ್ಕಳ: ಮಂಗನ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ಕಾರ್ಕಳ ರೋಟರಿ ಕ್ಲಬ್, ಕಾರ್ಕಳ ಜೆಸಿಐ, ಕಾರ್ಕಳ ಭಾರತೀಯ ರೆಡ್ ಕ್ರಾಸ್ ಸೊಸೈಟಿಯವರ ಜಂಟಿ ಆಶ್ರಯದಲ್ಲಿ ಕಾರ್ಕಳ ಬಸ್ಸು ನಿಲ್ದಾಣದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಡಾ. ರಾಮಚಂದ್ರ ಜೋಶಿಯವರು ಮಾತನಾಡಿ 1956 ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಎಂಬ ಹಳ್ಳಿಯಲ್ಲಿ ಒಂದೆ ಸಮನೆ ಮಂಗಗಳು ಸಾವನ್ನಪ್ಪಿದವು. ಆದರೆ ಇಲ್ಲಿಯ ನಿವಾಸಿಗಳಿಗೆ ಈ ರೋಗದ ಅರಿವಿಲ್ಲದೆ ತಮ್ಮ ಕೆಲಸಕ್ಕಾಗಿ ಕಾಡಿಗೆ ಹೋದರು. ಆಗ ಇವರಿಗೆ ವಿಚಿತ್ರವಾದ ಜ್ವರವು ಬರಲು ಪ್ರಾರಂಭವಾಯಿತು. ಈ ರೋಗದ ವಿಶೇಷವೇನೆಂದರೆ, ಈ ಕಾಯಿಲೆ ವೈರಲ್ ಆಗಿರುತ್ತದೆ. ಈ ಕಾಯಿಲೆ ಕೇವಲ ಶಿವಮೊಗ್ಗದ ಜಿಲ್ಲೆಗಳಲ್ಲಿ ಮಾತ್ರ ಕಾಣಿಸುತ್ತಿತ್ತು. ಆದರೆ ಮಂಗನ ಕಾಯಿಲೆ ಉಡುಪಿ ಜಿಲ್ಲೆಯ ಬಾಗಿಲಿಗೆ ಬಂದು ನಿಂತಿದೆ. ಆದುದರಿಂದ ಮಂಗಗಳ ಶವ ಪತ್ತೆ ಆದಲ್ಲಿ ಅದರ ಹತ್ತಿರ ಹೋಗದೆ ಅದನ್ನು ಮುಟ್ಟದೆ ಕೂಡಲೇ ಪಶು ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಶೈಲೇಂದ್ರ ರಾವ್, ದಿವ್ಯಸ್ಮಿತ, ಇಕ್ಬಾಲ್ ಅಹಮ್ಮದ್, ನಿರಂಜನ್ ಜೈನ್, ವಿಘ್ನೇಶ್, ತಾಲೂಕು ಆರೋಗ್ಯ ಅಧಿಕಾರಿ ಶಿವಾನಂದ ರಾವ್ ಮುಂತಾದವರು ಉಪಸ್ಥಿತರಿದ್ದರು.