Header Ads
Header Ads
Breaking News

ಕಾರ್ಕಳ ತಾ.ಪಂ. ಸಾಮಾನ್ಯ ಸಭೆ : ಆಧಾರ್, ಆರ್‌ಟಿಸಿ ಸಮಸ್ಯೆ ಬಗೆಹರಿಸಿ ಸದಸ್ಯರ ಆಗ್ರಹ

ಕಳೆದ ಹಲವಾರು ತಿಂಗಳಿನಿಂದ ಕಾರ್ಕಳ ತಾಲೂಕಿನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಕಾರ್ಡ್ ಪಡೆಯುವಲ್ಲಿ ನಾನಾ ಸಮಸ್ಯೆಗಳು ಕಂಡುಬರುತ್ತಿವೆ. ಆಧಾರ್ ಸರಿಪಡಿಸುವ ಸಲುವಾಗಿ ರಾತ್ರೋರಾತ್ರಿ ನಾಗರಿಕರು ದೂರದೂರಿನಿಂದ ತಾಲೂಕು ಕೇಂದ್ರಕ್ಕೆ ಬಂದು ಕಚೇರಿ ಮುಂದೆ ಕಾಯುತ್ತಿದ್ದಾರೆ. ಇದಕ್ಕೆ ಪರಿಹಾರ ಕಲ್ಪಿಸಿಕೊಡುವ ಕಾರ್ಯವಾಗಬೇಕೆಂದು ಸದಸ್ಯರಾದ ರಮೇಶ್ ಕುಮಾರ್ ಶಿವಪುರ ಹಾಗೂ ಹರೀಶ್ ಅಜೆಕಾರು ಆಗ್ರಹಿಸಿದ ಘಟನೆ ಕಾರ್ಕಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.

ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಾ. ೧ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು.

ಕೃಷಿ ಸಮ್ಮಾನ್ ನಿಧಿ ಯೋಜನೆಗಾಗಿ ಆರ್‌ಟಿಸಿಯ ಅಗತ್ಯವಿದ್ದು, ಇದೀಗ ಕಾರ್ಕಳದಲ್ಲಿ ಆರ್‌ಟಿಸಿ ಪಡೆಯಲು ಸಾಧ್ಯವಾಗುತ್ತಿಲ್ಲ. ಆಧಾರ್, ಆರ್‌ಟಿಸಿ ಪಡೆಯಲು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಹರೀಶ್ ಹಾಗೂ ರಮೇಶ್ ಒತ್ತಾಯಿಸಿದರು.

ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಕೇಳಿದ ಸದಸ್ಯೆ ಮಂಜುಳಾ ಅವರು ಅರಣ್ಯಧಿಕಾರಿ ಸಭೆಗೆ ಗೈರಾಗಿರುವುದನ್ನು ಪ್ರಶ್ನಿಸಿ ಅಧಿಕಾರಿಗಳು, ತಾ.ಪಂ. ಸಾಮಾನ್ಯ ಸಭೆ ಮತ್ತು ಗ್ರಾಮ ಸಭೆಗೆ ನಿರಂತರವಾಗಿ ಗೈರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಅನೇಕ ಸದಸ್ಯರು ಧ್ವನಿಗೂಡಿಸಿ ಮಾತನಾಡಿದರು. ಈ ನಿಟ್ಟಿನಲ್ಲೇ ಕೆಲ ಹೊತ್ತು ಚರ್ಚೆ ಸಾಗಿತು. ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು. ಈ ವೇಳೆ ಮಾತನಾಡಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೇ| ಹರ್ಷ, ಅಧಿಕಾರಿಗಳು ಗೈರಾದಲ್ಲಿ ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳಿಗೆ ನಾವು ತಿಳಿಸಬಹುದೇ ಹೊರತು ನಮಗೇನು ಕ್ರಮಕೈಗೊಳ್ಳುವಂತಿಲ್ಲ ಎಂದರು. ಗ್ರಾಮಸಭೆಯಲ್ಲಿ ಇಲಾಖೆಗಳಿಂದ ಯಾವುದಾದರೂ ಒಬ್ಬ ಅಧಿಕಾರಿ ಪ್ರತಿನಿಧಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. 

ಬೆಳ್ಮಣ್‌ನಲ್ಲಿ  ಅಕ್ರಮವಾಗಿ ಮನೆ ನಿರ್ಮಿಸಿದ್ದಾರೆ ಎಂದು ಪಂಚಾಯತ್ ಪಿಡಿಒ ಮನೆ ತೆರವುಗೊಳಿಸಿದ ವಿಚಾರವು ತಾ.ಪಂ. ಸಾಮಾನ್ಯ ಸಭೆಯಲ್ಲೂ ಪ್ರಸ್ತಾಪವಾಯಿತು. ಈ ವೇಳೆ ಮಾತನಾಡಿದ ಇಒ 94 ಸಿ ಗೆ ಅರ್ಜಿ ಸಲ್ಲಿಸಿದಾಗ್ಯೂ ನಾನಾ ಕಾರಣಗಳಿಂದ ಅದು ತಿರಸ್ಕೃತಗೊಂಡಿರುತ್ತದೆ. ನನಗೆ ತಿಳಿದಂತೆ ಆ ಮನೆಯವರಿಗೆ ನೋಟಿಸ್ ಕೂಡ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.

 

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಉಪಾಧ್ಯಕ್ಷ ಗೋಪಾಲ ಮೂಲ್ಯ, ಮುಖ್ಯಕಾರ್ಯನಿರ್ವಹಣಾಽಕಾರಿ ಮೆ| ಹರ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಲೆಕ್ಕಪರಿಶೋಧಕ ನಿತಿನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *