
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಬೆಂಗಳೂರು. ಕಾಸರಗೋಡು ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಕೇರಳ ಕನ್ನಡ ಪತ್ರಕರ್ತರ ಸಮಾವೇಶ ಕಾಸರಗೋಡಿನ ಹೈವೇ ಕ್ಯಾಸ್ಟಲ್ ಸಭಾಂಗಣದಲ್ಲಿ ನಡೆಯಿತು.
ಸಭೆಯನ್ನ ಏಷ್ಯಾ ಪತ್ರಕರ್ತರ ಒಕ್ಕೂಟದ ಸಂಚಾಲಕ ಮದನಗೌಡ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ವೃತ್ತಿಪರ ಮೌಲ್ಯಗಳನ್ನು ಕಾಪಾಡಿಕೊಂಡು ವಿಶ್ವಾಸ ಅರ್ಹತೆಯೊಂದಿಗೆ ಕಾರ್ಯ ನಿರ್ವಹಿಸುವುದು ಸವಾಲಿನ ಕಾರ್ಯವಾಗಿದೆ. ಪ್ರಜಾಪ್ರಭುತ್ವದ 4 ನೇ ಅಂಗವಾದ ಪತ್ರಿಕೋದ್ಯಮ ಪರಿಣಾಮಕಾರಿಯಾಗಿದ್ದು ಗಡಿ ನಾಡಿನಲ್ಲಿ ಭಾಷೆಗಳ ಜೊತೆ ಸಪ್ತಭಾಷೆಗಳೊಂದಿಗೆ ಸರ್ವಧರ್ಮದವರ ಜತೆ ಒಡನಾಟವಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದರು.
ಸಭೆಯ ಅಧ್ಯಕ್ಷತೆಯನ್ನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರಿನ ಅಧ್ಯಕ್ಷರಾದ ಶಿವಾನಂದ ತಗಡೂರು ವಹಿಸಿದ್ದರು. ಕ ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಹಾರಾಷ್ಟ್ರ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷರಾದ ರೋನ್ಸ್ ಬಂಟ್ವಾಳ, ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಅಚ್ಯುತ ಚೇವಾರ್, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾದ ಗೋಲ್ಡನ್ ಅಬ್ದುಲ್ ರೆಹಮಾನ್, ಕೆ.ಡಬ್ಲ್ಯೂ.ಜೆ ಯ ಇಬ್ರಾಹಿಂ ಅಡ್ಕಸ್ಥಳ, ಮೊದಲಾದವರು ಉಪಸ್ಥಿತರಿದ್ದರು. ಈ ವೇಳೆ ಹಿರಿಯ ಪತ್ರಕರ್ತರಾದ ಮಲಾರ್ ಜಯರಾಮ ರೈ, ಟಿ. ಶಂಕರನಾರಾಯಣ ಭಟ್, ಕಿದೂರು ಶಂಕರ ನಾರಾಯಣ ಭಟ್, ರಾಧಾಕೃಷ್ಣ ಉಳಿಯತಡ್ಕ, ಭಾಸ್ಕರ ಕೆ, ಬಿ.ಪಿ.ಶೇಣಿ, ದೇವದಾಸ ಪಾರೆಕಟ್ಟೆ, ಇವರುಗಳನ್ನ ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಲಾಯಿತು.
ಅಲ್ಲದೇ ಪತ್ರಕರ್ತರಿಗೆ ಇರುವ ಆರೋಗ್ಯ ಕಾರ್ಡನ್ನು ಶಿವಾನಂದ ತಗಡೂರು ರವರು ಹಿರಿಯ ಪತ್ರಕರ್ತರಾದ ವಿ.ಜಿ ಕಾಸರಗೋಡು ರವರಿಗೆ ನೀಡುವ ಮೂಲಕ ಔಪಚಾರಿಕವಾಗಿ ಉದ್ಘಾಟಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷರಾದ ಎ.ಆರ್. ಸುಬ್ಬಯ್ಯಕಟ್ಟೆ ಸ್ವಾಗತಿಸಿ, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಪ್ರಾರ್ಥನೆ ಹಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ರವಿ ನಾಯ್ಕಪ್ ನಿರೂಪಿಸಿ, ಸಾಯಿಭದ್ರ ರೈ ವಂದಿಸಿದರು. ಕಾರ್ಯಕ್ರಮದ ಪೂರ್ವಭಾವಿಯಾಗಿ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಇವರಿಂದ ಸುಗಮ ಸಂಗೀತ ನಡೆಯಿತು.