Header Ads
Header Ads
Breaking News

ಮಂಜೇಶ್ವರ:ಮುಂದೂಡಲ್ಪಟ್ಟ ಹೆದ್ದಾರಿ ಚತುಷ್ಪಥ ಯೋಜನೆ-ಜನವರಿ ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಚಾಲನೆ

ಮಹತ್ವಾಕಾಂಕ್ಷೆಯ ತಲಪಾಡಿ-ಕಾಲಿಕಡವು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಯ ಕಾಮಗಾರಿ ಮುಂದಿನ ವರ್ಷ ಜನವರಿ ತಿಂಗಳಲ್ಲಿ ಆರಂಭಗೊಳ್ಳಲಿದೆ. ಈಗಾಗಲೇ ಹಲವು ಬಾರಿ ಹೆದ್ದಾರಿ ಕಾಮಗಾರಿ ಆರಂಭಿಸಲಾಗುವುದೆಂದು ಹೇಳುತ್ತಲೇ ಬಂದಿರುವ ರಾಜ್ಯ ಸರಕಾರ ಇದೀಗ ಜನವರಿ ತಿಂಗಳಲ್ಲಿ ಆರಂಭಿಸುವುದಾಗಿ ಹೇಳಿದೆ. ಈ ಯೋಜನೆಗೆ ಅಗತ್ಯದ ಆರ್ಥಿಕ ನೆರವನ್ನು ಶೀಘ್ರವೇ ಬಿಡುಗಡೆಗೊಳಿಸಲಾಗುವುದೆಂದು  ಕೇಂದ್ರ ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಕೇರಳ ಸರಕಾರಕ್ಕೆ ಭರವಸೆ ನೀಡಿರುವುದರಿಂದ ಜನವರಿ ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ.ಕುಂಜತ್ತೂರು ಹಳೆ ಆರ್ ಟಿ ಒ , ಮಂಜೇಶ್ವರ, ಉದ್ಯಾವರ ಸೇರಿದಂತೆ ಹಲವೆಡೆ ಭೂಮಿಗಳಿಗೆ ಹಣವನ್ನು ನೀಡಲಾಗಿದ್ದು, ಫಲಾನುಭವಿಗಳ ಖಾತೆಗೆ ಅದನ್ನು ವರ್ಗಾಯಿಸಲಾಗಿದೆ. ಆದರೆ ಸ್ವಾಧೀನ ಪಡಿಸುವ ಕಾರ್ಯ ಇನ್ನೂ ಆರಂಭಗೊಂಡಿಲ್ಲ.  ಕಾಸರಗೋಡಿನಿಂದ ಕಾಲಿಕಡವಿನ ತನಕ ಮೂರು ಹಂತಗಳಲ್ಲಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ನಡೆಸಲು ತೀರ್ಮಾನಿಸಲಾಗಿದೆ. ಇದರಂತೆ ಮೊದಲ ಹಂತದಲ್ಲಿ ತಲಪಾಡಿಯಿಂದ ಚೆಂಗಳ ತನಕ, ದ್ವಿತೀಯ ಹಂತದಲ್ಲಿ ಚೆಂಗಳದಿಂದ ನೀಲೇಶ್ವರ ತನಕ ಮತ್ತು ಮೂರನೇ ಹಂತದಲ್ಲಿ ನೀಲೇಶ್ವರದಿಂದ ಕಾಲಿಕಡವಿನ ತನಕ ಚತುಷ್ಪಥ ರಸ್ತೆಯ ಕಾಮಗಾರಿ ಯೋಜನೆಯನ್ನು ಸಾಕಾರಗೊಳಿಸಲಾಗುವುದು.ಈ ಯೋಜನೆಯಂತೆ ತಲಪ್ಪಾಡಿಯಿಂದ ಚೆಂಗಳ ತನಕದ 39 ಕಿ.ಮೀಟರ್ ತನಕದ ರಸ್ತೆ ಅಭಿವೃದ್ಧಿಗಾಗಿ ಹೆಚ್ಚುವರಿಯಾಗಿ 44 ಹೆಕ್ಟೇರ್ ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ 1270 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಅದೇ ರೀತಿ ಚೆಂಗಳ-ನೀಲೇಶ್ವರದ ಪಳ್ಳಿಕ್ಕೆರೆ ಮೇಲ್ಸೇತುವೆ ತನಕ 37 ಕಿ.ಮೀಟರ್ ದೂರದ ರಸ್ತೆ ನಿರ್ಮಾಣಯಕ್ಕೆ 42 ಹೆಕ್ಟೇರ್ ಭೂಮಿ ವಶಪಡಿಸಲಾಗಿದೆ. ಈ ಹಂತದ ನಿರ್ಮಾಣಕ್ಕೆ 1400 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.      ಹೆದ್ದಾರಿ ಚತುಷ್ಪಥ ಯೋಜನೆಗೆ ವರ್ಷಗಳಿಂದ ಯೋಜನೆ ಸಿದ್ದಪಡಿಸಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಈ ಮಧ್ಯೆ ಡಿಸೆಂಬರ್ ತಿಂಗಳಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದೆಂದು ಹೇಳಲಾಗಿತ್ತು. ಆದರೆ ಇದೀಗ ಒಂದು ತಿಂಗಳು ತಡವಾಗಿ ಮುಂದಿನ ವರ್ಷ ಜನವರಿಗೆ ಕಾಮಗಾರಿ ಆರಂಭದ ಸೂಚನೆ ಲಭಿಸಿರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ.

Related posts

Leave a Reply