Header Ads
Breaking News

ಕಿರು ಜಟ್ಟಿ, ಬಂದರು ಹೂಳೆತ್ತುವ ಕಾಮಗಾರಿಗೆ ಅನುದಾನದ ನಿರೀಕ್ಷೆ : ಕುಂದಾಪುರದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಕುಂದಾಪುರ: ಮೀನುಗಾರಿಕಾ ಅಭಿವೃದ್ದಿಗೆ ಸಂಬಂಧಪಟ್ಟಂತೆ ಅನೇಕ ಯೋಜನೆಗಳಿಗೆ ಸರ್ಕಾರ ಆರ್ಥಿಕ ನೆರವನ್ನು ನೀಡುತ್ತಿದೆ. ಬಹುಕಾಲದಿಂದ ನೆನೆಗುದಿಗೆ ಬಿದ್ದರುವ ಕಿರು ಜಟ್ಟಿಗಳು, ಬಂದರುಗಳ ಹೂಳೆತ್ತುವ ಕಾಮಗಾರಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಬರುವ ನಿರೀಕ್ಷೆ ಇದೆ ಎಂದು ಮೀನುಗಾರಿಕಾ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಕುಂದಾಪುರದ ಮಿನಿವಿಧಾನಸೌಧದಲ್ಲಿ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯನ್ನು ವಿತರಿಸಿ ಮಾತನಾಡಿದರು. ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಡುಗಡೆ ಮಾಡಿ ಮೀನುಗಾರರಿಗೆ ನೆರವಾಗಿದ್ದಾರೆ. ಮುಖ್ಯಮಂತ್ರಿಗಳು ಬಹಳ ಪ್ರೀತಿಯಿಂದ ವಿಧಾನಸೌದದಲ್ಲಿ ಮೀನುಗಾರಿಕಾ ಇಲಾಖೆಯ ಸಂಚಿಕೆಯನ್ನು ಬಿಡುಗಡೆ ಮಾಡಿ ಮೀನುಗಾರರಿಗೆ ಬೇಕಾಗಿರುವಂತಹ ಎಲ್ಲಾ ಅವಕಾಶಗಳನ್ನು ಮಾಡಿಕೊಡುತ್ತೇನೆಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತುಮಕೂರಿಗೆ ಬಂದು ಉದ್ಘಾಟನೆ ಮಾಡಿರುವ ಮೀನುಗಾರರ ಕಿಸಾನ್ ಕಾರ್ಡ್ ಅನ್ನು ಇಡೀ ರಾಜ್ಯದಲ್ಲಿರುವ ಎಲ್ಲಾ ಮೀನುಗಾರರಿಗೂ ವಿತರಣೆ ಮಾಬೇಕು ಎಂದು ಯೋಚನೆ ಮಾಡಿ ಪ್ರತೀ ಜಿಲ್ಲೆಯಲ್ಲೂ ಕೂಡ ಈ ಕಾರ್ಯಕ್ರಮಕ್ಕೆ ಬೇಕಾಗುವಂತಹ ಯೋಜನೆಯನ್ನು ರೂಪಿಸಿದ್ದೇವೆ ಎಂದರು.

ನಿರುದ್ಯೋಗಿ ಯುವಕರಿಗೆ ಮೀನುಗಾರಿಕೆ ಇಲಾಖೆಯ ಮೂಲಕ ಮಾಹಿತಿ ಶಿಬಿರವನ್ನು ಏರ್ಪಡಿಸಿ ಅವರು ಪಂಜರದ ಕೃಷಿ ಮಾಡುವುದಾದರೆ ಅದಕ್ಕೆ ಬೇಕಾಗುವಂತಹ ಅನುದಾನ, ಅನುಕೂಲಗಳನ್ನು ಹಾಗೂ ಸಾಲಸೌಲಭ್ಯವನ್ನು ಒದಗಿಸಲು ಬೇಕಾದಂತಹ ಕಾರ್ಯಗಾರವನ್ನು ಆಗಸ್ಟ್ ತಿಂಗಳ ಪ್ರಥಮ ವಾರ ಮಾಡಬೇಕೆಂಬ ಆಲೋಚನೆಗಳನ್ನು ಮಾಡಿಕೊಂಡಿದ್ದೇವೆ. ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿರುವಂತಹ ಹೆಜಮಾಡಿ ಕಿರುಬಂದರು 181ಕೋಟಿ ರೂಪಾಯಿ ವೆಚ್ಚದಲ್ಲಿ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆಗೆ ಬಂದಿದೆ. ಮತ್ತು ಅಲ್ಲಿನ ಖಾಸಗಿ ಜಾಗವನ್ನು ಖರೀದಿ ಮಾಡಲು ಸುಮಾರು 13 ಕೋಟಿ ರೂಪಾಯಿಯನ್ನು ಸಚಿವ ಸಂಪುಟದಲ್ಲಿ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಕುಸಿದು ಹೋಗಿರುವ ಹಂಗಾರಕಟ್ಟೆ, ಗಂಗೊಳ್ಳಿ ಬಂದರು ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಆಗುತ್ತದೆ ಎಂದು ಸಚಿವ ಕೋಟ ಭರವಸೆ ನೀಡಿದರು.

ಈ ವೇಳೆಯಲ್ಲಿ ಸಹಾಯಕ ಕಮಿಷನರ್ ಕೆ. ರಾಜು, ತಹಸೀಲ್ದಾರ್ ಆನಂದಪ್ಪ ನಾಯ್ಕ್, ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ, ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗೋಪಾಲ ಕಾಂಚನ್ ಸಿದ್ದಾಪುರ, ಎಪಿಎಂಸಿ ನಿರ್ದೇಶಕ ಸುಧೀರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಗೋಪಾಡಿ, ತಾ.ಪಂ ಸದಸ್ಯ ಸುರೇಂದ್ರ ಖಾರ್ವಿ, ಬಿಜೆಪಿ ಪ್ರಧಾನ ಪಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಗಂಗೊಳ್ಳಿ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *