Header Ads
Header Ads
Breaking News

ಕಿಲ್ಲೆ ಮೈದಾನ ಗಣಪಗೆ ಸ್ಥಳ ಬಾಡಿಗೆ ವಿವಾದ.ಆಡಳಿತ ವ್ಯವಸ್ಥೆಗೆ ಮುನಿದನೇ ಗಣಪ

ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ದೇವತಾ ಸಮಿತಿಯ ವತಿಯಿಂದ ವರ್ಷಂಪ್ರತಿ ನಡೆದುಕೊಂಡು ಬರುತ್ತಿದ್ದ ‘ಕಾರಣಿಕ ಗಣಪನ’ ವೈಭವದ ಸಾರ್ವಜನಿಕ ಗಣೇಶೋತ್ಸವಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಎರಡು ವರ್ಷದ ಹಿಂದೆ ಸ್ಥಳ ಶುಲ್ಕ ವಿಧಿಸುವ ಮೂಲಕ ಆಶ್ಚರ್ಯ ಮೂಡಿಸಿದ್ದ ಕಳೆದ ಅವಧಿಯ ನಗರಸಭಾ ಆಡಳಿತಕ್ಕೆ ಈ ವರ್ಷ ನಡೆದ ಚುನಾವಣೆಯಲ್ಲಿ ಆಶ್ಚರ್ಯಕರ ಆಘಾತವಾಗಿದ್ದು, ಕಾಂಗ್ರೆಸ್ ಒಳಜಗಳದ ಹೆಸರಿನಲ್ಲಿ ‘ವಿಘ್ನ’ ಕಾಡಿದೆ.ಪುತ್ತೂರಿನ ದೇವತಾ ಸಮಿತಿಯ ವತಿಯಿಂದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಪ್ರಸ್ತುತ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುವ ಎನ್. ಸುಧಾಕರ ಶೆಟ್ಟಿ ಅವರು ನೇತೃತ್ವದಲ್ಲಿ ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಕಿಲ್ಲೆ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ವಿಜ್ರಂಭಣೆಯಿಂದ ನಡೆದುಕೊಂಡು ಬರುತ್ತಿದ್ದು, ಪ್ರಸ್ತುತ 61ನೇ ವರ್ಷದ ಗಣೇಶೋತ್ಸವ ನಡೆಯುತ್ತಿದೆ. ಈ ಹಿಂದಿನ ಪುರಸಭೆ ಹಾಗೂ ನಗರಸಭೆಗೆ ಸೇರಿದ ಕಿಲ್ಲೆ ಮೈದಾನದಲ್ಲಿ ಈ ಗಣೇಶೋತ್ಸವ ಆಚರಣೆ ಸುದೀರ್ಘ ವರ್ಷಗಳಿಂದ ನಡೆದುಕೊಂಡು ಬಂದಿದ್ದರೂ ಕಳೆದ ಎರಡು ವರ್ಷಗಳ ಹಿಂದಿನ ತನಕ ಪುರಸಭೆಯಲ್ಲಿ ಹಾಗೂ ನಗರಸಭೆಯಲ್ಲಿ ಆಡಳಿತ ನಡೆಸಿದವರು ಯಾವುದೇ ಸ್ಥಳ ಬಾಡಿಗೆ ವಿಧಿಸಿರಲಿಲ್ಲ. ಆದರೆ ಕಳೆದ ಅವಧಿಯಲ್ಲಿ ಪುತ್ತೂರು ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿದಿದ್ದ ಪುತ್ತೂರು ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಹಾಗೂ ಮಹಮ್ಮದ್ ಆಲಿ ತಂಡದ ನೇತೃತ್ವದ ಆಡಳಿತ ವರ್ಗ ಎರಡು ವರ್ಷಗಳ ಹಿಂದೆ ಗಣೇಶೋತ್ಸವಕ್ಕೆ ಮೊದಲ ಬಾರಿಗೆ ಸ್ಥಳ ಬಾಡಿಗೆ ವಿಧಿಸುವ ಮೂಲಕ ಆಶ್ಚರ್ಯ ಮೂಡಿಸಿತ್ತು. ಅನ್ನದಾನ ಪ್ರಭು ಎಂದೇ ಹೆಸರಾಗಿರುವ ಕಿಲ್ಲೆ ಮೈದಾನದ ಗಣಪ ಕಾರಣಿಕ ಗಣಪನೆಂದೇ ಖ್ಯಾತಿಯಾಗಿದ್ದು, ಈ ಗಣೇಶೋತ್ಸವದಲ್ಲಿ ಸಹಸ್ತ್ರಾರು ಮಂದಿ ಜಾತಿ-ಮತ-ಪಕ್ಷ ಬೇಧವಿಲ್ಲದೆ ಪಾಲ್ಗೊಳ್ಳುತ್ತಿದ್ದಾರೆ. ಈ ಗಣೇಶನ ಮುಂದೆ ಪ್ರಾರ್ಥಿಸಿಕೊಳ್ಳುವ ಭಕ್ತರ ಪ್ರಾರ್ಥನೆ ಫಲಪ್ರದವಾಗುತ್ತದೆ ಎಂಬ ಪ್ರತೀತಿ ಇದ್ದು, ನಗರಸಭೆಯ ಶುಲ್ಕ ವಿಧಿಸುವ ಕ್ರಮಕ್ಕೆ ಭಕ್ತ ವಲಯದಿಂದ ಅಸಮಾಧಾನ ವ್ಯಕ್ತವಾಗಿತ್ತು. ಕಳೆದ ವರ್ಷದ ಗಣೇಶೋತ್ಸವ ಆಚರಣೆಗೆ ಮುನ್ನ ಪುತ್ತೂರು ಕಿಲ್ಲೆ ಮೈದಾನದ ಸಂತೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂಸುವ ವಿವಾದ ಎದ್ದಿತ್ತು. ಇದು ಆಡಳಿತ ವ್ಯವಸ್ಥೆಗೆ ನುಂಗಲಾಗದ ತುತ್ತಾಗಿ ಪರಿಣಮಿಸಿತ್ತು. ಆ ಸಂದರ್ಭದಲ್ಲಿ ಕಿಲ್ಲೆ ಮೈದಾನದ ಗಣಪ ಆಡಳಿತ ವ್ಯವಸ್ಥೆಗೆ ಮುನಿದನೇ ಎಂಬ ಮಾತು ಕೇಳಿ ಬಂದಿತ್ತು. ಇದೀಗ ಆಡಳಿತ ನಡೆಸಿದ ಮಂದಿಗೆ ಈ ಬಾರಿಯ ಚುನಾವಣೆಯಲ್ಲಿ ಅವಕಾಶವೇ ಇಲ್ಲದಾಗಿರುವುದು ಇನ್ನೊಂದು ಆಶ್ಚರ್ಯಕರ ಸಂಗತಿ ಎನ್ನಬಹುದು. ಕಿಲ್ಲೆ ಮೈದಾನದ ಗಣೇಶನ ಆಚರಣೆಗೆ ಸ್ಥಳ ಶುಲ್ಕ ವಿಧಿಸುವ ನೀತಿ ಆರಂಭಿಸಿರುವ ಆಡಳಿತ ವ್ಯವಸ್ಥೆಯ ಮಂದಿ ಕಳೆದ ಎರಡೂ ವರ್ಷಗಳಲ್ಲಿಯೂ ಆಶ್ಚರ್ಯಕರ ರೀತಿಯಲ್ಲಿ ವಿಘ್ನ ಅನುಭವಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.ಕಾಂಗ್ರೆಸ್ ಒಳಜಗಳದ ಪರಿಣಾಮವಾಗಿ ಈ ಬಾರಿಯ ಚುನಾವಣೆಯಲ್ಲಿ ನಗರಸಭೆಯಲ್ಲಿ ಆಡಳಿತ ನಡೆಸಿದ ಅಧ್ಯಕ್ಷೆ ಜಯಂತಿ ಬಲ್ನಾಡು, ಆಡಳಿತ ಪಕ್ಷದ ಹಿರಿಯ ನಾಯಕ ಎಚ್.ಮಹಮ್ಮದ್ ಆಲಿ ಸಹಿತ 8 ಮಂದಿ ಹಾಲಿ ಸದಸ್ಯರು ಸ್ಪರ್ಧಿಸುವ ಅವಕಾಶದಿಮದಲೇ ವಂಚಿತರಾಗಿದ್ದಾರೆ. ಕಾಂಗ್ರೆಸ್ ಎಲ್ಲಾ 31ಸ್ಥಾನಗಳಿಗೆ ಸ್ಪರ್ಧಿಸಿದ್ದರೂ ಕೇವಲ 5 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿ ಹೀನಾಯ ಸ್ಥಿತಿಗೆ ತಲುಪಿದೆ. ಹಾಲಿ ಅಧ್ಯಕ್ಷೆ ಜಯಂತಿ ಬಲ್ನಾಡು , ಹಿರಿಯ ಸದಸ್ಯ ಮಹಮ್ಮದ್ ಆಲಿ ಸಹಿತ ಹಾಲಿ ಸದಸ್ಯರಿಗೆ ಗೆಲ್ಲುವ ಅವಕಾಶಗಳಿದ್ದರೂ, ಸ್ಪರ್ಧಿಸುವ ಅವಕಾಶವೇ ಸಿಗದಿರುವುದು ಆಶ್ಚರ್ಯಕರ ಬೆಳವಣಿಗೆ ಎಂದೇ ಹೇಳಬಹುದು. 

ವರದಿ: ಪ್ರವೀಣ್ ಪುತ್ತೂರು

Related posts

Leave a Reply