Header Ads
Header Ads
Breaking News

ಕುಂದಾಪುರದಲ್ಲಿ ಸ್ಥಾಪಿತವಾದ ರಕ್ತನಿಧಿ ಕೇಂದ್ರ

ಕುಂದಾಪುರ: ಕಳೆದ ನಾಲ್ಕು ವರ್ಷಗಳಿಂದ ಕುಂದಾಪುರದಲ್ಲಿ ಸ್ಥಾಪಿತವಾದ ರಕ್ತನಿಧಿ ಕೇಂದ್ರ ಸಾಕಷ್ಟು ಜನರ ಪ್ರಾಣ ಉಳಿಸಿದ್ದು, ಇವೆಲ್ಲಾ ಸಾರ್ವಜನಿಕರ ಸಹಕಾರದಿಂದ ಸಾಧ್ಯವಾಗಿದೆ. ರಕ್ತದಾನದ ಮಹತ್ವ ಅರಿತು ಜನರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಇಂತಹ ಶಿಬಿರದಲ್ಲಿ ಪಾಲ್ಗೊಂಡು ಪ್ರಾಣ ಉಳಿಸುವ ಕಾರ್ಯದಲ್ಲಿ ಕೈಜೋಡಿಸಬೇಕು. ಆ ನಿಟ್ಟಿನಲ್ಲಿ ಡಿವೈಎಫ್‌ಐ ಆಯೋಜಿಸಿದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಒಂದು ಅತ್ಯುತ್ತಮವಾದ ಕಾರ್ಯಕ್ರಮ. ರಕ್ತದಾನಕ್ಕಿಂತ ದೊಡ್ಡ ಕಾರ್ಯ ಬೇರಾವುದು ಇಲ್ಲ ಎಂದು ರೆಡ್ ಕ್ರಾಸ್ ಸಂಸ್ಥೆಯ ಜಯಕರ ಶೆಟ್ಟಿ ಹೇಳಿದರು.

ಅವರು ಆದಿತ್ಯವಾರ ಬೆಳಿಗ್ಗೆ ಕುಂದಾಪುರ ಬ್ಲಡ್ ಬ್ಯಾಂಕ್‌ನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿ ಕುಂದಾಪುರ ಹಾಗೂ ಲಯನ್ಸ್ ಸಹಕಾರದೊಂದಿಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಫ್‌ಐ) ಕುಂದಾಪುರ ತಾಲೂಕು ಸಮಿತಿ ಆಯೋಜಿಸಿದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ 53 ಬಾರಿ ರಕ್ತದಾನ ಮಾಡಿ ಹಲವು ಜೀವ ಉಳಿಸಿದ ರಕ್ತದಾನಿ, ಡಿವೈಎಫ್‌ಐ ಮಾಜಿ ಮುಖಂಡ ಸುಧಾಕರ ಕಾಂಚನ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾಕರ್ ಕಾಂಚನ್, ಹಿಂದೆ ಡಿವೈಎಫ್‌ಐ ತಾಲೂಕು ಅಧ್ಯಕ್ಷನಾಗಿದ್ದಾಗ ನಿರಂತರವಾಗಿ ಏಳು ವರ್ಷ ಭಗತ್‌ಸಿಂಗ್ ಜನ್ಮ ದಿನ ಹಾಗೂ ಹುತಾತ್ಮ ದಿನದಂದು ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದೆವು. ರಕ್ತದಾನಿಗಳ ಕೊರತೆ ಇದೆ. ರಕ್ತವನ್ನು ಪಡೆಯುವವರ ಸಂಖ್ಯೆಯೂ ಕಡಿಮೆಯಾಗಿಲ್ಲ. ತುರ್ತು ಸಂದರ್ಭಗಳಲ್ಲಿ ರಕ್ತಕ್ಕಾಗಿ ನಿರಂತರವಾಗಿ ಬೇಡಿಕೆ ಬರುತ್ತಿದೆ. ಇಲ್ಲಿಂದ ಬೆಂಗಳೂರಿನ ತನಕವೂ ರಕ್ತದ ಅವಶ್ಯಕತೆ ಇದ್ದಾಗ ಸಹಾಯ ಮಾಡಿದ್ದೇವೆ. ಡಿವೈಎಫ್‌ಐನ ಈ ಕಾರ್ಯ ನಿರಂತರವಾಗಲಿ ಎಂದರು.

ಈ ವೇಳೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಶಿವರಾಮ್ ಶೆಟ್ಟಿ, ಗಣೇಶ್ ಆಚಾರ್ಯ, ಡಾ. ಮಲ್ಲಿ, ಡಾ. ಸೋನಿ ಹಾಗೂ ಲಯನ್ಸ್‌ನ ಡಾ. ಶಿವಕುಮಾರ್, ನವೀನ್ ಕುಮಾರ್, ಡಿವೈಎಫ್‌ಐ ರಕ್ತನಿಧಿ ಸಂಚಾಲಕ ಗಣೇಶ್‌ದಾಸ್, ಡಿವೈಎಫ್‌ಐನ ರವಿ ವಿ.ಎಂ, ರಾಜಾ ಬಿಟಿಆರ್, ಗಣೇಶ್ ಕಲ್ಲಾಗರ, ಮಂಜುನಾಥ ಶೋಗನ್ ಅಕ್ಷಯ್ ವಡೇರಹೋಬಳಿ, ಗಣೇಶ್ ಮೆಂಡನ್ ಮೊದಲಾದವರು ಇದ್ದರು.

ಡಿವೈಎಫ್‌ಐ ಕಾರ್ಯದರ್ಶಿ ರಾಜೇಶ್ ವಡೇರಹೋಬಳಿ ಸ್ವಾಗತಿಸಿದರು. ಡಿವೈಎಫ್‌ಐ ಮುಖಂಡ ಸುಬ್ರಹ್ಮಣ್ಯ ಆಚಾರ್ ಪಡುಕೋಣೆ ನಿರೂಪಿಸಿ ಧನ್ಯವಾದವಿತ್ತರು.

Related posts

Leave a Reply