
ಕುಂದಾಪುರ: ಉಡುಪಿ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಆದಿಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ತಾಲೂಕಿನ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಹಾಗೂ ಶುಕ್ರವಾರ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವಕ್ಕಾಗಿ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದಾರೆ.
ಮಕರ ಸಕ್ರಾಂತಿಯಂದು ಬ್ರಹ್ಮಲಿಂಗೇಶ್ವರನನ್ನು ನಂಬಿರುವ ಕುಟುಂಬದ ಕನಿಷ್ಠ ಒಬ್ಬರು ಸದಸ್ಯರಾದರೂ ಜಾತ್ರೆಯ ದಿನದಂದು ಬಂದು ಶ್ರೀ ದೇವರಿಗೆ ಪೂಜೆ ಸಲ್ಲಿಸುವುದು ಈ ಭಾಗದ ವಾಡಿಕೆಯಾಗಿದೆ. ಜಾತ್ರೆಯಂದು ದೇವಸ್ಥಾನಕ್ಕೆ ಆಗಮಿಸುವ ಭಕ್ತರು ತಲೆಯ ಮೇಲೆ ಹೂವು ಹಾಗೂ ಹಣ್ಣುಕಾಯಿ ಹೊತ್ತುಕೊಂಡು ದೇವರ ದರ್ಶನ ಮಾಡಿ ಅರ್ಚಕರು ನೀಡುವ ಪ್ರಸಾದವನ್ನು ಮನೆಗೆ ಕೊಂಡೊಯ್ಯವುದು ಇಲ್ಲಿನ ಸಂಪ್ರದಾಯ. ಹೆಮ್ಮಾಡಿ ಹಾಗೂ ಆಸುಪಾಸಿನಲ್ಲಿ ಬೆಳೆಯುವ ಹಳದಿ ಬಣ್ಣದ ಚಿಕ್ಕ ಗಾತ್ರದ ಸೇವಂತಿಗೆ ಹೂವುಗಳನ್ನು ಬ್ರಹ್ಮಲಿಂಗೇಶ್ವರನಿಗೆ ಮೊದಲು ಅರ್ಪಿಸಬೇಕು ಎನ್ನುವ ವಾಡಿಕೆ ಇರುವುದರಿಂದ ಸೇವಂತಿಗೆ ಬೆಳೆದ ಬೆಳೆಗಾರರು ಶ್ರೀ ದೇವರಿಗೆ ಸೇವಂತಿಗೆ ಮಾಲೆಯನ್ನು ಅರ್ಪಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.
ಸಾಕಷ್ಟು ವಿಜೃಂಭಣೆಯಿಂದ ನಡೆಯುತ್ತಿದ್ದ ಮಾರಣಕಟ್ಟೆಯ ಮಕರ ಸಂಕ್ರಾಂತಿ ಈ ಬಾರಿ ಕೋವಿಡ್ ಹಿನ್ನೆಲೆ ಸರಳವಾಗಿ ನಡೆಯುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲೂ ಕೂಡ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ಜನದಟ್ಟಣೆಯನ್ನು ತಡೆಯಲು ಮಧ್ಯಾಹ್ನ ಹನ್ನೆರಡು ಗಂಟೆಗೆ ನಡೆಯುತ್ತಿದ್ದ ಮಹಾಪೂಜೆ ಬೆಳಗ್ಗೆ ಎಂಟು ಗಂಟೆಗೆ ನೆರವೇರಿಸಲಾಗಿದೆ. ಉಡುಪಿ, ಕಾರ್ಕಳ, ಬ್ರಹ್ಮಾವರ, ಪಡುಬಿದಿರೆ ಸೇರಿದಂತೆ ಜಿಲ್ಲೆಯ ತೆಂಕು ಭಾಗದ ಸಾಕಷ್ಟು ಜನರು ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ದೇವರ ಜಾತ್ರೆಗೆ ಆಗಮಿಸುವುದರಿಂದ ಅವರಿಗೆ ಅನುಕೂಲವಾಗಲೆಂದು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸುತ್ತಿದ್ದು ಈ ಬಾರಿ ಯಾವುದೇ ವಿಶೇಷ ಬಸ್ಗಳ ವ್ಯವಸ್ಥೆ ಇರಲಿಲ್ಲ. ಮಕರ ಸಂಕ್ರಾಂತಿಯಂದು ಸರಿಸುಮಾರು ನಲವತ್ತು ಸಾವಿರ ಭಕ್ತರು ಅನ್ನದಾನದಲ್ಲಿ ಪಾಲ್ಗೊಳ್ಳುತ್ತಿದ್ದು ಕೋವಿಡ್ ಹಿನ್ನೆಲೆ ಕಡಿಮೆ ಸಂಖ್ಯೆಯಲ್ಲಿ ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ ಜಾತಿ ಭೇದವಿಲ್ಲದೇ ಮಹಿಳೆಯರು, ಪುರುಷರು ಮಕ್ಕಳೆನ್ನದೇ ಸಾವಿರಾರು ಮಂದಿ ಕೆಂಡದ ರಾಶಿಯನ್ನು ತುಳಿಯುವ ಮೂಲಕ ತಮ್ಮ ಹರಕೆಯನ್ನು ತೀರಿಸುವ ಪರಿಪಾಠವಿದ್ದು, ಈ ಬಾರಿ ಸಾರ್ವಜನಿಕರಿಗೆ ಕೆಂಡಸೇವೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಿಲ್ಲ. ಉಳಿದಂತೆ ದೇವರ ದರ್ಶನ, ವಿವಿಧ ಸೇವೆಗಳು, ಮಂಡಲಗಳು ಸಂಪ್ರದಾಯದಂತೆ ನಡೆಸಲಾಗುತ್ತಿದೆ.