Header Ads
Breaking News

ಕುಂದಾಪುರದ ಸರ್ಕಾರಿ ಆಸ್ಪತ್ರೆ ಕೋವಿಡ್-19ಗೆ ಮೀಸಲು ಇಂದಿನಿಂದ ಸೇವೆಗೆ ಸಜ್ಜು

ಕುಂದಾಪುರ: ಕೆಲ ತಿಂಗಳ ಹಿಂದಷ್ಟೇ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‍ನಿಂದ ಕೊಡುಗೆಯಾಗಿ ನೀಡಿರುವ ಶ್ರೀ ಲಕ್ಷ್ಮೀ ಸೋಮ ಬಂಗೇರ ಸ್ಮಾರಕ ಹೆರಿಗೆ ವಾರ್ಡ್ ಅನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ.

ಹೊರರಾಜ್ಯಗಳಿಂದ ಬಂದವರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇವರಿಗೆಲ್ಲಾ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಎಲ್ಲಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಂಡಿದೆ. ಸದ್ಯ ಅಸ್ಪತ್ರೆಯ ಲಕ್ಷ್ಮೀ ಸೋಮ ಬಂಗೇರ ಸ್ಮಾರಕ ವಾರ್ಡ್‍ನಲ್ಲಿ ಹೆರಿಗಾಗಿ ಸೇರ್ಪಡೆಗೊಂಡು ಆರೈಕೆ ಪಡೆದುಕೊಳ್ಳುತ್ತಿರುವವರನ್ನು, ಈ ಹಿಂದೆ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‍ನಿಂದ ಕೊಡುಗೆಯಾಗಿ ನೀಡಿದ್ದ ಹಳೆಯ ವಾರ್ಡ್‍ಗೆ ಸ್ಥಳಾಂತರಿಸಲಾಗಿದೆ.

ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಜಿ. ಜಗದೀಶ್, 120 ಹಾಸಿಗೆಗಳುಳ್ಳ ಕೋವಿಡ್-19 ಆಸ್ಪತ್ರೆ ಇಂದಿನಿಂದಲೇ ಸೇವೆಗೆ ಸಜ್ಜುಗೊಂಡಿದೆ. ವೈದ್ಯರು ದಾದಿಯರು ಕೊರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸಲಿದ್ದು, ಹೆಚ್ಚುವರಿ ಸಿಬ್ಬಂದಿಗಳು ಬೇಕಾದಲ್ಲಿ ತಿಳಿಸುವಂತೆ ಈಗಾಗಲೇ ಆಸ್ಪತ್ರೆಯ ವೈದ್ಯಾಧಿಕಾರಿಯವರಿಗೆ ಸೂಚನೆ ಕೊಟ್ಟಿದ್ದೇನೆ. ಖಾಸಗಿ ವೈದ್ಯರನ್ನೂ ಬಳಸಿಕೊಳ್ಳಲು ಈಗಾಗಲೇ ಮಾತುಕತೆ ನಡೆಸಿದ್ದೇವೆ. ಕಾರ್ಕಳದಲ್ಲಿಯೂ 100 ಹಾಸಿಗೆಗಳುಳ್ಳ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ್ದೇವೆ ಎಂದರು.

ಹೆರಿಗೆ ಆಸ್ಪತ್ರೆಯಲ್ಲಿದ್ದ ಗರ್ಭಿಣಿ ಹಾಗೂ ಬಾಣಂತಿಯರನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಕೋವಿಡ್ ಆಸ್ಪತ್ರೆಗೆ ಪೂರಕ ವಾತಾವರಣವನ್ನು ಕಲ್ಪಿಸಿದ್ದಾರೆ. ಬೆಳಿಗ್ಗೆಯಿಂದ ಸಂಜೆಯೊಳಗೆ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಈ ತಂಡ ಜಿಲ್ಲಾಧಿಕಾರಿವರ ಪ್ರಶಂಸೆಗೆ ಪಾತ್ರವಾಗಿದೆ.

Related posts

Leave a Reply

Your email address will not be published. Required fields are marked *