Header Ads
Header Ads
Breaking News

ಕುಂದಾಪುರ:ಹಳೆ ಅಳಿವೆಯಲ್ಲಿ ತೀವ್ರ ಕಡಲ್ಕೊರೆತ ತಡೆಗೋಡೆಯ ಕಲ್ಲುಬಂಡೆಗಳು ನೀರುಪಾಲು

ಕುಂದಾಪುರದ ಕೋಟೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿ ಹಳೆ ಅಳಿವೆಯಲ್ಲಿ ತೀವ್ರ ಕಡಲ್ಕೊರೆತ ಸಂಭವಿಸಿದೆ. ಸೋಮವಾರ ಮಧ್ಯಾಹ್ನ ಮನೆ ಅಂಗಳಕ್ಕೂ ನೀರು ನುಗ್ಗಿದ್ದು, ಕಡಲತೀರ ನಿವಾಸಿಗಳಿಗೆ ಆತಂಕ ಮೂಡಿಸಿದೆ.ಕಳೆದ ಮೂರು ದಿನಗಳಿಂದ ಕೋಡಿ ಪರಿಸರದಲ್ಲಿ ಕಡಲ ಅಬ್ಬರ ಹೆಚ್ಚಾಗಿದೆ. ಮಧ್ಯಾಹ್ನದ ಹೊತ್ತಿಗೆ ಅಲೆಗಳು ಉಕ್ಕಿ ಸಮುದ್ರತೀರದಲ್ಲಿ ಹಾಕಿದ ತಡೆಗೋಡೆ ನೀರುಪಾಲಾಗಿದ್ದು, ಮನೆಯಂಗಳಕ್ಕೆ ನೀರು ನುಗ್ಗಿದೆ. ಅಲೆಯ ರಭಸಕ್ಕೆ ತಡೆಗೋಡೆಗೆ ಹಾಕಲಾಗಿದ್ದ ಬಂಡೆಕಲ್ಲಿನ ಸಂಧುಗಳಲ್ಲಿ ನೀರು ನುಗ್ಗಿ ಡಾಮರ್ ರಸ್ತೆ ಒಳಭಾಗದಲ್ಲಿ ಟೊಳ್ಳು ಕೊರೆದಿದ್ದು, ರಸ್ತೆಯೂ ಕೂಡಾ ಅಪಾಯದಂಚಿನಲ್ಲಿದೆ. ಎಂ.ಕೋಡಿಯಲ್ಲೂ ಅಲೆಗಳ ಅಬ್ಬರವಿದ್ದು, ತಡೆಗೋಡೆ ಒಂದು ಬದಿ ಸಮುದ್ರಕ್ಕೆ ಜಾರಿಕೊಂಡಿದೆ.
ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳಿಗೂ ಕಡಲ್ಕೊರೆತ ಅಪಾಯ ತಂದಿದ್ದು, ಸಮೀಪದಲ್ಲೇ ಇರುವ ಟ್ರಾನ್ಸ್‌ಫಾರಮ್ ಕೂಡಾ ಅಪಾಯದಲ್ಲಿದೆ. ಕಳೆದ ಹತ್ತು ವರ್ಷದ ಹಿಂದೆ ಕಡಲ್ಕೊರೆತ ತೀವ್ರಗೊಂಡು ಅಪಾರ ಹಾನಿಯಾದ ಬಳಿಕ ಈ ಭಾಗದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಇದಾದ ಬಳಿಕ ಸಮುದ್ರದ ಅಲೆ ಮನೆ ಅಂಗಳಕ್ಕೆ ಬಂದಿದೆ. ಕಡಲು ಹೀಗೆ ಮುಂದೆ ಬಂದರೆ ಪರಿಸರದಲ್ಲಿ ೬೦ಕ್ಕೂ ಮಿಕ್ಕಿ ಮನೆಯಿದ್ದು, ಯಾವುದೇ ಕ್ಷಣದಲ್ಲಾದರೂ ಅಪಾಯ ಸಂಭವಿಸಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದಲ್ಲದೇ ತಕ್ಷಣ ಕಡಲ್ಕೊರೆತಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.ಪ್ರಾಕೃತಿಕ ವಿಕೋಪದ ನೋಡೆಲ್ ಅಧಿಕಾರಿ ಕಿರಣ್ ಫೆಡ್ನೇಕರ್, ಎಡ್ಲ್ಯೂ ನಾಗರಾಜ್, ಕಂದಾಯ ನಿರೀಕ್ಷಕ ನರಸಿಂಹ ಕಾಮತ್, ಕೋಟೇಶ್ವರ ಗ್ರಾಮಕರಣಿಕ ದಿನೇಶ್ ಹುದರ್, ಪಿಡಿಓ ರೇಣುಕಾ ಹೆಗ್ಡೆ, ಕುಂದಾಪುರ ಗ್ರಾಮಕರಣಿಕ ಸೋಮಪ್ಪ ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಕಳೆದ ಮೂರು ದಿನಗಳಿಂದ ಹಳೆಅಳಿವೆಯಲ್ಲಿ ಕಡಲ್ಕೊರೆತವಿದ್ದು, ಸೋಮವಾರ ಮಧ್ಯಾಹ್ನ ಏಕಾಏಕಿ ನೀರು ರಸ್ತೆ ದಾಟಿ ಮನೆ ಅಂಗಳಕ್ಕೂ ಬಂದಿದ್ದು, ಸ್ಥಳೀಯ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ಕಡಲ್ಕೊರೆತದ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಗಮನಕ್ಕೆ ತಂದಿದ್ದು, ತುರ್ತು ಕಲ್ಲು ಹಾಕುವ ಮೂಲಕ ತಾತ್ಕಾಲಿಕ ಪರಿಹಾರ ಮಾಡುವ ಭರವಸೆ ನೀಡಿದ್ದಾರೆ. ಕಲ್ಲು ಹಾಕಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಎಸಿ ಸೂಚಿಸಿದ್ದಾರೆ. ಸ್ಥಳದಲ್ಲಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಹಳೆಅಳಿವೆ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರದ ಜರೂರತ್ತಿದೆ.

Related posts

Leave a Reply