Header Ads
Header Ads
Breaking News

ಕುಂದಾಪುರ: ಆಗಲೋ ಈಗಲೋ ಬೀಳುವ ಹಂತದಲ್ಲಿರುವ ಮನೆ .ಮನೆಯ ಮಾಡಿಗೆ ಟರ್ಪಾಲಿನ ಹೊದಿಕೆ.

 ಈಗಲೋ ಆಗಲೋ ಎನ್ನುವ ಸ್ಥಿತಿಯಲ್ಲಿರುವ ಮನೆ, ಮಳೆ ನೀರು ಸಿಡಿದು ತೇವಗೊಳ್ಳುತ್ತಿರುವ ಮಣ್ಣಿನ ಗೋಡೆ, ಕುಸಿದು ಬೀಳುವ ಗೋಡೆಯ ಬುಡದಲ್ಲಿ ಹೆಗ್ಗಣ ಕೊರೆದ ಬಿಲ, ಮನೆಯ ಮಾಡಿಗೆ ಟಾರ್ಪಾಲಿನ ಹೊದಿಕೆ. ಇಡೀ ಮನೆಯ ವಾತಾವರಣ ನೋಡಿದರೆ ಎಂಥವರನ್ನಾದರೂ ಭಯ ಬೀಳಿಸುತ್ತದೆ. ಇಂತಹ ಮನೆಯಲ್ಲಿ ಒಬ್ಬಂಟಿ ಮಹಿಳೆ ಜೀವ ಕೈಯ್ಯಲ್ಲಿ ಹಿಡಿದು ಬದುಕು ಸಾಗಿಸುತ್ತಿದ್ದಾರೆ. ಕುಂದಾಪುರ ನಿವಾಸಿ ಲಕ್ಷ್ಮೀ ದೇವಿ ಪೈಯವರ ಜೀವನ ಶೈಲಿ ನೋಡಿದರೆ ಎಂತವರಿಗೂ ಮರುಕವಾಗದಿರದು. ಕುಂದಾಪುರ ಪುರಸಭೆ ಕೋಡಿ ವಾರ್ಡ್ ಗಡಿಯಾರ ಹಿತ್ಲುವಿನ ನಿವಾಸಿ ಲಕ್ಷ್ಮೀದೇವಿ ಪೈ ಯಾನೆ ಪ್ರೇಮಲತಾ ಎಂಬ ಮಹಿಳೆ ಬೀಳುವ ಹಂತದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬೇರೆಯವರ ಮನೆಯಲ್ಲಿ ಮನೆ ಕೆಲಸ ಮಾಡಿ ಮನೆಗೆ ಬಂದರೆ ಮನೆ ಎಲ್ಲಿ ಕುಸಿಯುತ್ತದೆಯೋ ಎಂಬ ಭಯದಲ್ಲಿ ರಾತ್ರಿ ಕಳೆಯಬೇಕು. ಮಳೆ ನೀರು ಒಳ ಬಾರದಂತೆ ಮಾಡಿಗೆ ಟಾರ್ಪಲ್ ಹೊದಿಸಿದ್ದು, ಮಳೆ ನೀರು ಮನೆ ಒಳಗೆ ಜಿನಗದಿದ್ದರೂ, ಗೋಡೆಗೆ ಸಿಡಿದು ಕುಸಿಯಲಾರಂಭಿಸಿದೆ. ವಿದ್ಯುತ್ ಇಲ್ಲದೆ ಚಿಮಣಿ ದೀಪದಲ್ಲಿ ಹಾವು, ಹೆಗ್ಗಣ, ಚೇಳುಗಳೊಂದಿಗೆ ವಾಸಿಸುತ್ತಿರುವ ಲಕ್ಷ್ಮೀದೇವಿ ಅಂಗೈಯಲ್ಲಿ ಜೀವ ಹಿಡಿದು ಬದುಕುತ್ತಿದ್ದಾರೆ. ಜಿಎಸ್ಬಿ ಸಮಾಜಕ್ಕೆ ಸೇರಿದ ಲಕ್ಷ್ಮೀದೇವಿಯವರ ಹುಟ್ಟೂರು ಮೂಡಬಿದಿರೆ. ತವರು ಮನೆಯಲ್ಲಿ ಸುಖ ಕಂಡಿದ್ದು ಬಿಟ್ಟರೆ ವೈವಾಹಿಕ ಜೀವನ ಕಷ್ಟಕೋಟಲೆಗಳ ಸರಮಾಲೆ. ಮಂಜುನಾಥ ಪೈ ಅವರನ್ನು ವಿವಾಹವಾದ ಬಳಿಕ ಲಕ್ಷ್ಮೀ ಕೋಡಿಯಲ್ಲಿ ಪತಿಯ ಜೊತೆ ನೆಲೆಸಿದರು. ಪತಿ ಮೊದಲು ಅಡುಗೆ ವೃತ್ತಿಮಾಡಿಕೊಂಡಿದ್ದು, ನಂತರ ಖಾಸಗಿ ಅಂಗಡಿಯೊಂದರ ಸೆಕ್ಯುರೆಟಿ ಕೆಲಸ ಮಾಡುತ್ತಿದ್ದು, ಇವರಿಬ್ಬರ ಜೀವನ ತೃಪ್ತಿದಾಯಕವಾಗಿ ಸಾಗಿತ್ತು. ಅಷ್ಟರಲ್ಲಾಗಲೇ ಮಂಜುನಾಥ ಪೈ ಅವರಿಗೆ ಕಾಡಿದ ಅನಾರೋಗ್ಯ ಅವರ ಕೆಲಸವನ್ನೇ ನುಂಗಿ ಹಾಕಿತು. ಎಂಟು ವರ್ಷ ಮಂಜುನಾಥ ಪೈ ಕುರ್ಚಿಯಲ್ಲಿ ಬಂಧಿಯಾದರು. ಪತಿಯ ಜವಾಬ್ದಾರಿ ಕೂಡಾ ಮಕ್ಕಳಿಲ್ಲದ ಲಕ್ಷ್ಮೀದೇವಿ ಮೇಲೆ ಬಿತ್ತು. ಆದರೂ ಕಿಂಚಿತ್ತೂ ದೃತಿಗೆಡದೆ ಬೀಡಿಕಟ್ಟಿ, ಯಾರ್‍ಯಾರದ್ದೋ ತೋಟದಲ್ಲಿ ಬಿದ್ದ ತೆಂಗಿನ ಮಡಿಲು ಆಯ್ದು ಹಿಡಿಸೂಡಿ ಕಟ್ಟಿ ಜೀವನ ನಿರ್ವಹಣೆ ಜೊತೆ ಪತಿಯ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. ಮೂರು ವರ್ಷದ ಹಿಂದೆ ಪತಿ ನಿಧನರಾಗಿದ್ದು, ಲಕ್ಷ್ಮೀ ಕುಂದಾಪುರದಲ್ಲಿ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.  ಲಕ್ಷ್ಮೀ ದೇವಿ ಇದೀಗ ವಾಸ ಮಾಡುತ್ತಿರುವ ಜಾಗ ಒಂದಿಷ್ಟು ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಹೀಗಾಗಿ ಸರ್ಕಾರದಿಂದ ಮನೆ ಮಂಜೂರಾಗುವುದು ತಡೆಹಿಡಿಯಲಾಗಿದೆ. ಇವರ ಮನೆ ಇರುವ ಜಾಗ ಲಕ್ಷ್ಮೀ ಪತಿಯ ರಕ್ತ ಸಂಬಂಧಿಯದಾಗಿದ್ದು, ಅವರು ಮನೆ ಕಟ್ಟಿಕೊಳ್ಳುಲು ಒಪ್ಪಿಗೆ ಕೊಡುತ್ತೇನೆ ಎಂದಿದ್ದಾರೆ. ಇನ್ನಾದರೂ ಪುರಸಭೆಯಿಂದ ಲಕ್ಷ್ಮೀದೇವಿ ಪೈ ಅವರಿಗೆ ಮನೆ ಒದಗಿಸುವ ಎಲ್ಲಾ ಪ್ರಯತ್ನ ನಡೆಸಲಿ. ಲಕ್ಷ್ಮೀದೇವಿ ದೊಡ್ಡ ಮನೆಯೇನೊ ಬಯಸುತ್ತಿಲ್ಲ. ವೃದ್ದಾಪ್ಯದಲ್ಲಿ ಚಿಕ್ಕದಾದರೂ ಚೊಕ್ಕ ಮನೆಯ ಕನಸು ಕಾಣುತ್ತಿದ್ದಾರೆ.  ಇದ್ದವರು ಇನ್ನಷ್ಟು ಮತ್ತಷ್ಟು ಎನ್ನುವ ಹಪಾಹಪಿಗೆ ಬಿದ್ದು ದಿನೇ ದಿನೇ ಆಕಾಶದೆತ್ತರಕ್ಕೆ ಬೆಳೆಯುತ್ತಿದ್ದಿದ್ದರೆ, ಇಲ್ಲದವರು ಮತ್ತಷ್ಟು ಕುಸಿದು ಪಾತಾಳಕ್ಕೆ ಇಳಿಯುತ್ತಿರುವುದು ವಿಪರ್ಯಾಸ! ಸರ್ಕಾರದಿಂದ ವಿಧವಾ ವೇತನ ಒಂದು ಬರುತ್ತಿರುವುದೇ ಲಕ್ಷ್ಮೀದೇವಿಗೆ ಸಿಕ್ಕ ಸರ್ಕಾರಿ ಭಾಗ್ಯ. ಸರ್ಕಾರದ ಹತ್ತಾರು ಭಾಗ್ಯಗಳು ಕೂಡಾ ಬಡವರ ನೆರವಿಗಿಲ್ಲ ಎನ್ನುವುದಕ್ಕೆ ಲಕ್ಷ್ಮೀದೇವಿ ಬದುಕು ಜ್ವಲಂತ ಸಾಕ್ಷಿ.ಬಡವರಿಗಾಗಿಯೇ ಸರ್ಕಾರ ಹತ್ತಾರು ಭಾಗ್ಯಗಳ ಕರುಣಿಸಿದ್ದು, ಲಕ್ಷ್ಮೀದೇವಿಗೆ ಸರ್ಕಾರದಿಂದ ಮನೆ ಭಾಗ್ಯ ಸಿಗುತ್ತಾ ಎನ್ನುವುದೇ ಪ್ರಶ್ನಾರ್ಥಕವಾಗಿದೆ.

Related posts

Leave a Reply