Header Ads
Header Ads
Breaking News

ಕುಂದಾಪುರ: ಕಾಳಾವರದಲ್ಲಿ ಸೆರೆಯಾಯ್ತು ಗಂಡು ಚಿರತೆ

ಕುಂದಾಪುರ: ಕುಂದಾಪುರ ತಾಲೂಕಿನ ಕಾಳಾವರದ ಕಕ್ಕೇರಿ ಆಸುಪಾಸಿನ ಜನವಸತಿ ಪ್ರದೇಶದತ್ತ ಆಹಾರವರಸಿ ಬಂದು ಆತಂಕ ಮೂಡಿಸಿದ್ದ ಮತ್ತೊಂದು ಚಿರತೆ ಗುರುವಾರ ತಡರಾತ್ರಿ ಅರಣ್ಯ ಇಲಾಖೆಯಿಟ್ಟ ಬೋನಿಗೆ ಬಿದ್ದಿದೆ. ಕಳೆದ ಶುಕ್ರವಾರ ತಡರಾತ್ರಿ ಹೆಣ್ಣು ಚಿರತೆಯೊಂದು ಬೋನಿಗೆ ಬಿದ್ದಿತ್ತು.

ಕಾಳಾವರ ಕಕ್ಕೇರಿ ಸಮೀಪದ ವಾರಾಹಿ ಕಾಲುವೆ ಬಳಿಯ ಹಾಡಿ ಪ್ರದೇಶದಲ್ಲಿ ಹಲವಾರು ಸಮಯಗಳಿಂದ ಚಿರತೆಗಳು ಓಡಾಟವನ್ನು ಜನರು ಪ್ರತ್ಯಕ್ಷವಾಗಿ ಕಂಡಿದ್ದರು. ಮನೆಯ ನಾಯಿಗಳನ್ನು ಹಿಡಿಯಲು ಚಿರತೆಗಳು ಜನನಿಬೀಡ ಪ್ರದೇಶದತ್ತವೂ ಸುಳಿದಾಡುತ್ತಿತ್ತು. ಜನರು ನೀಡಿದ ಮಾಹಿತಿಯಂತೆ ಸೂಕ್ತ ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಳೆದೆರಡು ವಾರಗಳಿಂದ ಬೋನ್ ಇಟ್ಟು ನಾಯಿ ಕಟ್ಟಿ ಚಿರತೆ ಸೆರೆಗೆ ಮುಂದಾಗಿದ್ದರು.

ಬೋನಿಟ್ಟು ಚಿರತೆ ಸೆರೆಗೆ ಮುಂದಾದ ಇಲಾಖೆಗೆ ಕಳೆದ ಶುಕ್ರವಾರ ತಡರಾತ್ರಿ ಸ್ಥಳೀಯರು ಕರೆ ಮಾಡಿ ಚಿರತೆ ಬೋನಿಗೆ ಬಿದ್ದ ಬಗ್ಗೆ ತಿಳಿಸಿದ್ದು ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು ಬೋನಿಗೆ ಬಿದ್ದ ೪-೫ ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ವನ್ಯಜೀವಿ ಅಭಯಾರಣ್ಯಕ್ಕೆ ಬಿಟ್ಟುಬಂದಿದ್ದರು. ಇಂದು ನ.16 (ಶುಕ್ರವಾರ) ಬೆಳಿಗ್ಗೆ ಬೋನಿನಲ್ಲಿ ಚಿರತೆ ಕಂಡ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಸೆರೆಯಾದ ಆರೇಳು ವರ್ಷ ಪ್ರಾಯದ ಗಂಡು ಚಿರತೆಯನ್ನು ವನ್ಯಜೀವಿ ವಲಯಕ್ಕೆ ರವಾನಿಸಿದ್ದಾರೆ.

ಡಿ.ಎಫ್.ಒ ಪ್ರಭಾಕರನ್ ಮಾರ್ಗದರ್ಶನದಲ್ಲಿ ಎ.ಸಿ.ಎಫ್ ಲೋಹಿತ್, ಆರ್.ಎಫ್.ಒ ಪ್ರಭಾಕರ್ ಕುಲಾಲ್, ಉಪವಲಯ ಅರಣ್ಯಾಧಿಕಾರಿ ಉದಯ್, ಅರಣ್ಯ ರಕ್ಷಕರಾದ ಶಂಕರ್ ಖಾರ್ವಿ, ವಿ. ಮಂಜು, ಸೋಮಶೇಖರ್, ಬಸವರಾಜ್, ಇಲಾಖೆ ವಾಹನ ಚಾಲಕ ಅಶೋಕ್ ಈ ಕಾರ್ಯಾಚರಣೆಯಲ್ಲಿದ್ದರು.

Related posts

Leave a Reply