Header Ads
Breaking News

ಕುಂದಾಪುರ ತಾಲೂಕು ಪಂಚಾಯತಿ ಜಮಾಬಂಧಿ ಸಭೆ : ಗ್ರಾಪಂ ಪಿಡಿಒ ಕಾರ್ಯದರ್ಶಿಗಳ ಗೈರಿಗೆ ಜನಾಕ್ರೋಶ

ಕುಂದಾಪುರ: ತಾಲೂಕು ಪಂಚಾಯಿತಿ ಹಿಂದಿನ ಇಒ 86 ಸಾವಿರ ಮನೆ ಬಾಡಿಗೆ ಉಳಿಸಿಕೊಂಡಿದ್ದರೂ ವಸೂಲಿಗೆ ಮಾಡಿಲ್ಲ ಏಕೆ? ಜಮಾಬಂಧಿ ಸಭೆ ನಡೆಸುವ ಬಗ್ಗೆ ಮಾಹಿತಿ ನೀಡದೆ ಗೌಪ್ಯವಾಗಿ ನಡೆಸುವ ಉದ್ದೇಶ ಏನು? ಕಳೆದ 13 ವರ್ಷದಿಂದ ಜಮಾಬಂದಿ ನಡೆಸದೇ ಇರುವುದಕ್ಕೆ ಕಾರಣ ಏನು?. ಅಧಿಕಾರಿಗಳು ಸಭೆಗೆ ಗೈರಾಗಿದ್ದಾರೆ. ಕಾಟಾಚಾರಕ್ಕೆ ಜಮಾಬಂದಿ ನಡೆಸುವುದು ಸರಿಯಲ್ಲ. ಅಧಿಕಾರಿಗ ಶಾಸಕಾಂಗದ ದಾರಿ ತಪ್ಪಿಸುತ್ತಿದ್ದಾರೆ.. ಅಷ್ಟಕ್ಕೂ ಈ ಎಲ್ಲಾ ಮಾತುಗಳು ಕೇಳಿ ಬಂದಿದ್ದು ಎಲ್ಲಿ ಅಂತೀರಾ ಹಾಗಾದ್ರೆ ಈ ರಿಪೋರ್ಟ್ ನೋಡಿ..

ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುರುವಾರ ನಡೆದ ತಾಪಂ ಜಮಾಬಂಧಿ ಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ಮುಟ್ಟಿಸಿದ ಬಿಸಿಯಿದು..

ತಲ್ಲೂರು ಗ್ರಾಮ ಪಂಚಾಯಿತಿ ಸದಸ್ಯ ಉದಯ ಕುಮಾರ್ ತಲ್ಲೂರು ಮಾತನಾಡಿ, ಜಮಾಬಂಧಿ ಕೇವಲ ಸ್ವಾಗತ, ವಂದನಗೆ ಸೀಮಿತವಾಗಬಾರದು. ತಾಲೂಕು ಪಂಚಾಯಿತಿ ಆಡಳಿತ, ಹಣಕಾಸು, ಖರ್ಚುವೆಚ್ಚಗಳ ಸಾರ್ವಜನಿಕರ ಮುಂದಿಡುವ ಉದ್ದೇಶದಲ್ಲಿ ಜಮಾಬಂಧಿ ನಡೆಸಲಾಗುತ್ತಿದ್ದು, ನಿಯಮಗಳ ಪ್ರಕಾರ ನಡೆಸದೆ ಕಾಟಾಚಾರಕ್ಕೆ ಸಭೆ ಆಯೋಜಿಸಿದಂತೆ ಕಾಣುತ್ತಿದೆ. ಕಳೆದ 13 ವರ್ಷದಿಂದ ತಾಪಂ ಜಮಾಬಂಧಿ ನಡೆಸದೆ ಜನರನ್ನು ಕತ್ತಲಲ್ಲಿಟ್ಟಿದೆ. ತಾಪಂ ನಿರ್ವಹಣೆಯ ಕ್ವಾಟ್ರಸ್‍ಗಳ ಬಾಡಿಗೆ 86 ಸಾವಿರ ಉಳಿಸಿಕೊಂಡಿರುವುದು ಅಚ್ಚರಿ. ಬಾಡಿಗೆ ವಸೂಲಿಗೆ ಏನುಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.ಇದಕ್ಕೆ ಪೂರಕವಾಗಿ ಮಾತನಾಡಿದ ಚಂದ್ರಮ ತಲ್ಲೂರು, ಇಒ ಮನೆ ಬಾಡಿಗೆ 86 ಸಾವಿರ ಅವರ ಸಂಬಳದಲ್ಲಿ ಕಟ್ ಮಾಡಿ ವಸೂಲಿ ಮಾಡಬೇಕು. ತಾಪಂ ಕ್ಷಾಟ್ರಸ್ ಎಷ್ಟಿದೆ ಎಷ್ಟು ಮನೆಯಲ್ಲಿ ಬಾಡಿಗೆ ಇದ್ದಾರೆ. ಯಾರೆಲ್ಲಾ ಬಾಡಿಗೆ ಉಳಿಸಿಕೊಂಡಿದ್ದಾರೆ ಎಂಬ ಲೆಕ್ಕ ಕೇಳಿದರು.

ಹಿಂದೆ ಜಮಾಬಂಧಿ ಏಕೆ ನಡೆದಿಲ್ಲ ಎನ್ನುವ ಮಾಹಿತಿ ಇಲ್ಲ. ಮುಂದೆ ವರ್ಷಕ್ಕೊಮ್ಮೆ ಕ್ರಮಬದ್ಧವಾಗಿ ಜಮಾಬಂಧಿ ನಡೆಸಲಾಗುತ್ತದೆ. ಜಮಾಬಂದಿಯಲ್ಲಿ ಕೇವಲ ಪರಿಶೀಲನೆ ಅಷ್ಟೇ ಅಲ್ಲದೆ ಧನಾತ್ಮಕ ಹಾಗೂ ಋಣಾತ್ಮಕ ವಿಷಯಕ್ಕೂ ಆಧ್ಯತೆ ನೀಡಲಾಗುತ್ತದೆ ಎಂದು ಹೇಳಿದ ಯೋಜನಾ ಆಯೋಗ ನಿರ್ದೇಶಕ ಗುರುದತ್ ಕ್ವಾಟ್ರಸ್‍ಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.

ತಾಪಂ ತೆಕ್ಕೆಯಲ್ಲಿ ಒಟ್ಟು 11 ಮನೆಗಳಿದ್ದು, ಅದರಲ್ಲಿ ಎರಡು ಮನೆ ಶಿಥಿಲವಾಗಿದೆ. ಒಂದು ಮನೆ ಖಾಲಿಯಿದ್ದು, ಉಳಿದ ಮನೆಯಲ್ಲಿ ಬಾಡಿಗೆದಾರರು ಇದ್ದಾರೆ. ತಾಪಂ ಇಒ ಮನೆ ಬಾಡಿಗೆ ಬಾಕಿ ವಸೂಲಿಗೆ ಕ್ರಮ ತಗೆದುಕೊಳ್ಳಲಾಗುತ್ತದೆ ಎಂಬ ಮಾಹಿತಿ ತಾ.ಪಂ ಮ್ಯಾನೇಜರ್ ನೀಡಿದರು.ತಾಪಂ ವರಮಾನದ ಮೂಲವಾದ ಅಂಗಡಿ ಕೋಣೆಗಳ ರೋಸ್ಟರ್ ಪದ್ದತಿಯಲ್ಲಿ ಬಾಡಿಗೆ ಕೊಡದೆ, ಒಳ ವ್ಯವಹಾರದಲ್ಲಿ ಬಾಡಿಗೆ ಇದ್ದವರಿಗೆ ಮತ್ತೆ ನೀಡಲಾಗುತ್ತದೆ. ಎಸ್ಸಿಎಸ್ಟಿ ಮೀಸಲು ಕೊಡಬೇಕು ಎನ್ನುವ ನಿಯಮ ಹಾಗೂ ರೋಸ್ಟರ್ ಪದ್ದತಿ ಕ್ರಮ ಅನುಸರಿಸುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಗುರುದತ್, ನಿಯಮದ ಪ್ರಕಾರ ಅಂಗಡಿ ಕೋಣೆ ಏಲಂ ಮಾಡುವಂತೆ ಸೂಚಿಸಿದರು.

ಕೃಷಿ ಇಲಾಖೆ ಅಧಿಕಾರಿಗಳು ಜಮಾಬಂಧಿಯಲ್ಲಿ ಪಾಲ್ಗೊಳ್ಳದ ಬಗ್ಗೆ ಸಾರ್ವಜನಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಕರೆ ಮಾಡಿ ಸಭೆಗೆ ಬರವಂತೆ ಸೂಚಿಸಿದರೂ ಅಧಿಕಾರಿ ಬಾರದೆ ಮತ್ತೊಬ್ಬರ ಕಳುಹಿಸಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಯಿತು. ಜಲಾನಯನ ಅಧಿಕಾರಿಯೇ ಕಿಂಡಿ ಅಣೆಕಟ್ಟು ನಿರ್ಮಾಣ ಗುತ್ತಿಗೆ ಮಾಡುವ ಜೊತೆ ಬಡ್ಡಿ ವ್ಯವಹಾರ ಮಾಡುತ್ತಾರೆ. ಜಲಾನಯನ ಹಾಗೂ ಅಂಗನವಾಡಿ ಅನುದಾನದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಯಿತು.

ಇತರರು ಕೂಡಾ ಬೋಗಸ್ ಎಸ್ಸಿಎಸ್ಟಿ ಸರ್ಟಿಫಿಕೇಟ್ ಪಡೆದು ಎಸ್ಸಿಎಸ್ಟಿ ಜನರಿಗೆ ಅನ್ಯಾಯ, ಗ್ರಾಪಂ ಪಿಡಿಒ, ಕಾರ್ಯದರ್ಶಿಳ ಭರ್ತಿ, ಗ್ರಾಪಂ ಪಿಡಿಒ ಅನಾವಶ್ಯಕ ಕಚೇರಿಯಿಂದ ಹೊರಗುಳಿಯುವುದಲ್ಲದೆ ಇನ್ನಿತರ ವಿಷಯಗಳ ಬಗ್ಗೆ ಸಭೆಯ ಗಮನ ಸೆಳೆಯಲಾಯಿತು.ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷ ಶ್ಯಾಮಲಾ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಪಂ ಯೋಜನಾ ಆಯೋಗ ನಿರ್ದೇಶಕ ಗುರುದತ್, ತಾಪಂ ಉಪಾಧ್ಯಕ್ಷ ರಾಮ್‍ಕಿಶನ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಬಿ.ಪೈ, ಇಒ ಕೇಶವ ಶೆಟ್ಟಿಗಾರ್ ಇದ್ದರು.

Related posts

Leave a Reply

Your email address will not be published. Required fields are marked *