Header Ads
Header Ads
Breaking News

ಕುಂದಾಪುರ: ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೆ ಮತದಾರರಿಂದ ತಿರುಗೇಟು

ಕುಂದಾಪುರ: ಮಾಜಿ ಪ್ರಧಾನಿ ದೇವೇಗೌಡರು ಉಪಚುನಾವಣಾ ಪ್ರಚಾರ ಸಭೆಯಲ್ಲಿ ದಕ್ಷಿಣ ಭಾರತದ ಬಿಜೆಪಿ ಬಾಗಿಲು ಬಂದ್ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಆದರೆ ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು.

ಬೈಂದೂರು ಮಂಡಲ ಬಿಜೆಪಿ ವತಿಯಿಂದ ತಲ್ಲೂರು ಶೇಷಶಯನ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಮಾಜಿ ಪ್ರಧಾನಿ ದೇವೇಗೌಡರು ದಕ್ಷಿಣ ಜೆಪಿಪಿ ಬಾಗಿಲು ಬಂದ್ ಮಾಡಲು ನಲವತ್ತೆಂಟು ಗಂಟೆ ಸಾಕು ಎಂದಿದ್ದರು. ಅದು ಸುಲಭದ ಮಾತಲ್ಲ. ಚುನಾವಣಾ ಸಮಯದಲ್ಲಿ ಮೈತ್ರಿ ಸರ್ಕಾರ ಆಡಳಿತ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದು, ಕಾಂಗ್ರೆಸ್ ಜೆಡಿಎಸ್ ಷಡ್ಯಂತರ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಡೆಯಲಿಲ್ಲ. ಇಲ್ಲಿನ ಮತದಾರರು ಚುನಾವಣೆಯಲ್ಲಿ ಸರಿಯಾಗಿ ಉತ್ತರ ಕೊಟ್ಟಿದ್ದಾರೆ ಎಂದರು.

ಮಧ್ಯಂತರ ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ಸವಾಲುಗಳಿದ್ದರೂ, ಕಾರ್ಯಕರ್ತರ ಪರಿಶ್ರಮ ಫಲಕೊಟ್ಟಿದೆ. ಮತದಾನ ಪ್ರಮಾಣ ಕಡಿಮೆ ಆಗಿರುವುದು ಗೆಲುವಿನ ಅಂತರ ಕಡಿಮೆ ಆಗಲು ಕಾರಣ. ಲೋಕಸಭೆ ಎಂಬ ಪ್ರಿಪರೇಟರಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದೇವೆ. ಮುಂದೆ ಬರುವ ಮಹಾ ಚುನಾವಣೆ ಎಂಬ ಅಂತಿಮ ಪರೀಕ್ಷೆಯಲ್ಲಿ ಪಾಸ್ ಆಗಬೇಕು. ಕೇಂದ್ರದಲ್ಲಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಲು ಎಲ್ಲರೂ ಸಿದ್ದರಾಗಬೇಕು ಎಂದು ಅವರು ಕಾರ್ಯಕರ್ತರಿಗೆ ಕೆರೆ ಕೊಟ್ಟರು.

ಬೈಂದೂರು ಪ್ರವಾಸಿ ಮಂದಿರ ಸಮೀಪ ಸಂಸದರ ಕಚೇರಿ ತೆರೆದು ಸಮಸ್ಯೆಗೆ ಸ್ಪಂದಿಸಲಾಗುತ್ತದೆ. ಬೈಂದೂರು ಅಭಿವೃದ್ಧಿ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳೊಟ್ಟಿಗೆ ಶಾಸಕರ ಮನೆಯಲ್ಲಿ ಸಭೆ ನಡೆಸಿ ಮಾಹಿತಿ ಪಡೆಯಲಾಗಿದೆ. ಕೊಲ್ಲೂರಿಗೆ ಬರುತ್ತಿರುವ ಸಣ್ಣ ನೀರಾವರಿ ಸಚಿವರ ಭೇಟಿ ಮಾಡಿ, ಬೈಂದೂರು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತದೆ ಎಂದು ತಿಳಿಸಿದರು.

ಸಂಸದ ಬಿವೈ ರಾಘವೇಂದ್ರ ಅವರಿಗೆ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿಯವರು ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಲು ಮುಂದಾಗುತ್ತಿದ್ದಂತೆ, ಸಮೀಪದಲ್ಲೇ ಇದ್ದ ಪೇಟವನ್ನು ಸಂಸದ ರಾಘವೇಂದ್ರ ಅವರು ಎತ್ತಿಕೊಂಡು ಶಾಸಕ ಸುಕುಮಾರ ಶೆಟ್ಟಿಯವರ ತಲೆಗೆ ತೊಡಿಸಿ ತಮ್ಮ ಗೆಲುವಿಗೆ ಶ್ರಮಿಸಿದ ಶಾಸಕರನ್ನು ಸನ್ಮಾನಿಸಿದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಚುನಾವಣೆ ಉಸ್ತುವಾರಿ ಉದಯ ಕುಮಾರ್ ಶೆಟ್ಟಿ, ಪ್ರಧಾನ ಕಾರ್‍ಯದರ್ಶಿಗಳಾದ ಸಂಧ್ಯಾ ರಮೇಶ್, ಕುತ್ಯಾರು ನವೀನ್ ಶೆಟ್ಟಿ, ಮಹಿಳಾ ಮೋಚಾ ಅಧ್ಯಕ್ಷೆ ಪ್ರಿಯದರ್ಶಿನಿ, ಹಿಂದುಳಿದ ಮೋರ್ಚಾ ಅಧ್ಯಕ್ಷ ಗಣೇಶ್ ಪೂಜಾರಿ, ದಲಿತ ಮೋರ್ಚಾ ಅಧ್ಯಕ್ಷ ಗೋಪಾಲಕೃಷ್ಣ ನಾಡ, ಜಿಪಂ ಸದಸ್ಯರಾದ ಶೋಭಾ ಪುತ್ರನ್, ಬಾಬು ಶೆಟ್ಟಿ ತಗ್ಗರ್ಸೆ, ಸುರೇಶ್ ಬಟ್ವಾಡಿ, ರಾಜ್ಯ ಬಿಜೆಪಿ ಕಾರ್‍ಯಕಾರಿಣಿ ಸದಸ್ಯ ಕಿರಣ್ ಕೊಡ್ಗಿ, ತಾಪಂ ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಇಂದಿರಾ ಶೆಟ್ಟಿ, ಕರಣ್ ಪೂಜಾರಿ ಇದ್ದರು.

ಬೈಂದೂರು ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಸ್ವಾಗತಿಸಿದರು. ಪ್ರಧಾನ ಕಾರ್‍ಯದರ್ಶಿಗಳಾದ ಬಾಲಚಂದ್ರ ಭಟ್ ನಿರೂಪಿಸಿ, ದೀಪಕ್ ಕುಮಾರ್ ಶೆಟ್ಟಿ ವಂದಿಸಿದರು.

Related posts

Leave a Reply