Header Ads
Breaking News

ಕುಂದಾಪುರ ಮೂಲದ ದಂಪತಿಗೆ ಜರ್ಮನಿಯಲ್ಲಿ ಇರಿತ

ಕುಂದಾಪುರ : ಜರ್ಮನಿಯ ಮ್ಯೂನಿಚ್‌ನಲ್ಲಿ ಇರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದ ಸದ್ಯ ಕುಂದಾಪುರದಲ್ಲಿ ಮನೆಯನ್ನು ಹೊಂದಿರುವ ಬಿ.ವಿ.ಪ್ರಶಾಂತ (51) ಹಾಗೂ ಸ್ಮೀತಾ (40) ದಂಪತಿಗಳ ಮೇಲೆ ಮಾ.30  ರಂದು ಆಗಂತುಕನೊಬ್ಬ ಚೂರಿಯಿಂದ ಇರಿದ ಪರಿಣಾಮ ಪ್ರಶಾಂತ ಮೃತರಾದರೆ, ಸ್ಮೀತಾ ಎನ್ನುವವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಪ್ರಶಾಂತ ಅವರ ತಂದೆ ದಿ.ಬಿ.ಎನ್.ವೆಂಕಟರಮಣ (ಪಾಪಣ್ಣ) ಹಾಗೂ ತಾಯಿ ವಿನಯ (ಬೇಬಿ) ಮೂಲತ: ಶಿವಮೊಗ್ಗ ಜಿಲ್ಲೆಯ ಹೊಸನಗರದವರು. ವ್ಯವಹಾರ ಹಾಗೂ ಕೃಷಿ ಕಾರ್ಯಗಳಿಗಾಗಿ ಅವರು ಕುಟುಂಬ ಸಹಿತರಾಗಿ ಸಾಗರದಲ್ಲಿ ನೆಲೆಸಿದ್ದರು. ವೆಂಕಟರಮಣ ಅವರ ಪೂರ್ವಿಕರು ಕುಂದಾಪುರ ಸಮೀಪದ ಬಸ್ರೂರಿನವರಾಗಿದ್ದರಿಂದ ಕುಟುಂಬ ಸದಸ್ಯರ ಹೆಸರಿನೊಂದಿಗೆ ಬಸ್ರೂರು ಉಳಿದುಕೊಂಡಿದೆ. ಪ್ರಶಾಂತ ಅವರ ಅವರು ಇಂಜಿನಿಯರಿಂಗ್ ಪದವಿಧರರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಜರ್ಮನಿಯಲ್ಲಿ ಉದ್ಯೋಗದಲ್ಲಿ ಇದ್ದಾರೆ. ಪತ್ನಿ ಸ್ಮೀತಾ ಅವರು ಪತಿಯ ಕಂಪೆನಿಯಲ್ಲಿಯೇ ಉದ್ಯೋಗಿಯಾದ್ದಾರೆ. ದಂಪತಿಗಳಿಗೆ ಪುತ್ರಿ ಸಾಕ್ಷೀ (15) ಹಾಗೂ ಪುತ್ರ ಶ್ಲೋಕ್ (10) ಇದ್ದಾರೆ. 13 ವರ್ಷಗಳ ಹಿಂದೆ ಕುಂದಾಪುರದ ಕುಂದೇಶ್ವರ ದೇವಸ್ಥಾನದ ಹಿಂದೆ ಮನೆಯನ್ನು ಕಟ್ಟಿಸಿದ್ದು, ಅಲ್ಲಿ ಪ್ರಶಾಂತ ಅವರ ತಾಯಿ ವಿನಯ ವಾಸಿಸುತ್ತಿದ್ದಾರೆ.

ಶುಕ್ರವಾರ ಜರ್ಮಿನಿಯಲ್ಲಿ ನಡೆದಿರುವ ದುರ್ಘಟನೆ ಕುರಿತು ಅವರ ಕುಟುಂಬ ಸದಸ್ಯರಿಗೆ ಪೂರ್ಣ ಮಾಹಿತಿ ಇಲ್ಲ. ಮನೆಯಿಂದ ಇಳಿದು ಬರುತ್ತಿದ್ದಾಗ ವ್ಯಕ್ತಿಯೊಬ್ಬನಿಂದ ನಡೆದ ಚೂರಿ ಇರಿತಕ್ಕೆ ಪ್ರಶಾಂತ ಬಲಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಸ್ಮೀತಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚೇತರಿಕೆ ಕನಿಷ್ಠ 3 ವಾರಗಳು ಬೇಕಾಗಬಹುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿರುವುದಾಗಿ ಪ್ರಶಾಂತ ಅವರ ಸಹೋದರಿ ಸಾಧನ ಅವರ ಪತಿ ಶ್ರೀನಿವಾಸ ತಿಳಿಸಿದ್ದಾರೆ.

ಆಕಸ್ಮಿಕವಾಗಿ ನಡೆದಿರುವ ದುರ್ಘಟನೆಯಿಂದ 2 ಕುಟುಂಬಗಳಲ್ಲಿ ದಿಗ್ಬ್ರಮೆ ಆವರಿಸಿದೆ. ಮುಂದೇನು ಮಾಡಬೇಕು ಎನ್ನುವುದಕ್ಕಾಗಿ ಕುಟುಂಬ ಸದಸ್ಯರು ತಮ್ಮ ಆಪ್ತರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳುತ್ತಿದ್ದಾರೆ. ಜರ್ಮನ್ ದೇಶದ ಕಾನೂನು ಕಟ್ಟಳೆಗಳಿಗೆ ಅನುಸಾರವಾಗಿ ತೀರ್ಮಾನ ಕೈಗೊಳ್ಳಬೇಕಾಗಿರುವುದರಿಂದ ರಾಯಭಾರ ಕಚೇರಿಯಿಂದ ಬರುವ ಸಂದೇಶಗಳಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ವರದಿ: ಶ್ರೀಕಾಂತ್ ಕುಂದಾಪುರ

Related posts

Leave a Reply

Your email address will not be published. Required fields are marked *