Breaking News

ಕುಂದಾಪುರ ವಿಶ್ವಬ್ರಾಹ್ಮಣ ಸಂಘದ ರಜತ ಮಹೋತ್ಸವ,  ರಜತ ಮಹೋತ್ಸವ ಸಂಭ್ರಮ ಹಾಗೂ ಮಿನಿಹಾಲ್ ಉದ್ಘಾಟನೆ

ಕುಂದಾಪುರ, ವಿಶ್ವಕರ್ಮ ಸಮಾಜ ಬುದ್ಧಿವಂತ ಸಮಾಜವಾಗಿದ್ದು, ಈ ಸಮಾಜದವರಿಗೆ ಯಾವುದೇ ವಸ್ತುಗಳನ್ನು ನೀಡಿದರೂ ಆ ವಸ್ತುವಿಗೆ ರೂಪ ಕೊಡುವ ಶಕ್ತಿ ಇದೆ. ಸಮುದಾಯಗಳಲ್ಲಿ ಸಮಾಜದ ಸಮುದಾಯ ಭವನಕ್ಕೆ ಹಣ ನೀಡಿದರೆ, ಸಮಾಜಕ್ಕೆ ಶಕ್ತಿ ನೀಡಿದಂತೆ. ಸಮುದಾಯ ಭವನ ಆ ಸಮಾಜದ ಸ್ವಾಭಿಮಾನ ಹಾಗೂ ಶಕ್ತಿ ಸಂಕೇತವಾಗಿದೆ ಎಂದು ಮೀನುಗಾರಿಕೆ, ಯುವಜನ ಸೇವಾ ಹಾಗೂ ಕ್ರೀಡಾ ಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿದರು.
ಅವರು ಕುಂದಾಪುರದ ವೆಸ್ಟ್‌ಬ್ಲಾಕ್ ರಸ್ತೆಯಲ್ಲಿರುವ ಸಂಘದ ಸಭಾ ಭವನದಲ್ಲಿ ಕುಂದಾಪುರ ತಾಲೂಕು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದವರ ೨೫ನೇ ವಾರ್ಷಿಕೋತ್ಸವ ರಜತ ಮಹೋತ್ಸವ ಸಂಭ್ರಮ ಹಾಗೂ ಮಿನಿಹಾಲ್ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿಶ್ವಕರ್ಮ ಸಮಾಜ ನೂರು ವರ್ಷಗಳ ಕಾಲ ಗುರುಗಳು ಇಲ್ಲದ ಸಮಾಜವಾಗಿದೆ. ಸ್ವಾಮೀಜಿಯವರು ಪೀಠಾರೋಹಣವಾದನಂತರ ಸಮಾಜ ಇಂದು ಮುಂದೆ ಬಂದು ಸಮಾಜದಲ್ಲಿ ಗುರುತಿಸಿಕೊಂಡಿದೆ. ಈ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ ಅನುದಾನ ಕೊಡಿಸುವ ಬಗ್ಗೆ ಮುಖ್ಯಮಂತ್ರಿಯವರಲ್ಲಿ ಸಮಾಲೋಚಿಸಲಾಗುವುದು ಎಂಬ ಭರವಸೆಯನ್ನು ನೀಡಿದರು.
ಕಟಪಾಡಿಯ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠದ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರು ಸಂಘದ ಮಿನಿಹಾಲ್ ಮತ್ತು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕುಂದಾಪುರ ತಾಲೂಕು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಂಘವು ೨೫ವರ್ಷಗಳ ಕಾಲ ನಡೆದು ಬಂದ ಹಾದಿ ಮತ್ತು ಸಮುದಾಯ ಭವನಕ್ಕೆ ದೇಣಿಗೆ ನೀಡಿದವರನ್ನು ಸ್ಮರಿಸಿದರು.

Related posts

Leave a Reply