Breaking News

ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಗೆ ದಾಖಲಾತಿ ನಿರಾಕರಣೆ, ನಟ್ಟಿರುಳಿನಲ್ಲಿ ಆಸ್ಪತ್ರೆಯಲ್ಲಿ ಬಸುರಿ ಮಹಿಳೆಗೆ ಅನ್ಯಾಯ


ಕುಂದಾಪುರದ ತಾಲೂಕು ಆಸ್ಪತ್ರೆ ರೋಗಿಗಳ ಮೇಲೆ ನಿರ್ಲಕ್ಷ್ಯ ತೋರಿದ ಘಟನೆಯಲ್ಲಿ ಇದೀಗ ಸುದ್ದಿಯಲ್ಲಿದೆ. ತುಂಬು ಗರ್ಬಿಣಿ ಮಹಿಳೆಯೋರ್ವರು ಪ್ರಸವ ವೇದನೆಯಲ್ಲಿ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಲು ಬಂದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎನ್ನುವ ನೆಪವೊಡ್ಡಿ ಆಸ್ಪತ್ರೆಯಿಂದ ಗರ್ಭಿಣಿ ಮಹಿಳೆಯನ್ನು ಹೊರ ಕಳುಹಿಸಿದ ಘಟನೆ ಮಧ್ಯ ರಾತ್ರಿ ನಡೆದಿದೆ.
ಸರ್ಕಾರಿ ಆಸ್ಪತ್ರೆಯ ನಿರ್ಲಕ್ಷದ ವಿರುದ್ಧ ಗರ್ಭಿಣಿ ಮಹಿಳೆಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು ಕುಂದಾಪುರದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ದೂರು ದಾಖಲಿಸಿದ್ದಾರೆ.
ಇಲ್ಲಿನ ಕೋಣಿ ನಿವಾಸಿ ಸಂತೋಷ್ ಎನ್ನುವವರ ಪತ್ನಿ ಆಶಾ ಪ್ರಸವ ವೇದನೆಯಿಂದ ರಾತ್ರಿ ತನ್ನ ತಾಯಿಮನೆ ಹಳುವಳ್ಳಿಯಿಂದ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭ ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರ್ ಆರತಿ ಕಾರಂತ ಆಪರೇಶನ್ ಮುಗಿಸಿ ಅಲ್ಲಿಂದ ಮನೆಗೆ ತೆರಳಿದ್ದು, ಆಶಾ ಮತ್ತು ಅವಳ ಚಿಕ್ಕಮ್ಮ ಮತ್ತು ಅಮ್ಮ ಮಧ್ಯರಾತ್ರಿ ಸುಮಾರಿಗೆ ಆಸ್ಪತ್ರೆಗೆ ಬಂದಿದ್ದಾರೆ. ಈ ಸಂದರ್ಭ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವಿನಯ ಮತ್ತು ಶಾಂತಿ ಎನ್ನುವ ನರ್ಸ್‌ಗಳು ಇನ್ನು ಎರಡು ದಿನ ಇವರಿಗೆ ಪ್ರಸವವಾಗುವುದಿಲ್ಲ ಈಗ ವೈದ್ಯರು ಕೂಡ ಯಾರೂ ಇಲ್ಲ. ನೀವು ಉಡುಪಿಗೆ ಹೋಗಿ ಎಂದು ಹೇಳಿದ್ದಾರೆ. ಆಶಾರ ಚಿಕ್ಕಮ್ಮ ಅಮಿತಾರಿಗೆ ದಾರಿ ಕಾಣದೆ ಕೂಡಲೇ ಇವರನ್ನು ಪರೀಕ್ಷೆ ಮಾಡುತ್ತಿದ್ದ ವೈದ್ಯರಾದ ಚಂದ್ರಶೇಖರಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ನಾನು ರಜೆಯಲ್ಲಿದ್ದೇನೆ ನನಗೆ ಬರಲಾಗುವುದಿಲ್ಲ ನೀವು ಉಡುಪಿಗೆ ಹೋಗಿ ಎಂದು ಸೂಚನೆ ನೀಡಿದ್ದಾರೆ. ಅದರಂತೆ ಉಡುಪಿ ಸರ್ಕಾರಿ ಆಸ್ಪತ್ರೆಗೆ ಹೋಗಲು ಮಧ್ಯರಾತ್ರಿ ವ್ಯವಸ್ಥೆ ಮಾಡಲು ಕೋರಿದ್ದಾರೆ. ಅದಕ್ಕೆ ನರ್ಸ್‌ಗಳು ೧೦೮ ಆಂಬ್ಯೂಲೆನ್ಸ್‌ಗೆ ಕರೆ ಮಾಡಲು ಸೂಚನೆ ಕೊಟ್ಟಿದ್ದಾರೆ.
ಜನರ ಜೀವ ರಕ್ಷಣೆಗೆಂದು ಆರೋಗ್ಯ ಕವಚ ಸೇವೆಯನ್ನು ಸರ್ಕಾರ ಒದಗಿಸಿದರೆ, ಆರೋಗ್ಯ ಕವಚ ಸೇವೆ ಮಾತ್ರ ಜನರಿಗೆ ಲಭ್ಯವಿಲ್ಲ. ತುರ್ತುಸೇವೆ ೧೦೮ಕ್ಕೆ ಗರ್ಬಿಣಿ ಮಹಿಳೆ ಆಶಾರ ಚಿಕ್ಕಮ್ಮ ಎಷ್ಟು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಅನಂತರ ನರ್ಸ್‌ಗಳಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆಗಾಗಿ ದುಂಬಾಲು ಬಿದ್ದಿದ್ದಾರೆ. ಆದರೆ ಸಿಬ್ಬಂದಿಗಳು ಅದಕ್ಕೆ ಸ್ಪಂದಿಸಿಲ್ಲ. ಒಂದು ಕಡೆ ಜೋರಾಗಿ ಮಳೆ ಬರುತ್ತಿದೆ. ಇನ್ನೊಂದು ಕಡೆ ಆಸ್ಪತ್ರೆ ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲ ಅಷ್ಟಲ್ಲದೆ ಬೇರೆ ವಾಹನದ ವ್ಯವಸ್ಥೆ ಕೂಡ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ರಸ್ತೆ ಮೇಲೆ ತಿರುಗುವ ವಾಹನಕ್ಕಾಗಿ ಮೊರೆಹೋದರು. ಬಹಳ ಸಮಯದ ಬಳಿಕ ಪ್ರವೀಣ್ ಎಂಬ ರಿಕ್ಷಾ ಚಾಲಕ ಗ್ರಾಹಕರೊಂದಿಗೆ ಬರುತ್ತಿದ್ದರು. ಇದನ್ನು ಕಂಡ ಆಶಾರ ಚಿಕ್ಕಮ್ಮ ರಸ್ತೆ ಮಧ್ಯೆ ಹೋಗಿ ಆಟೋವನ್ನು ಅಡ್ಡಹಾಕಿ ಪರಿಸ್ಥಿತಿಯನ್ನು ವಿವರಿಸುತ್ತಾರೆ. ಆ ಗ್ರಾಹಕರನ್ನು ಅಲ್ಲೇ ಇಳಿಸಿ ಆಶಾರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸುತ್ತಾರೆ. ಅಲ್ಲಿ ದಾಖಲಾದ ಹತ್ತೇ ನಿಮಿಷದಲ್ಲಿ ಆಶಾ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ. ಸೋಮವಾರ ಆಶಾರ ಚಿಕ್ಕಮ್ಮ ಅಮಿತಾ ಮತ್ತು ಚಿಕ್ಕಪ್ಪ ಕೃಷ್ಣ ಕುಂದಾಪುರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದು, ಇಂತಹ ಘಟನೆಗಳು ಮರುಕಳಿಸಬಾರದಂತೆ ಆಗ್ರಹಿಸದ್ದಾರೆ.

Related posts

Leave a Reply