Header Ads
Header Ads
Breaking News

ಕುತೂಹಲಕ್ಕೆ ಕಾರಣವಾಗುತ್ತಿದೆ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ : ಒಟ್ಟು 3,87,512 ಮತದಾರರಿಗೆ ಲಭಿಸಿದೆ ಹಕ್ಕು ಚಲಾಯಿಸುವ ಅವಕಾಶ

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ರಾಜಕೀಯ ಪಕ್ಷಗಳು ಚುನಾವಣೆ ಎದುರಿಸಲು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ರೆ, ಜಿಲ್ಲಾಡಳಿತ ಆಡಳಿತಾತ್ಮಕವಾಗಿ ಚುನಾವಣೆ ನಡೆಸಲು ಸಿದ್ಧತೆಗಳನ್ನು ನಡೆಸುತ್ತಿದೆ. ಈಗಾಗಲೇ ಅಧಿಸೂಚನೆ ಪ್ರಕಟಗೊಂಡಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೂಡ ಆರಂಭಗೊಂಡಿದೆ. 

ಯೆಸ್… ಮಂಗಳೂರು ಮಹಾನಗರ ಪಾಲಿಕೆಗೆ ಅಧಿಕೃತವಾಗಿ ಚುನಾವಣೆ ಘೋಷಣೆಯಾದ ಬೆನ್ನೆಲ್ಲೇ ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ, ಕಾಂಗ್ರೆಸ್ ಮಧ್ಯೆಯೇ ಫೈಪೋಟಿ ನಡೆಯುವುದು ಖಚಿತವಾಗಿದ್ದು, ಜೆಡಿಎಸ್, ಎಸ್‌ಡಿಪಿಐ, ಸಿಪಿಎಂಐ ಕೂಡ ಗೆಲ್ಲುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿವೆ. ಈಗಾಗಲೇ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಯನ್ನ ಯಶಸ್ವಿಯಾಗಿ ನಡೆಸಿದ ಜಿಲ್ಲಾಡಳಿತ, ಪಾಲಿಕೆ ಚುನಾವಣೆಯನ್ನ ಎದುರಿಸಲು ಸರ್ವ ಸನ್ನದ್ಧವಾಗಿದೆ. ಒಟ್ಟು 60 ವಾರ್ಡ್‌ಗಳ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಪ್ರತಿ ಐದು ವಾರ್ಡ್‌ಗೆ ಒಬ್ಬರಂತೆ 12 ಮಂದಿ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ನಿಗಾ ಇಡಲು 12 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅ.31ರವರೆಗೂ ಅವಕಾಶವಿದೆ. ನವೆಂಬರ್ 2ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 4ರಂದು ಕೊನೆ ದಿನವಾಗಿದ್ದು, ನವೆಂಬರ್ 12ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಮರುಮತದಾನ ಅಗತ್ಯ ಇದ್ದಲ್ಲಿ ನ.13ರಂದು ಮತ ಎಣಿಕೆ ನಡೆದು ಫಲಿತಾಂಶ ಕೂಡ ಹೊರಬೀಳಲಿದೆ. ಈ ಬಾರಿ 3.87 ಲಕ್ಷ ಮತದಾರರು ಮತಚಲಾವಣೆಯ ಅವಕಾಶ ಪಡೆದಿದ್ದು, ಅದರಲ್ಲಿ 1,99,989  ಪುರುಷರು, 1,87,465 ಮಹಿಳೆಯರು, ಇತರರು  63 ಮಂದಿ ಇದ್ದಾರೆ. ಒಟ್ಟು  448 ಮತಗಟ್ಟೆಗಳಲ್ಲಿ ಮತದಾನ ನಡೆಸಲು ಜಿಲ್ಲಾಡಳಿತ ತಯಾರಿ ನಡೆಸಿದೆ.

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಈ ಬಾರಿ ವಿದ್ಯುನ್ಮಾನ ಮತಯಂತ್ರಗಳ ಮೂಲಕವೇ ನಡೆಯಲಿದೆ. ರಾಜ್ಯ ಚುನಾವಣಾ ಆಯೋಗದಿಂದ ತಲಾ 601 ಬ್ಯಾಲೆಟ್ ಯೂನಿಟ್ ಮತ್ತು ಕಂಟ್ರೋಲ್ ಯೂನಿಟ್‌ಗಳನ್ನು ಒದಗಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಜಿಲ್ಲಾಡಳಿತ ವಹಿಸಿದೆ. ಒಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ರಾಜಕೀಯ ಪಕ್ಷಗಳು ಪ್ರಚಾರದ ಸಿದ್ಧತೆಗಳನ್ನು ನಡೆಸುತ್ತಿದ್ದರೆ, ಜಿಲ್ಲಾಡಳಿತ ಕೂಡ ಚುನಾವಣೆಯನ್ನು ಸಾಂಗವಾಗಿ ನಡೆಸಲು ಸಕಲ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದೆ.

 

Related posts

Leave a Reply

Your email address will not be published. Required fields are marked *