Breaking News

ಕುಸಿಯುವ ಭೀತಿಯಲ್ಲಿದೆ ಕಾಂತಮಂಗಲ ಸೇತುವೆ, 35 ವರ್ಷಗಳ ಹಿಂದಿನ ಅಂತರ ರಾಜ್ಯ ಸೇತುವೆ


ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ಸೇತುವೆ ನಾದುರಸ್ತಿಯಲ್ಲಿದ್ದು ಇಂದು ಕುಸಿಯುವ ಭೀತಿಯಲ್ಲಿದೆ.
ಈ ಸೇತುವೆಯನ್ನು ಪಯಸ್ವಿನಿ ಹೊಳೆಗೆ ಅಜ್ಜಾವರ ಮಂಡೆಕೋಲು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಸುಮಾರು ೩೫ ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಅಜ್ಜಾವರ ಮಂಡೆಕೋಲು ಗ್ರಾಮವು ಸೇರಿದಂತೆ ಕಾಸರಗೋಡು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮೂಲಕ ಕಾಂತಮಂಗಲ ಸೇತುವೆ ಅಂತರ ರಾಜ್ಯ ಸೇತುವೆಯಾಗಿ ಗಮನ ಸೆಳೆದಿದೆ. ಇದೀಗ ಸೇತುವೆ ಸುಮಾರು ೭೫ ಮೀಟರ್ ಉದ್ದವಿದ್ದು ಇದರ ಪಿಲ್ಲರ್‌ಗಳು ಸುಮಾರು ೩೦ ಫೀಟ್ ಎತ್ತರವಿದೆ. ಸೇತುವೆಯಲ್ಲಿ ವಾಹನಗಳು ಚಲಿಸುವಾಗ ಸೇತುವೆ ಅಲ್ಲಾಡುತ್ತಿದ್ದು ಪ್ರಯಾಣಿಕರಿಗೆ ಭಯವನ್ನುಂಟುಮಾಡುತ್ತಿದೆ.
ಇಷ್ಟೇ ಅಲ್ಲದೆ ಸೇತುವೆ ಪಿಲ್ಲರ್‌ಗಳ ತಳ ಭಾಗ ಸವೆದು ನಿಂತಿವೆ. ಸೇತುವೆಯ ಅಡಿ ಭಾಗದ ಸ್ಲ್ಯಾಬ್ ಅಲ್ಲಲ್ಲಿ ಬಿರುಕು ಬಿಟ್ಟುಕೊಂಡಿದ್ದು ಸ್ಲ್ಯಾಬ್ ತುಂಡು ತುಂಡಾಗಿ ಉದುರುತ್ತಿದೆ. ಸ್ಲ್ಯಾಬ್‌ಗೆ ಅಳವಡಿಸಲಾದ ಕಬ್ಬಿಣಗಳು ಕಾಣುತ್ತಿದ್ದು ಅದು ತುಕ್ಕು ಹಿಡಿದು ಅದರ ಗಾತ್ರ ಕಿರಿದಾಗಿದೆ. ಸೇತುವೆಯ ಮೇಲ್ಭಾಗದಲ್ಲಿ ಹೊಂಡ ಗುಂಡಿಗಳಿಂದ ಕೂಡಿದ್ದು ವಾಹನಗಳು ಸರಾಗವಾಗಿ ಸಂಚರಿಸಲು ತೊಡಕಾಗುತ್ತಿವೆ. ಇನ್ನು ಈ ಸೇತುವೆ ಬಹಳ ಅತ್ಯಗತ್ಯ ಸೇತುವೆಯಾಗಿರುವ ಕಾರಣ ಸೇತುವೆ ಕುಸಿತಗೊಂಡರೆ ಸುಳ್ಯದ ಅಜ್ಜಾವರ ಮತ್ತು ಮಂಡೆಕೋಲು ಗ್ರಾಮದವರು, ಕಾಸರಗೋಡು ಭಾಗದವರು ಸಂಪರ್ಕ ಸಂಪರ್ಕ ಕಳೆದುಕೊಳ್ಳುತ್ತಾರೆ. ಮಂಡೆಕೋಲು ಅಜ್ಜಾವರ ಭಾಗದಿಂದ ಶಾಲಾ ಕಾಲೇಜುಗಳಿಗೆ ಸಾಕಷ್ಟು ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವ್ಯವಹಾರ, ಕಚೇರಿ ವ್ಯವಹಾರ ದೃಷ್ಟಿಯಿಂದ ಅನೇಕ ಜನರು ಸುಳ್ಯ ತಾಲೂಕು ಕೇಂದ್ರಕ್ಕೆ ಬರುತ್ತಿದ್ದಾರೆ.

Related posts

Leave a Reply