Header Ads
Breaking News

ಕುಸಿಯುವ ಭೀತಿಯಲ್ಲಿ ಸುಳ್ಯ-ಕರಿಕೆ-ಭಾಗಮಂಡಲ-ಕೇರಳ ಅಂತಾರಾಜ್ಯ ರಸ್ತೆ : ಸಂಚಾರ ಸುರಕ್ಷತೆಗೆ ಆಗ್ರಹ

ಕಳೆದ ಬಾರಿಯ ಮಹಾಮಳೆಗೆ ಬೆಟ್ಟ, ಗುಡ್ಡಗಳು ಕುಸಿದು ಮಂಗಳೂರು-ಮೈಸೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಮಳೆಗಾಲ ಪೂರ್ತಿ ಬಂದ್ ಆಗಿತ್ತು. ಈ ಸಂದರ್ಭದಲ್ಲಿ ಆಪತ್ಬಾಂದವನಂತೆ ಎದುರಾಗಿದ್ದು ಸುಳ್ಯ ಆಲೆಟ್ಟಿ ಮೂಲಕ ಪಾಣತ್ತೂರು-ಕರಿಕೆ-ಭಾಗಮಂಡಲದ ಮೂಲಕ ಮಡಿಕೇರಿ ಸೇರುವ ರಸ್ತೆ. ಅಲ್ಲದೇ ಭಾಗಮಂಡಲ ಮೂಲಕ ಕೇರಳವನ್ನು ಸಂರ್ಪಕಿಸುವ ಅಂತಾರಾಜ್ಯ ರಸ್ತೆ ಇದಾಗಿದೆ. ಆದರೆ ಈ ಆಪತ್ಬಾಂದವ ರಸ್ತೆ ಆಪತ್ತಿನಲ್ಲಿದೆ. ಮಳೆನೀರು ಹರಿದು ಹೋಗಲು ಚರಂಡಿಗಳಿಲ್ಲದೇ ಕುಸಿಯುವ ಭೀತಿಯಲ್ಲಿದೆ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಳೆದ ಬಾರಿ ಮಡಿಕೇರಿ ವ್ಯಾಪ್ತಿಯಲ್ಲಿ ನಡೆದ ಪ್ರಾಕೃತಿಕ ವಿಕೋಪಕ್ಕೆ ರಸ್ತೆಯೇ ಸಂಪೂರ್ಣ ಕೊಚ್ಚಿಹೋಗಿ ವಾಹನ ಸಂಚಾರ ಬಂದ್ ಆಗಿತ್ತು. ಈ ಬಾರಿಯ ಮಳೆಗಾಲ ಕೂಡ ರಾಷ್ಟ್ರೀಯ ಹೆದ್ದಾರಿಯ ಸಂಪಾಜೆಯಿಂದ ಮಡಿಕೇರಿವರೆಗೆ ಘನ ವಾಹನಗಳ ಸಂಚಾರವನ್ನು ನಿಷೇಧ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಕಳೆದ ಬಾರಿಯಂತೆ ಈ ಬಾರಿಯು ಘನ ವಾಹನ ಸವಾರರು ಕರಿಕೆ-ಭಾಗಮಂಡಲ ರಸ್ತೆಯಲ್ಲೇ ಸಂಚಾರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೇ ಮಡಿಕೇರಿ ಈ ಬಾರಿಯೂ ಸುರಕ್ಷಿತವಲ್ಲ. ಬೆಟ್ಟಗಳಲ್ಲಿ ಬಿರುಕು ಬಿಟ್ಟಿದೆ. ಈ ಎಲ್ಲಾ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ ಅಷ್ಟಾಗಿ ಸುರಕ್ಷಿತವಲ್ಲ ಎಂಬುದು ತಿಳಿಯುತ್ತದೆ.

ಇದೇ ಕಾರಣಕ್ಕೆ ಸುಳ್ಯದ ಆಲೆಟ್ಟಿ ಮೂಲಕ ಕರಿಕೆ-ಭಾಗಮಂಡಲ-ಮಡಿಕೇರಿ ಸಂಪರ್ಕ ರಸ್ತೆ ವಾಹನ ಸಂಚಾರಕ್ಕೆ ಅನಿವಾರ್ಯವಾದರೆ ಈ ರಸ್ತೆ ಕೂಡ ಸಂಚಾರ ಸುರಕ್ಷತೆಗೆ ಕಠಿಣವಾಗಿ ಪರಿಣಮಿಸಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯಲ್ಲೆ ಮಳೆ ನೀರು ಹರಿಯುತ್ತಿದೆ. ಇದರಿಂದ ರಸ್ತೆಯ ಕೆಲವು ಭಾಗಗಳಲ್ಲಿ ರಸ್ತೆ ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದೆ. ಹೇಳಿ ಕೇಳಿ ಮಡಿಕೇರಿಯಿಂದ ೨೭ಕಿಮೀ ದೂರದಲ್ಲಿರುವ ಕರಿಕೆ ಎಂಬುದು ಕುಗ್ರಾಮ ಪ್ರದೇಶ. ಕಳೆದ ಬಾರಿಯ ಪ್ರಾಕೃತಿಕ ವಿಕೋಪ ಸಂದರ್ಭ ಎಲ್ಲಾ ಜನರು ಕರಿಕೆ ಮಾರ್ಗವನ್ನೇ ಅವಲಂಭಿಸಿದ್ದರು. ಆದರೆ ಈಗ ಈ ರಸ್ತೆಯನ್ನು ಅಭಿವೃದ್ದಿ ಪಡಿಸಲು ಯಾವುದೇ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಶ್ರಮ ವಹಿಸದೇ ಇರುವುದು ವಿಷಾದನೀಯ. ಈ ಬಗ್ಗೆ ಇಲ್ಲಿನ ಪಂಚಾಯತ್ ಸದಸ್ಯರಾಗಲೀ ಉನ್ನತ ಮಟ್ಟದ ರಾಜಕೀಯ ಮುಖಂಡರಾಗಲಿ ಗಮನ ಹರಿಸುತ್ತಿಲ್ಲ ಎಂಬುದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಳಗ ಮತ್ತು ಸ್ಥಳೀಯರ ಅಳಲು.

ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಕೊಡಲು ಜಿಲ್ಲಾ ಅಧ್ಯಕ್ಷ ಉನೈಸ್ ಪೆರಾಜೆ ಪ್ರತಿಕ್ರಿಯೆ ನೀಡಿ ಕರಿಕೆ-ಭಾಗಮಂಡಲ ಮತ್ತು ಕೇರಳಕ್ಕೆ ಸಂಪರ್ಕಕಿಸುವ ಅಂತಾರಾಜ್ಯ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕಳೆದ ಬಾರಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಮಯದಲ್ಲಿ ವಾಹನ ಸಂಚಾರಕ್ಕೆ ಈ ರಸ್ತೆಯನ್ನು ಆಯ್ದುಕೊಂಡ ಹಿನ್ನೆಲೆಯಲ್ಲಿ ಈಗ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮಳೆ ನೀರು ಹರಿದು ಹೋಗಲು ಸಾಧ್ಯವಾಗದೇ ರಸ್ತೆಯ ಅಂಚುಗಳು ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದೆ. ಈ ರಸ್ತೆಯ ದುರಸ್ತಿಗೆ ಶಾಸಕರು, ಸಂಸದರು ತುರ್ತಾಗಿ ಸಂಧಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಸ್ಥಳೀಯ ನಿವಾಸಿ ಮಾಧವ ಪ್ರತಿಕ್ರಿಯೆ ನೀಡಿ ಕರಿಕೆ-ಭಾಗಮಂಡಲ ರಸ್ತೆಯಲ್ಲಿ ದಿನಪ್ರತಿ ಒಡಾಡುತ್ತಿದ್ದೇನೆ. ಕಳೆದ ಮಳೆಗಾಲದಲ್ಲಿ ಗುಡ್ಡ ಜರಿದು ಈ ರಸ್ತೆ ಕೆಲವು ದಿನ ಬಂದ್ ಆಗಿತ್ತು. ಆದರೆ ಇಲ್ಲಿಯವರೆಗೆ ಇದರ ದುರಸ್ತಿ ಕಾರ್ಯ ಮಾಡಿಲ್ಲ. ಈ ಮಳೆಗಾಲದಲ್ಲಿ ರಸ್ತೆ ಬಂದ್ ಆದರೆ ಸಂಚಾರಕ್ಕೆ ಕಷ್ಟವಾಗಲಿದೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *