Header Ads
Header Ads
Breaking News

ಕುoದಾಪುರ: ಗದ್ದಲದ ಗೂಡಾದ ಶಿರೂರು ಗಾಮಸಭೆ

ಕೋರಂ ಇಲ್ಲದ ಕಾರಣ ನಿಗಧಿತ ಅವಧಿಗಿಂತ ತಡವಾಗಿ ಆರಂಭಗೊಂಡ ಶಿರೂರು ಗ್ರಾಮಪಂಚಾಯತ್‌ನ ಪ್ರಥಮ ಸುತ್ತಿನ ಗ್ರಾಮಸಭೆ ಅಭಿವೃದ್ದಿ ವಿಷಯಗಳ ಬಗ್ಗೆ ಚರ್ಚೆಯಾಗದೆ ಗದ್ದಲ, ಗಲಾಟೆಗಳಲ್ಲೇ ಮುಳುಗಿದ ಘಟನೆ ನಡೆದಿದೆ.
ಶಿರೂರು ಗ್ರಾಮಪಂಚಾಯ್ ಸಭಾಂಗಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಎರಡು ಮೂರು ವಿಚಾರಗಳ ಕುರಿತು ಬಿರುಸಿನ ಚರ್ಚೆ ಏರ್ಪಟ್ಟಿದ್ದು, ಸದಸ್ಯರು, ಗ್ರಾಮಸ್ಥರು ಅಧ್ಯಕ್ಷರ ಟೇಬಲ್ ತನಕ ಹೋಗಿ ವಾಗ್ವಾದ ನಡೆಸಿದ ಘಟನೆ ನಡೆಯಿತು.

ಪಂಚಾಯತ್ ಸಮೀಪವೇ ನಿರ್ಮಿಸಲಾಗುತ್ತಿರುವ ತ್ಯಾಜ್ಯ ಸಂಸ್ಕರಣ ಘಟಕದಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆಗಳಾಬಗಹುದು ಹೀಗಾಗಿ ಮೊದಲೇ ಈ ಬಗ್ಗೆ ಚರ್ಚಿಸಿ ಸರಿಯಾಗಿ ತೀರ್ಮಾನ ಕೈಗೊಳ್ಳಿ ಎಂದು ಗ್ರಾಮಸ್ಥ ಜಫ್ರಿ ಸಾಹೇಬ್ ಸಲಹೆ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಪಿಡಿಓ ಮಂಜುನಾಥ ಶೆಟ್ಟಿ, ಮೊದಲು ಅರಣ್ಯ ಇಲಾಖೆ ಜಾಗದಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಮಾಡಲು ಮುಂದಾಗಿದ್ದು, ಅದು ಪರಂಬೋಕು ಭೂಮಿ ಆದ್ದರಿಂದ ಅಲ್ಲಿ ಸರ್ಕಾರಿ ಅನುದಾನದಲ್ಲಿ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ. ಹೀಗಾಗಿ ಸಮುದಾಯ ಮಂದಿರದ ಬಳಿ ನಿರ್ಮಿಸಲು ಮುಂದಾದಾಗ ಅಲ್ಲಿನ ಸ್ಥಳೀಯರು ಪಂಚಾಯತ್‌ಗೆ ಬಂದು ನನಗೆ ಘೇರಾವ್ ಹಾಕಿದ್ದರು. ಆ ಬಳಿಕ ಎಲ್ಲಾ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಪಂಚಾಯತ್ ಕಟ್ಟಡದ ಬಳಿಯೇ ಘಟಕ ಸ್ಥಾಪನೆಗೆ ಮುಂದಾಗಿದ್ದೇವೆ. ತ್ಯಾಜ್ಯ ಸಂಸ್ಕರಣ ಘಟಕದಿಂದ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆಗಳಾಗುವುದಿಲ್ಲ. ಒಂದು ವೇಳೆ ಬದಲಿ ಜಾಗ ಬೇರೆಡೆ ಸಿಕ್ಕರೆ ಇದೇ ಕಟ್ಟಡವನ್ನು ಆ ಸ್ಥಳಕ್ಕೆ ಸ್ಥಳಾಂತರ ಮಾಡುತ್ತೇವೆ. ಸ್ಥಳಾಂತರ ಮಾಡಲು ಅನುಕೂಲಕರವಾಗಿ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬೈಂದೂರು ಪ್ರದೇಶವನ್ನು ಮೇಲ್ದರ್ಜೆಗೆ ಏರಿಸುವುದರ ಬಗ್ಗೆ ಪಂಚಾಯತ್‌ನಿಂದ ಮನವಿ ಕಳುಹಿಸಿ ಎಂದು ಪೌರಾಡಳಿತ ನಿರ್ದೇಶನಾಲಯದಿಂದ ಜಿಲ್ಲಾಪಂಚಾಯತ್ ಮೂಲಕ ಗ್ರಾಮಪಂಚಾಯತ್‌ಗೆ ಪತ್ರ ಬಂದಿದೆ. ಬೈಂದೂರನ್ನು ಕೇಂದ್ರ ಸ್ಥಾನವನ್ನಾಗಿಸಿ ಬೈಂದೂರು, ಯಡ್ತೆರೆ, ಶಿರೂರನ್ನು ಸೇರಿಸಿ ಪುರಸಭೆ ಮಾಡುವುದು ಅಥವಾ ಶಿರೂರನ್ನು ಪಟ್ಟಣ ಪಮಚಾಯತ್‌ನ್ನಾಗಿ ಮಾಡುವುದು. ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿ ಮನವಿ ಕಳುಹಿಸಿ ಎಂದು ಪತ್ರಬಂದಿದೆ. ಈ ಬಗ್ಗೆ ಚರ್ಚೆ ನಡೆಸಿ ಗ್ರಾಮಸ್ಥರು ಸಲಹೆ ನೀಡಬೇಕು ಎಂದು ಪಿಡಿಓ ಹೇಳಿದರು.

ಅಧ್ಯಕ್ಷರ ಟೇಬಲ್ ತನಕವೂ ಬಂದು ಆಕ್ರೋಶ:
ಇದಕ್ಕೆ ಕೆಲ ಗ್ರಾಮಸ್ಥರು ಪುರಸಭೆ ಬೇಡ. ಬೈಂದೂರಿಗೆ ನಮ್ಮನ್ನು ಸೇರಿಸುವುದು ಸರಿಯಲ್ಲ. ಶಿರೂರನ್ನು ಪಟ್ಟಣ ಪಂಚಾಯತ್ ಅನ್ನಾಗಿ ಮಾಡಲಿ. ಇಲ್ಲವಾದಲ್ಲಿ ಎರಡು ಗ್ರಾಮಪಂಚಾಯತ್ ಆಗಿ ವಿಭಜಿಸಲಿ ಎಂದರು. ಇದಕ್ಕೆ ಕೆಲವರು ಇದೊಂದು ಮಹತ್ವದ ಚರ್ಚೆ. ನಾವಿಷ್ಟು ಜನ ಸೇರಿ ಚರ್ಚೆಗೆ ಬರಲು ಸಾಧ್ಯವಿಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ಇಬ್ಬರು ಸದಸ್ಯರು ಏಕಾಏಕಿಯಾಗಿ ಇಂತಹ ದೊಡ್ಡಮಟ್ಟದ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿಯೇ ವಿಶೇಷ ಗ್ರಾಮಸಭೆ ಕರೆದು ಅಲ್ಲಿ ಚರ್ಚೆಯಾಗಿ ಸರ್ವಾನುಮತದ ತೀರ್ಮಾನ ಕೈಗೊಳ್ಳೋಣ ಎಂಬ ಸಲಹೆ ನೀಡಿದರು. ಇದೇ ವಿಚಾರದಲ್ಲಿ ಸಾಕಷ್ಟು ವಾದ ವಿವಾದಗಳು ನಡೆದು ಎರಡು ಗುಂಪುಗಳ ನಡುವೆ ಚರ್ಚೆ ತಾರಕಕ್ಕೇರಿ ಅಧ್ಯಕ್ಷರ ಟೇಬಲ್ ತನಕ ಬಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪಟ್ಟಣಪಂಚಾಯತ್ ಅಥವಾ ಎರಡು ಗ್ರಾಮಪಮಚಾಯತ್ ಗಳನ್ನಾಗಿ ಮಾಡಲು ನಿರ್ಣಯಕೈಗೊಳ್ಳಲಾಯಿತು. ಇದಕ್ಕೆ ಇಬ್ಬರು ಸದಸ್ಯರು ವಿರೋಧ ವ್ಯಕ್ತಪಡಿಸಿ ವಿಶೇಷ ಗ್ರಾಮಸಭೆ ನಡೆಸಿ ಅಲ್ಲಿ ಈ ವಿಚಾರವನ್ನು ಚರ್ಚೆಗೆ ಇಡೋಣ ಎಂದರು.

ಸಮುದಾಯ ಮಂದಿರ ಯಾರ ಸೊತ್ತು?
ಹಲವು ಚಟುವಟಿಕೆಗಳಿಗೆ ವೇದಿಕೆಯಾಗಬೇಕಿದ್ದ ಸಮುದಾಯ ಭವನ ಮೂಲೆಗುಂಪಾಗಿದೆ. ಅಭಿವೃದ್ದಿ ಪಡಿಸಿ ಎಂದರೆ ಸಮುದಾಯ ಭವನ ಪಂಚಾಯತ್ ಸೊತ್ತಲ್ಲ ಎಂಬ ಉತ್ತರಗಳು ಸಿಕ್ಕಿವೆ. ಪಂಚಾಯತ್ ಜಿಮ್ ತರಗತಿಯೊಂದಕ್ಕೆ ಕಟ್ಟಡವನ್ನು ಬಾಡಿಗೆಗೆ ಕೊಟ್ಟಿದ್ದು ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪಿಡಿಓ ಸಮುದಾಯ ಭವನದ ದಾಖಲೆಗಳನ್ನು ತೆಗೆದಾಗ ಅದು ಹಿಂದಿನ ಜಿಲ್ಲಾಪರಿಷತ್‌ಗೆ ಸೇರಿದ್ದಾಗಿದೆ. ಹಿಂದಿನ ಪಿಡಿಓ ಇರುವಾಗ ಬಾಡಿಗೆ ಕೊಟ್ಟಿದ್ದರು. ನಿರ್ಣಯ ಪುಸ್ತಕದಲ್ಲಿ ವಿದ್ಯುತ್ ಸರಿಪಡಿಸಿಕೊಂಡು ಕಟ್ಟಡವನ್ನು ಉಪಯೋಗಿಸಿಕೊಳ್ಳತಕ್ಕದ್ದು ಎಂಬ ಮಾಹಿತಿ ಇದೆ ಎಂದರು.

ಜಿ.ಪಂ ಸದಸ್ಯ ಸುರೇಶ್ ಬಟವಾಡಿ, ತಾ.ಪಂ ಸದಸ್ಯ ಪುಷ್ಪರಾಜ್ ಶೆಟ್ಟಿ, ಪಂಚಾಯತ್ ಅಧ್ಯಕ್ಷೆ ದಿಲ್‌ಶಾದ್ ಬೇಗಂ, ಪಂಚಾಯತ್ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Related posts

Leave a Reply