Header Ads
Breaking News

ಕೃಷಿಭೂಮಿಯಲ್ಲಿ ಪಾಚಿಯಿಂದಾಗಿ ಭತ್ತದ ಪೈರು ನಾಶ

ಇವರು ಹಡಿಲು ಬಿಡುವ ಸ್ಥಿತಿಯಲ್ಲಿದ್ದ ಗದ್ದೆಗಳನ್ನು ತಿಂಗಳ ಹಿಂದಷ್ಟೇ ಕಷ್ಟಪಟ್ಟು ನಾಟಿ ಮಾಡಿದ್ದಾರೆ. ಆದರೆ ಉಪ್ಪು ನೀರಿನ ಹಾವಳಿ, ವಿಸ್ತಾರವಾಗಿ ಬೆಳೆದ ಪಾಚಿಯಿಂದಾಗಿ ಭತ್ತದ ಪೈರು ಸಂಪೂರ್ಣ ನಾಶವಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ರೈತ ಈಗ ಕಂಗಲಾಗಿದ್ದಾರೆ. ಅಷ್ಟಕ್ಕೂ ಆ ರೈತನಿಗೆ ಎದುರಾಗಿರುವ ಸಮಸ್ಯೆಯಾದರೂ ಏನು ಅಂತೀರಾ.. ಈ ವಿಶೇಷ ವರದಿ ನೋಡಿ.

ಇತ್ತೀಚಿನ ದಿನಗಳಲ್ಲಿ ಕೂಲಿಯಾಳುಗಳ ಸಮಸ್ಯೆ, ಉಪ್ಪು ನೀರಿನ ಹಾವಳಿಯಿಂದಾಗಿ ಕೃಷಿಕರು ತಮ್ಮ ಕೃಷಿಭೂಮಿಯನ್ನು ಬೇಸಾಯ ಮಾಡದೆ ಹಾಗೆಯೇ ಹಡಿಲು ಬಿಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಕೃಷಿಕ ಹಡಿಲು ಬೀಳುವ ಸ್ಥಿತಿಯಲ್ಲಿದ್ದ ಎಕರೆಗಟ್ಟಲೆ ಕೃಷಿಭೂಮಿಯನ್ನು ಗೇಣಿ ಪಡೆದು ಕೃಷಿ ಕಾರ್ಯ ನಡೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಯೆಸ್ ಕುಂದಾಪುರದ ಕೋಡಿ ಶಿವಾಲಯ ಸಮೀಪದ ನಿವಾಸಿ ಕೆ. ಗಂಗಾಧರ ಪೂಜಾರಿ ಕೋಡಿ ಚಕ್ರೇಶ್ವರಿ ದೇವಸ್ಥಾನದ ಆಸುಪಾಸಿನ ಸುಮಾರು ಹದಿನೆಂಟು ಎಕರೆಯಷ್ಟು ಸರಿ ಸುಮಾರು 60ಕ್ಕೂ ಅಧಿಕ ಗದ್ದೆಗಳನ್ನು ಗೇಣಿ ಪಡೆದು ಕಳೆದ ಹದಿನೇಳು ವರ್ಷಗಳಿಂದ ಭತ್ತ ಬೇಸಾಯ ನಡೆಸುತ್ತಿದ್ದಾರೆ. ಗಂಗಾಧರ ಪೂಜಾರಿಯವರು ಮಂಗಳೂರಲ್ಲಿ ಉದ್ಯಮವನ್ನು ನಡೆಸುವುದರ ಜೊತೆಗೆ ಮಳೆಗಾಲದ ಬಿಡುವಿನ ವೇಳೆಯಲ್ಲಿ ಪ್ರತೀ ವರ್ಷವೂ ನಾಟಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಸ್ವತಃ ಟಿಲ್ಲರ್ ಮೇಲೆ ಕೂತು ಗದ್ದೆ ಉಳುಮೆ ಮಾಡುವುದರಿಂದ ಹಿಡಿದು ಭತ್ತದ ನಾಟಿಗೆ ಪೂರಕವಾದ ಎಲ್ಲಾ ಕೆಲಸವನ್ನೂ ಮಾಡುವ ಗಂಗಾಧರ ಪೂಜಾರಿಯವರೆ ಮಾಡುತ್ತಾರೆ. ಗಂಗಾಧರ ಪೂಜಾರಿಯವರ ತಂದೆ ತೊಪ್ಲು ಗಣಪ ಪೂಜಾರಿ ವೃತ್ತಿಪರ ಕೃಷಿಕರಾಗಿ ಕೋಡಿ ಭಾಗದಲ್ಲಿ ಹೆಸರು ಮಾಡಿದವರು.ಅಲ್ಲದೇ ತಮ್ಮ ಒಂದು ಎಕರೆ ಕೃಷಿಭೂಮಿಯೂ ಸೇರಿದಂತೆ ತಮ್ಮ ಮನೆಯ ಸುತ್ತಮುತ್ತಲಿನ ಕೃಷಿಭೂಮಿಯನ್ನೂ ಗೇಣಿ ಪಡೆದು ನಾಟಿ ಮಾಡುತ್ತಿದ್ದಾರೆ.

ಸುಮಾರು 17 ವರ್ಷಗಳಿಂದಲೂ ನಿರಂತರವಾಗಿ ಹಡಿಲು ಬೀಳುವ ಸ್ಥಿತಿಯಲ್ಲಿದ್ದ ಗದ್ದೆಗಳನ್ನು ಗೇಣಿ ಪಡೆದು ಭತ್ತ ನಾಟಿ ಮಾಡುತ್ತಿರುವ ಗಂಗಾಧರ ಪೂಜಾರಿಯವರು ಇದೇ ಮೊದಲ ಭಾರಿಗೆ ಪಾಚಿ ಕಾಟದಿಂದಾಗಿ ಅಪಾರ ನಷ್ಟ ಅನುಭವಿಸುವಂತಾಗಿದೆ. ಭತ್ತದ ನಾಟಿ ಮಾಡಿದ ಬಳಿಕ ಗದ್ದೆಯಲ್ಲಿ ಹೆಚ್ಚು ನೀರು ನಿಲ್ಲದಂತೆ ತಗ್ಗು ಪ್ರದೇಶದ ಗದ್ದೆಗಳಿಗೆ ನೀರನ್ನು ಹಾಯಿಸಲಾಗುತ್ತದೆ. ಮೊದಲು ಒಂದೇ ಗದ್ದೆಯಲ್ಲಿ ಪಾಚಿ ಆವರಿಸಿದ್ದು, ಗದ್ದೆಯಲ್ಲಿ ಹೆಚ್ಚಾದ ನೀರು ಇನ್ನೊಂದು ಗದ್ದೆಗೆ ಹಾಯಿಸಿದ್ದರಿಂದ ಒಂದೇ ಭಾಗದಲ್ಲಿರುವ ಸುಮಾರು ಆರೇಳು ಗದ್ದೆಗಳಿಗೂ ಪಾಚಿ ವಿಸ್ತರಿಸಿದೆ. ಇದರಲ್ಲಿ ಮೂರು ಗದ್ದೆಗಳಲ್ಲಿ ನೇಜಿ ಸಂಪೂರ್ಣ ನಾಶವಾಗಿದೆ. ಪಾಚಿ ಸಮಸ್ಯೆಯ ಗಂಭೀರತೆ ಎಷ್ಟಿತ್ತೆಂದರೆ ನಾಟಿ ಮಾಡಿರುವ ಗದ್ದೆಗಳ ಮೇಲೆ ಕಣ್ಣು ಹಾಯಿಸಿದರೆ ನಾಟಿ ಮಾಡಿರುವ ಕುರುಗಳೇ ಸಿಗುತ್ತಿಲ್ಲ. ಅಷ್ಟರಮಟ್ಟಿಗೆ ಪಾಚಿ ತನ್ನ ಪ್ರಭಾವವನ್ನು ಬೀರಿದೆ. ಇನ್ನು ಗದ್ದೆಗಳಲ್ಲಿರುವ ಪಾಚಿಯನ್ನು ಮೇಲೆಕ್ಕೆತ್ತಿ ಹಾಕಲಾಗುತ್ತಿದೆಯಾದರೂ ಅದು ಇನ್ನಷ್ಟು ವ್ಯಾಪಿಸುತ್ತಿದೆ. ಮೇಲೆತ್ತಿ ಹಾಕಿದಷ್ಟು ದುಪ್ಪಟ್ಟು ವ್ಯಾಪಿಸುವ ಪಾಚಿಯಿಂದಾಗಿ ಕೃಷಿಕ ಗಂಗಾಧರ ಪೂಜಾರಿ ಹೈರಾಣಾಗಿದ್ದಾರೆ.

ಚಕ್ರೇಶ್ವರಿ ದೇವಸ್ಥಾನ ಸಮೀಪದ ಸುಮಾರು 3 ಎಕರೆ ಗದ್ದೆಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಇದಕ್ಕೆ ಉಪ್ಪು ನೀರಿನ ದಾಂಗುಡಿಯೂ ಪ್ರಮುಖ ಕಾರಣವಾಗಿದೆ. 3 ಎಕರೆ ಗದ್ದೆಯ ಉಳುಮೆ, ನಾಟಿ ಕಾರ್ಯಕ್ಕೆ ಸುಮಾರು 60 ರಿಂದ 70 ಸಾವಿರ ರೂ. ಖರ್ಚು ಮಾಡಿದ್ದಾರೆ. ಇದೀಗ ಗದ್ದೆಯಲ್ಲಿ ಪಾಚಿ ಬೆಳೆದಿರುವುದರಿಂದ ಮತ್ತಷ್ಟು ಆತಂಕಕ್ಕೆ ಎಡೆ ಮಾಡಿದೆ.

Related posts

Leave a Reply

Your email address will not be published. Required fields are marked *