Header Ads
Header Ads
Breaking News

ಕೃಷಿ ಅಧಿಕಾರಿಯ ಕೃಷಿ ಪ್ರೀತಿ ಪುತ್ತೂರಲ್ಲೊಬ್ಬ ’ಬೇಸಾಯಗಾರ’ ಸಬ್‌ಇನ್ಸ್‌ಪೆಕ್ಟರ್

 

ಪುತ್ತೂರು; ಬೇಸಾಯ ಎಂದ ಕೂಡಲೇ ಮಾರುದ್ದ ದೂರ ಓಡುವ ಮಂದಿಗಳ ನಡುವೆ ಕೃಷಿ ಕೆಲಸ ಮಾಡುತ್ತಲೇ ಬದುಕುವ ನೂರಾರು ಕುಟುಂಬಗಳಿವೆ. ಹಲವಾರು ಯುವಕರು ತಮ್ಮ ಸಾಂಪ್ರದಾಯಿಕ ಬೆಳೆಯನ್ನು ಕುಲಕಸುಬು ಎಂದೇ ನಂಬಿಕೊಂಡು ಇವತ್ತಿಗೂ ಗದ್ದೆಗಳನ್ನು ಉತ್ತು ಬೆಳೆ ತೆಗೆಯುವ ಕಾಯಕದಲ್ಲಿ ತೊಡಗಿದ್ದಾರೆ. ಆದರೆ ಬಹುತೇಕ ಮಂದಿ ಯುವ ವಿದ್ಯಾವಂತರು ಕೃಷಿ ಬಗ್ಗೆ ಅನಾಸಕ್ತಿ ತೋರಿಸುತ್ತಿದ್ದಾರೆ. ಬೇಸಾಯದ ಕೆಲಸವೆಂದರೆ ವಿದ್ಯೆ ಇಲ್ಲದ ಮಂದಿಯ ಉದ್ಯೋಗ ಎಂದು ಭಾವಿಸುವ ಜನತೆಯೂ ಇದ್ದಾರೆ. ಇಂತವರ ಮಧ್ಯೆ ಉತ್ತಮವಾದ ಸರಕಾರಿ ಕೆಲಸದಲ್ಲಿದ್ದರೂ ತಮ್ಮ ಕೃಷಿ ಪ್ರೇಮದಿಂದ ಭತ್ತದ ಬೆಳೆ ತೆಗೆಯುವ ಕಾಯಕ ನಡೆಸುತ್ತಿರುವ ವ್ಯಕ್ತಿಯೊಬ್ಬರು ಪುತ್ತೂರು ಕಸಬಾ ಗ್ರಾಮದಲ್ಲಿದ್ದಾರೆ. ಪುತ್ತೂರು ಅಬಕಾರಿ ಇಲಾಖೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿರುವ ಅಂಗಾರ ಟಿ. ಪಡೀಲು ವೃತ್ತಿ ಪ್ರೇಮ ಹಾಗೂ ಪ್ರವೃತ್ತಿ ಪ್ರೇಮವನ್ನು ಸಮಾನವಾಗಿ ನಿಭಾಯಿಸುತ್ತಿರುವ ಮೂಲಕ ಇಂದಿನ ಯುವ ಜನತೆಗೆ ಮಾದರಿಯಾಗಿದ್ದಾರೆ.
ನಗರದ ಹೃದಯಭಾಗದಲ್ಲಿರುವ ಚಿಕ್ಕಪುತ್ತೂರಿನಲ್ಲಿ ಇಂತಹದ್ದೊಂದು ಭತ್ತದ ಬೆಳೆಯುವ ಕಾಯಕ ನಡೆಯುತ್ತಿದೆ ಎಂಬುವುದು ಸ್ವತಹಾ ಕೃಷಿ ಇಲಾಖೆಗೂ ಗೊತ್ತಿದೆಯೋ ಇಲ್ಲವೋ.. ಇಲ್ಲಿ ಸುಮಾರು ೧೫ ಎಕರೆಯಷ್ಟು ಪ್ರದೇಶ ಈಗಲೂ ಗದ್ದೆಯಾಗಿಯೇ ಉಳಿದುಕೊಂಡಿದೆ. ಆದರೆ ೩-೪ ಎಕರೆಗಳನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಗದ್ದೆಗಳು ಹುಲ್ಲು ತುಂಬಿ ಹಡೀಲು ಬಿದ್ದಿದೆ. ಇಲ್ಲಿ ಅಂಗಾರ ಪಡೀಲು ಇವರ ತಂದೆ ಹಾರಾಡಿ ಪಕೀರ ಮೊಗೇರರಿಗೆ ೧೯೭೨ರ ಭೂಸುಧಾರಣೆ ಕಾನೂನು ಅಡಿಯಲ್ಲಿ ಸಿಕ್ಕಿದ ಭೂಮಿ ಇದೆ. ಅಲ್ಲಿಂದ ಇಲ್ಲಿವರೆಗೂ ಭತ್ತದ ಬೆಳೆ ತೆಗೆಯುವ ಕಾಯಕ ನಡೆಯುತ್ತಲೇ ಇದೆ. ತಂದೆಯ ನಂತರ ಇದೀಗ ಕಳೆದ ೨೪ ವರ್ಷಗಳಿಂದ ಈ ಕಾಯಕಕ್ಕೆ ಇಳಿದವರು ಅಂಗಾರ. ಏಣೇಲು ಹಾಗೂ ಸುಗ್ಗಿ ಬೆಳೆಯನ್ನು ನಿರಂತರವಾಗಿ ಮಾಡುತ್ತಿರುವ ಇವರು ತಮ್ಮ ಸರಕಾರಿ ವೃತ್ತಿಯ ಬಿಡುವಿನ ವೇಳೆಯನ್ನು ಭತ್ತದ ಬೆಳೆ ಹಾಗೂ ತರಕಾರಿ ಕೃಷಿಗಾಗಿ ಮೀಸಲಿಟ್ಟಿದ್ದಾರೆ.
ತಮ್ಮ ಪಡೀಲಿನ ಮನೆಯಿಂದ ೧ ಕಿ.ಮೀ ದೂರದಲ್ಲಿರುವ ಈ ಗದ್ದೆಗೆ ಮುಂಜಾನೆ ೬ ಗಂಟೆಗೆ ಬರುವ ಅಂಗಾರರು ಭತ್ತದ ಬೆಳೆಯ ಕಾಯಕದಲ್ಲಿ ಮುಳುಗಿ ಬಿಡುತ್ತಾರೆ. ಅಲ್ಲಿಂದ ಬಂದವರೇ ತಮ್ಮ ಸರಕಾರಿ ವೃತ್ತಿಗೆ ಹಾಜರ್. ಸಂಜೆಯಾಯಿತೆಂದರೆ ಸಾಕು ಮತ್ತೆ ಕೃಷಿ ಕೆಲಸದತ್ತ ಗಮನ.
ಕೆಲವು ವರ್ಷಗಳ ಹಿಂದಿನವರೆಗೆ ತಾನೇ ಕೋಣಗಳನ್ನು ಕಟ್ಟಿಕೊಂಡು ಉಳುಮೆ ಮಾಡುತ್ತಿದ್ದ ಇವರು ಇದೀಗ ಟ್ರ್ಯಾಕ್ಟರ್ ಖರೀದಿಸಿ ಹೊಲವನ್ನು ತಾವೇ ಉಳುಮೆ ಮಾಡುತ್ತಾರೆ. ನೇಜಿ ನಾಟಿ, ಕೊಯಿಲು, ಭತ್ತ ಬೇರ್ಪಡಿಸುವಿಕೆ ಹೀಗೆ ಎಲ್ಲವನ್ನೂ ತಾನೇ ಮುಂದೆ ನಿಂತು ಮಾಡುವ ಇವರೊಬ್ಬ ಅಪ್ಪಟ ರೈತ.
ಹಟ್ಟಿಗೊಬ್ಬರ ಹಾಗೂ ಸೊಪ್ಪು ಬಳಕೆ ಮಾಡಿ ಬೇಸಾಯ ಮಾಡುತ್ತಿದ್ದಾಗ ೭ ಕ್ವಿಂಟಾಲ್ ಭತ್ತ ಪಡೆಯುತ್ತಿದ್ದ ಇದೇ ಗದ್ದೆಯಲ್ಲಿ ಈಗ ೨೬ ಕ್ವಿಂಟಾಲ್ ಭತ್ತ ಪಡೆಯುವ ಅಂಗಾರರ ಸಾಧನೆ ಶ್ಲಾಘನೀಯವಾಗಿದೆ. ಈ ಚಿಕ್ಕಪುತ್ತೂರು ಪ್ರದೇಶದಲ್ಲಿ ಹಲವರು ಭತ್ತದ ಕೃಷಿ ಮಾಡುತ್ತಿದ್ದರೂ ಕೃಷಿ ಇಲಾಖೆಯ ಯಾವ ಸೌಲಭ್ಯವೂ ಇಂದಿನವರೆಗೆ ಇವರಿಗೆ ದೊರೆತಿಲ್ಲವಂತೆ…!
ಅಬಕಾರಿ ಇಲಾಖೆಯಲ್ಲಿ ಅಧಿಕಾರವಿದ್ದರೂ ಇವರು ತನ್ನನ್ನು ಸಾಮಾಜಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ತನ್ನ ಉತ್ಪತ್ತಿಯ ಒಂದು ಭಾಗವನ್ನು ಇಂತಹ ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಾಗಿಟ್ಟಿದ್ದಾರೆ. ತಾಲೂಕು ಮೊಗೇರ ಸಂಘ, ಯುವಕ ಮಂಡಲ, ಯುವತಿ ಮಂಡಲ, ಧಾರ್ಮಿಕ ಸೇವೆ, ಮೊಗೇರ ಯುವಜನ ವೇದಿಕೆ, ಮೊಗೇರ ವಿದ್ಯಾರ್ಥಿ ಸಂಘ ಹೀಗೆ ತನ್ನ ಕಾರ್ಯಕ್ಷೇತ್ರವನ್ನು ವಿಶಾಲ ಮಾಡಿಕೊಂಡಿರುವ ಇವರಿಗೆ ಬಂಟ್ವಾಳ ತಾಲೂಕಿನ ಪೆರುವಾಯಿ ಕನಕಶ್ರೀ ಯುವಕ ಯುವತಿ ವೃಂದ ನೀಡಿದ ’ಕನಕಶ್ರೀ’ ಪ್ರಶಸ್ತಿ, ನೆಹರು ಯುವಕೇಂದ್ರದ ’ಯುವಪ್ರಶಸ್ತಿ’ ಹೀಗೆ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿದೆ. ಸಾಕ್ಷರತಾ ಆಂದೋಲನದಲ್ಲಿ ಮುಖ್ಯ ಸ್ವಯಂಸೇವಕರಾಗಿ ಇವರ ದುಡಿಮೆ ಅಪಾರ. ಜನಪರ ಕಾಳಜಿಯ ಈ ಅಬಕಾರಿ ಅಧಿಕಾರಿಯ ಈ ಕೃಷಿ ಪ್ರೀತಿಗೆ ಮಾತ್ರ ಎಣೆಯಿಲ್ಲ. ಎಲ್‌ಐಸಿಯಲ್ಲಿ ಉದ್ಯೋಗಿಯಾಗಿರುವ ಪತ್ನಿ ಸುಂದರಿ, ಕೋಣಾಜೆ ಮಂಗಳಗಂಗೋತ್ರಿಯಲ್ಲಿ ಎಂಎಸ್‌ಸಿ ಮಾಡುತ್ತಿರುವ ಮಗ ಅರವಿಂದ್ ಹಾಗೂ ವಿವೇಕಾನಂದ ಕಾಲೇಜಿನಲ್ಲಿ ಬಿಕಾಂ ಮಾಡುತ್ತಿರುವ ಮಗಳು ಸತ್ಯಶ್ರೀ ಒಳಗೊಂಡ ಪುಟ್ಟ ಸಂಸಾರ ಇವರ ಬೇಸಾಯದ ಕಾಯಕಕ್ಕೆ ಸದಾ ಬೆಂಗಾವಲಾಗಿ ನಿಂತಿದೆ.

ಬೇಸಾಯದಿಂದ ಮನಸ್ಸಿಗೆ ತೃಪ್ತಿ
ಭತ್ತದ ಬೇಸಾಯ ನಮ್ಮ ಕುಲ ಕಸುಬು ಎಂದುಕೊಂಡು ಸರಕಾರ ನಮಗೆ ಕೊಟ್ಟ ಈ ಹೊಲದಲ್ಲಿ ಭತ್ತ ಬೆಳೆಯುತ್ತಿದ್ದೇವೆ. ಕೃಷಿಯನ್ನು ನಿರ್ಲಕ್ಷ್ಯ ಮಾಡಬೇಡಿ. ಇದು ಬದುಕಿಗೆ ದಾರಿ ಎಂದು ಹೇಳುತ್ತಿದ್ದ ತಂದೆಯವರ ಮಾತಿನಂತೆ ಈ ಕಾಯಕ ನಡೆಸುತ್ತಲೇ ಬಂದಿದ್ದೇವೆ. ಆದರೆ ಈಗೀಗ ಕೃಷಿ ಕಾರ್ಮಿಕರ ಕೊರತೆ, ಸೊಪ್ಪು,ಗೊಬ್ಬರದ ಕೊರತೆ ನಡುವೆ ಬೇಸಾಯ ಕಷ್ಟದಾಯಕ. ಆದರೂ ಗದ್ದೆ ಬೇಸಾಯ ಮನಸ್ಸಿಗೆ ತೃಪ್ತಿ ನೀಡುತ್ತದೆ. ಇದರ ನಡುವೆ ನಿಂತರೆ ಸಾಕು ಯಾವ ಉದ್ಯೋಗವೂ ಈ ಬಗೆಯ ಖುಷಿ ಕೊಡಲು ಸಾಧ್ಯವೇ ಇಲ್ಲ. ಹಾಗಾಗಿ ಸರಕಾರಿ ಕೆಲಸದ ಮಧ್ಯೆಯೂ ಈ ಬೇಸಾಯ ಮಾಡುತ್ತಿದ್ದೇನೆ- ಅಂಗಾರ ಟಿ. ಪಡೀಲು
ಅಧಿಕಾರಿ ’ಕೃಷಿಕ’ ಮಾದರಿ
ಸಾಮಾನ್ಯವಾಗಿ ಎಲ್ಲರೂ ಭತ್ತದ ಗದ್ದೆಗಳಲ್ಲಿ ಅಡಿಕೆ ನೆಟ್ಟು ಕೃಷಿ ಬದಲಾಯಿಸಿದರೂ ಅಂಗಾರರು ಮಾತ್ರ ನಿಷ್ಟೆಯಿಂದ ತಮ್ಮ ಕಾಯಕ ಮಾಡುತ್ತಿದ್ದಾರೆ. ಒಬ್ಬ ಪ್ರಗತಿಪರ ಕೃಷಿಕನಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಉತ್ತಮ ಹುದ್ದೆ ಇದ್ದರೂ ತಮ್ಮ ಹೊಲದಲ್ಲಿ ತಾವೇ ದುಡಿಯುವುದನ್ನು ನೋಡಿದರೆ ಇವರು ಇಂದಿನ ಯುವ ಜನಾಂಗಕ್ಕೆ ಮಾದರಿ. ಇಂತವರನ್ನು ಗುರುತಿಸುವ ಕೆಲಸ ಆಗಬೇಕಾಗಿದೆ.- ಸಾಮಾಜಿಕ ಕಾರ್ಯಕರ್ತ ಲೋಕೇಶ್ ಗೌಡ ಅಲುಂಬುಡ.
ಬಾಕಿ ಇರುವ ನೀರಿನ ಬಿಲ್ ೧೫ ದಿನಗಳೊಳಗೆ ಪಾವತಿಸಿ
ಇಲ್ಲವಾದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು
ಮೇಯರ್ ಕವಿತಾ ಸನಿಲ್ ಖಡಕ್ ಸೂಚನೆ
೫೦ ಸಾವಿರ ನೀರಿನ ಸಂಪರ್ಕಗಳಿಂದ ಬಿಲ್ ಬಾಕಿ
ನೀರಿನ ಬಿಲ್ ಪಾವತಿಸಲು ೧೫ ದಿನ ಗಡುವು

ಮಂಗಳೂರು ಮಹಾನಗರ ಪಾಲಿಕೆಗೆ ಬಾಕಿಯಿರುವ ನೀರಿನ ಬಿಲ್ ಪಾವತಿಗೆ ೧೫ ದಿನಗಳ ಕಾಲಾವಕಾಶ ನೀಡಲಾಗುವುದು. ಬಳಿಕವೂ ಪಾವತಿಸದಿದ್ದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.

ಅವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಖಡಕ್ ಆದೇಶ ನೀಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಗೆ ಸುಮಾರು ೫೦ ಸಾವಿರ ನೀರಿನ ಸಂಪರ್ಕಗಳಿಂದ ಬಿಲ್ ಬಾಕಿ ಇದೆ. ಈ ಪೈಕಿ ಕಳೆದ ೧೭ ವರ್ಷಗಳಿಂದಲೂ ಬಾಕಿಯಿರುವ ಪ್ರಕರಣಗಳಿವೆ, ಗೃಹಬಳಕೆಯ ಸಂಪರ್ಕ ಹೊಂದಿರುವ ಒಬ್ಬ ವ್ಯಕ್ತಿಯದ್ದೇ ೭, ೪೭೦೦೦ ರೂಪಯಿ ಬಾಕಿಯಿದೆ. ಉಳಿದಂತೆ ೧ ಲಕ್ಷ ರೂಪಾಯಿಗಿಂತಲೂ ಅಧಿಕ ನೀರಿನ ಬಿಲ್ ಬಾಕಿಯಿರುವ ೧೬೬ ಸಂಪರ್ಕವಿದೆ ಎಂದು ಮಾಹಿತಿ ನೀಡಿದರು. ಇನ್ನು ಬಾಕಿ ಮೊತ್ತ ಪಾವತಿಸಲು ೧೫ ದಿನಗಳ ಗಡುವು ನೀಡಲಾಗುವುದು. ಅದರೊಳಗೆ ಪಾವತಿಸದಿದ್ದಲ್ಲಿ ಅಂಥವರ ಹೆಸರನ್ನು ಮಾಧ್ಯಮ ಪ್ರಕಟನೆಯ ಮೂಲಕ ಬಹಿರಂಗ ಪಡಿಸಲಾಗುವುದು. ಹಾಗೂ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಚಿದು ಎಚ್ಚರಿಸಿದರು.

Related posts

Leave a Reply