Breaking News

ಕೃಷಿ ಅಭಿವೃದ್ಧಿಗೆ ಪೂರಕ ಯೋಜನೆ ನಿರ್ಮಿಸುವ ಹೇಳಿಕೆ, ಬೃಹತ್ ಕಾಲುವೆ ನಿರ್ಮಿಸಿ ರೈತರನ್ನು ಕತ್ತಲಲ್ಲಿಡುವ ಹುನ್ನಾರ ಆರೋಪ


ಅಂತರ್ಜಲ ವೃದ್ದಿಸಿ ಕೃಷಿ ಅಭಿವೃದ್ದಿಗೆ ಪೂರಕವಾಗುವ ಯೋಜನೆ ನಿರ್ಮಿಸುವುದಾಗಿ ಹೇಳಿ ಬೃಹತ್ ಕಾಲುವೆಯೊಂದನ್ನು ನಿರ್ಮಿಸಿ ಖಾಸಗಿ ಕಂಪೆನಿಯೊಂದು ರೈತರನ್ನು ಕತ್ತಲಲ್ಲಿಡುವ ಹುನ್ನಾರ ನಡೆಸುತ್ತಿರುವ ಬಗ್ಗೆ ಸಂತ್ರಸ್ತರಿಂದ ಆರೋಪ ಕೇಳಿ ಬಂದಿದೆ. ಕಂಪೆನಿಯ ಅವೈಜ್ಞಾನಿಕ ಯೋಜನೆಯಿಂದಾಗಿ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಹಾಗೂ ತೆಂಕಬೆಳ್ಳೂರು ಗ್ರಾಮದ ರೈತರ ನೂರಾರು ಎಕರೆ ಕೃಷಿ ಭೂಮಿ ಸಾಗುವಳಿ ಮಾಡಲು ಸಾಧ್ಯವಾಗದೆ ಕಳೆದ ಎರಡು ವರ್ಷಗಳಿಂದ ಹಡಿಲು ಬಿದ್ದಿದೆ. ಇಂತಹ ಗೊಂದಲದ ನಡುವೆಯೂ ಕಂಪೆನಿ ಕಾಲುವೆಯನ್ನು ಉದ್ಘಾಟಿಸಲು ಮುಂದಾಗಿದೆ. ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಹಾಗೂ ತೆಂಕಬೆಳ್ಳೂರು ಗ್ರಾಮದಲ್ಲಿ ಮಂಗಳೂರಿನಲ್ಲಿ ಕಚೇರಿ ಹೊಂದಿರುವ ಖಾಸಗಿ ಕಂಪೆನಿಯೊಂದು ಸುಮಾರು ಎರಡು ಕೊಟಿ ರುಪಾಯಿ ವೆಚ್ಚದ ನೀರಿಂಗಿಸುವ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಈ ಸಂಬಂಧ ಈ ಎರಡು ಗ್ರಾಮಗಳ ಮದ್ಯೆ ಹಾದು ಹೋಗುವ ತೊರೆಯೊಂದಕ್ಕೆ ಕಾಲುವೆ ನಿರ್ಮಿಸುವ ಸಲುವಾಗಿ ಅದರ ಇಕ್ಕೆಲಗಳ ಬದುಗಳ ಮಣ್ಣನ್ನು ಹಾಗೂ ತೊರೆಯ ಮರಳನ್ನು ಪಕ್ಕದ ಭತ್ತ ಗದ್ದೆಗೆ ಹಾಕಲಾಗಿದೆ. ಇದರಿಂದಾಗಿ ಕಳೆದರೆಡು ವರ್ಷಗಳಿಂದ ಈ ಭಾಗದ ರೈತರು ಕೃಷಿ ನಡೆಸಲು ಸಾಧ್ಯವಾಗದೆ ಹಡಿಲು ಬಿಡುವ ಸ್ಥಿತಿ ನಿರ್ಮಾಣವಾಗಿದೆ. ಗದ್ದೆಯ ಬದುಗಳಿಗೆ ಕಲ್ಲಿನ ರಚನೆಯನ್ನು ನಿರ್ಮಿಸಿ ಕೊಡುವುದಾಗಿ ಹೇಳಿದ್ದ ಕಂಪೆನಿ ಮಾತು ತಪ್ಪಿದೆ. ತೊರೆಯ ಬದುಗಳಿಗೆ ಈ ಹಿಂದೆ ಕಟ್ಟಲಾಗಿದ್ದ ಕಪ್ಪುಕಲ್ಲಿನ ತಡೆಗೋಡೆಯನ್ನು ಕಾಮಗಾರಿಯ ವೇಳೆ ತೆರವುಗೊಳಿಸಿರುವುದರಿಂದ ಬದುಗಳಲ್ಲಿ ಮಣ್ಣಿ ಸವೆತ ಉಂಟಾಗಿದೆ. ತೊರೆಯ ಇಕ್ಕೆಲಗಳಲ್ಲಿ ಮಣ್ಣಿನ ಸವಕಳಿಯಿಂದ ರಕ್ಷಿಸಲು ನೆಟ್ಟು ಬೆಳಸಲಾಗಿದ್ದ ಮರಗಳೆಲ್ಲಾ ಜೆಸಿಬಿ ಯಂತ್ರಕ್ಕೆ ಸಿಕ್ಕಿ ಧರಶಾಹಿಯಾಗಿದೆ. ಇಷ್ಟೆಲ್ಲಾ ಕಾಮಗಾರಿಗಳನ್ನು ಕಂಪೆನಿ ಸ್ಥಳೀಯ ರೈತರನ್ನು ವಿಶ್ವಾಸಕ್ಕೆ ಪಡೆಯದೆ, ಜಮೀನಿನ ಮಾಲೀಕರ ಗಮನಕ್ಕೆ ತಾರದೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಬಡಗಬೆಳ್ಳೂರು ಗ್ರಾಮದ ಕೃಷಿ ಭೂಮಿಯ ಮಧ್ಯೆ ಹಾದು ಹೋಗುವ ತೊರೆಯಲ್ಲಿ ಸುಮಾರು ೧೫೦ ಮೀಟರ್ ಉದ್ದಕ್ಕೆ ಕಾಲುವೆಯನ್ನು ನಿರ್ಮಿಸಲಾಗಿದೆ. ಆದರೆ ಇದು ತೀರಾ ಅಪಾಯಕಾರಿ ಸ್ಥಿತಿಯಲ್ಲಿದೆ. ಕಾಲುವೆಯ ಇಕ್ಕೆಲಗಳನ್ನು ಇಳಿಜಾರು ಮಾದರಿಯಲ್ಲಿ ನಿರ್ಮಿಸಿ ಅದಕ್ಕೆ ಕಲ್ಲಿನ ಕಡಬ ಹಾಗೂ ಟೈಲ್ಸ್‌ಗಳನ್ನು ಅಳವಡಿಸಲಾಗಿದೆ. ಕೇವಲ ೧೫೦ ಮೀಟರ್ ಉದ್ದಕ್ಕೆ ಮಾತ್ರ ಕಾಲುವೆ ನಿರ್ಮಿಸಿ ಐದು ಕಿ. ಮೀ. ಉದ್ದಕ್ಕೆ ತೊರೆಗಳ ಬದುಗಳನ್ನು ಸರಿಸಲಾಗಿದೆ. ಇಲ್ಲಿರುವ ಕೃಷಿ ಭೂಮಿಗಳಿಗೆ ರೈತರು ಕಾಲುವೆಯ ಬದುಗಳ ಮೂಲಕವೇ ಹೋಗ ಬೇಕಾಗುರುವುದರಿಂದ ಮಳೆಗಾಲದಲ್ಲಿ ಸ್ವಲ್ಪ ಎಡವಿ ಬಿದ್ದರೂ ಕಾಲುವೆ ಪಾಲಾಗುವ ಭೀತಿ ಇದೆ. ಅಲ್ಲದೆ ತೊರೆಯನ್ನು ದಾಟಲು ಕಿರು ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಅದರ ಆಧಾರ ಸ್ತಂಭಗಳ ಸುರಕ್ಷತೆಗೆ ತೊರೆಯಲ್ಲಿ ಸಿಕ್ಕ ನಕಲಿ ಕಲ್ಲುಗಳನ್ನು ಕಟ್ಟಲಾಗಿದ್ದು ಕುಸಿಯುವ ಸ್ಥಿತಿಯಲ್ಲಿದೆ. ಇದನ್ನು ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಡೆದಾಡಲು ಅವಲಂಬಿಸಿದ್ದು ಅಪಾಯ ಕಟ್ಟಿಟ್ಟ ಬುತ್ತಿ.
ಅವೈಜ್ಞಾನಿಕ ಕಾಮಗಾರಿ ಹಾಗೂ ಕಂಪೆನಿ ರೈತರ ವಿರುದ್ದ ನಡೆಸುತ್ತಿರುವ ಹುನ್ನಾರದ ಬಗ್ಗೆ ಈಗಾಗಲೇ ಗ್ರಾಮಸ್ಥರು ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಲಿಖಿತ ದೂರು ಸಲ್ಲಿಸಿದೆ. ಕಾಮಗಾರಿಯ ಹೆಸರಿನಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ. ಇಷ್ಟೆಲ್ಲಾ ಗೊಂದಲ ಹಾಗೂ ರೈತರ ವಿರೋಧ ಮಧ್ಯೆಯೂ ಇಂದು ಕಂಪೆನಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡಲು ಮುಂದಾಗಿದೆ.

Related posts

Leave a Reply