Header Ads
Header Ads
Breaking News

ಕೃಷಿ ಯಂತ್ರ ಮೇಳದಲ್ಲಿ ಕೇಂದ್ರಬಿಂದುವಾದ ಕನಸಿನ ಮನೆ

ಸುಂದರ ಮನೆ ಕಟ್ಟಿ ನೆಮ್ಮದಿ ಜೀವನ ಸಾಗಿಸಬೇಕೆಂಬ ಕನಸು ಯಾರಿಗಿಲ್ಲ ಹೇಳಿ. ಆದರೆ ಈ ಕನಸಿನನ್ನು ಪೂರೈಸಿಕೊಳ್ಳೋರು ಮಾತ್ರ ಬೆರಳೆಣಿಕೆಯ ಮಂದಿ ಮಾತ್ರ. ಮನೆ ನಿರ್ಮಾಣಕ್ಕೆ ತಗಲುವ ಭಾರೀ ವೆಚ್ಚದಿಂದಾಗಿ ಬಹುತೇಕ ಮಂದಿಗೆ ತಮ್ಮ ಸ್ವಂತ ಸೂರು ನಿರ್ಮಿಸುವ ಇಚ್ಛೆ ಇಂದಿಗೂ ಈಡೇರಿಲ್ಲ. ಇಂಥಹ ಕುಟುಂಬಗಳಿಗಾಗಿಯೇ ಅತೀ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಮನೆ ನಿರ್ಮಾಣದ ಕನಸಿನ ಮನೆಗಳೂ ಇದೀಗ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ದಕ್ಷಿಣಕನ್ನಡ ಜಿಲ್ಲೆಯು ಪುತ್ತೂರಿನಲ್ಲಿ ನಡೆಯುತ್ತಿರುವ ಕೃಷಿಯಂತ್ರ ಮೇಳದಲ್ಲಿರುವ ಈ ಮನೆ ಎಲ್ಲರ ಆಕರ್ಷಣೆಯ ಕೇಂದ್ರಬಿಂದೂ ಆಗಿದೆ.
ಮೇಲ್ನೋಟಕ್ಕೆ ನೋಡಿದಲ್ಲಿ ಅತ್ಯಂತ ಸುಂದರವಾಗಿ, ಭವ್ಯವಾಗಿ ಕಾಣುವ ಈ ಮನೆ ನಿರ್ಮಾಣಕ್ಕೆ ಕನಿಷ್ಟ ಪಕ್ಷ 25 ಲಕ್ಷವಾದರೂ ವೆಚ್ಚವಾಗಿರಬಹುದು ಎನ್ನುವ ಮಾತು ಎಲ್ಲರ ಬಾಯಿಂದಲೂ ಕೇಳಿ ಬರುತ್ತಿತ್ತು. ಹೌದು ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಕಾಲೇಜು ಆವರಣದಲ್ಲಿ ಆರಂಭಗೊಂಡ ಕೃಷಿಯಂತ್ರ ಮೇಳದಲ್ಲಿ ನಿರ್ಮಾಣಗೊಂಡಿರುವ ಮನೆಯ ಕುರಿತು ಕೇಳಿ ಬರುತ್ತಿದ್ದ ಕಮೆಂಟ್ ಗಳು. ಆದರೆ ಈ ಮನೆ ಕೇವಲ ೬ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಮನೆ ಎಂದು ತಿಳಿದ ತಕ್ಷಣ ಎಲ್ಲರ ಮುಖದಲ್ಲಿ ಅಚ್ಚರಿಯ ಛಾಯೆಯೂ ಮೂಡುತ್ತಿತ್ತು. ಸಂಪೂರ್ಣ ಕಾಂಕ್ರೀಟ್ ಗೋಟೆಗಳನ್ನು ಬಳಸಿ ನಿರ್ಮಾಣಗೊಂಡ ಈ ಮನೆ ಎಲ್ಲರ ಆಕರ್ಷಣೆ ಕೇಂದ್ರ ಬಿಂದುವೂ ಆಗಿತ್ತು. ಸಂಪೂರ್ಣ ಗೋಡೆ, ಅಂದಕ್ಕೆ ತಕ್ಕ ಪೇಂಟಿಂಗ್, ಬಿಸಿಲು-ಗಾಳಿ-ಮಳೆಗೆ ಯಾವುದೇ ಸಮಸ್ಯೆಯನ್ನು ನೀಡಲು ಮೇಲ್ಘಾವಣಿ, ನಾಯಿ ಗೂಡು, ಬಾವಿಕಟ್ಟೆ, ತುಳಸಿಕಟ್ಟೆ ಹೀಗೆ ಒಂದು ಫುಲ್ ಫರ್ನಿಷ್ಡ್ ಮನೆಯಲ್ಲಿ ಏನೆಲ್ಲಾ ಇದೆಯೂ ಅದೆಲ್ಲವೂ ಈ ಮನೆ ಒಳಗೊಂಡಿದೆ. ಕೇವಲ ಒಂದು ವಾರದಲ್ಲಿ ನಿರ್ಮಾಣ ಮಾಡಬಲ್ಲ ಈ ಮನೆ ೫೫೦ ಸ್ವೇರ್ ಫೀಟ್ ವಿಸ್ತೀರ್ಣವನ್ನು ಹೊಂದಿದ್ದು, ಸಣ್ಣ ಕುಟುಂಬಗಳಿಗೆ ಹೇಳಿ ಮಾಡಿಸಿದ ಮನೆಯಂತಿದೆ. ಜಪಾನ್ ಹಾಗೂ ಇತರ ದೇಶಗಳಲ್ಲಿ ಮರವನ್ನೇ ಉಪಯೋಗಿಸಿ ಮನೆಯನ್ನು ನಿರ್ಮಿಸಲಾಗಿದ್ದು, ಇಲ್ಲಿ ಕಾಂಕ್ರೀಟ್ ನಿಂದಲೇ ಯಾಕೆ ಮನೆ ನಿರ್ಮಿಸಬಾರದು ಎನ್ನುವ ಛಾಲೆಂಜ್ ಮೂಲಕ ಈ ಕನಸಿನ ಮನೆ ನಿರ್ಮಿಸಲಾಗಿದೆ.
ಬಯಲು ಇನ್ನಿತರ ಪ್ರದೇಶಗಳಿಗೆ, ಹೋಮ್ ಸ್ಟೇ, ರೆಸಾರ್ಟ್ ಗಳನ್ನು ನಡೆಸುವ ವ್ಯಕ್ತಿಗಳಿಗೆ ಈ ಮನೆಗಳು ಹೇಳಿ ಮಾಡಿಸಿದಂತಿವೆ. ಎಲ್ಲಾ ಮನೆಗಳಲ್ಲಿರುವಂತಹ ಎಲ್ಲಾ ವ್ಯವಸ್ಥೆಗಳನ್ನೂ ಈ ಮನೆ ಹೊಂದಿದ್ದು, ಬಡವರ ಪಾಲಿಗೆ ಇವು ನಿಜವಾಗಿಯೂ ಕನಸಿನ ಮನೆಯೇ ಆಗಲಿದೆ. ಆದರೆ ಈ ಮನೆಗಳು ಬಯಲು ಸೀಮೆಯ ಪ್ರದೇಶ ಹಾಗೂ ಸಮತಟ್ಟಿನ ಪ್ರದೇಶಗಳಿಗೆ ಹೇಳಿ ಮಾಡಿಸಿದಂತಿರುವ ಈ ಮನೆಗಳು ಮಲೆನಾಡು ಪ್ರದೇಶಗಳಲ್ಲಿ ಬಳಕೆಯಾಗುವುದಿಲ್ಲ ಎನ್ನುವ ಅಭಿಪ್ರಾಯಗಳೂ ಕೇಳಿ ಬಂದಿದೆ. ಅತ್ಯಂತ ಹೆಚ್ಚಿನ ಪ್ರಮಾಣದ ಮಳೆ, ಗಾಳಿಯನ್ನು ತಡೆದುಕೊಳ್ಳುವ ಶಕ್ತಿ ಮನೆಗಳಿಗೆ ಇರುವ ಸಾಧ್ಯತೆ ಕಡಿಮೆ ಎನ್ನುವ ಆತಂಕವೂ ಮಲೆನಾಡಿನ ಜನರಲ್ಲಿದೆ.

ಒಟ್ಟಿನಲ್ಲಿ ಮನೆಕಟ್ಟಲು ಭಾರಿ ಪ್ರಮಾಣದ ಹಣವಿಲ್ಲ ಎಂದು ಕೊರಗುವವರಿಗೆ ಕನಸಿನ ಮನೆ ಕೊಂಚ ಮಟ್ಟಿನ ಸಮಾಧಾನ ನೀಡಲಿದೆ. ಕಾಂಕ್ರೀಟ್, ಕಬ್ಬಿಣ ಹಾಗೂ ಇತರ ಸಾಮಾಗ್ರಿಗಳನ್ನು ಬಳಸಿ ನಿರ್ಮಾಣಗೊಂಡಿರುವ ಈ ಮನೆ ಗಟ್ಟಿಮುಟ್ಟಾಗಿರುವ ಸಾಧ್ಯತೆಯೂ ಇದೆ.
ವರದಿ: ಪ್ರವೀಣ್ ಪುತ್ತೂರು

Related posts

Leave a Reply

Your email address will not be published. Required fields are marked *