Breaking News

ಕೃಷಿ ಸಾಲ ಮನ್ನಾ ರಾಜ್ಯಗಳ ಜವಾಬುದಾರಿ, ಕೇಂದ್ರದ ನೆರವಿಲ್ಲ ಎಂದ ಜೇಟ್ಲಿ

ಕೃಷಿ ಸಾಲ ಮನ್ನಾ ಮಾಡುವ ರಾಜ್ಯಗಳಿಗೆ ಆ ಹೊರೆ ಭರಿಸಲು ಯಾವುದೇ ರೀತಿಯ ನೆರವು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಕಡ್ಡಿ ಮುರಿದಂತೆ ಹೇಳಿದೆ.
ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರ ರೈತರ ರೂ. ೩೦ ಸಾವಿರ ಕೋಟಿ ಮೊತ್ತದ ಸಾಲ ಮನ್ನಾ ನಿರ್ಧಾರ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ತಾಳಿರುವ ಈ ದೃಢ ನಿಲುವು ಭಾರಿ ಮಹತ್ವ ಪಡೆದುಕೊಂಡಿದೆ. ಸಾಲ ಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಮೊದಲೇ ಸ್ಪಷ್ಟಪಡಿಸಿದೆ. ಅದನ್ನು ಬಿಟ್ಟು ಹೊಸದಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ರೈತರ ಸಾಲ ಮನ್ನಾದ ಹೊರೆ ಭರಿಸಲು ಕೇಂದ್ರವು ರಾಜ್ಯಗಳಿಗೆ ಬಿಡಿಗಾಸನ್ನೂ ನೀಡದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸ್ಪಷ್ಟಪಡಿಸಿದ್ದಾರೆ.
ಸಾಲ ಮನ್ನಾಕ್ಕೆ ಒತ್ತಾಯಿಸಿ ರೈತರು ನಡೆಸಿರುವ ಹೋರಾಟದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲಿದೆಯೇ ಪ್ರಶ್ನೆಗೆ ಜೇಟ್ಲಿ ಈ ರೀತಿ ಉತ್ತರಿಸಿದರು. ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ವಾರ್ಷಿಕ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ರೈತರ ಸಾಲ ಮನ್ನಾ ಮಾಡದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಸರ್ಕಾರಗಳಿಗೆ ಕಿವಿಮಾತು ಹೇಳಿತ್ತು. ಮಹಾರಾಷ್ಟ್ರಕ್ಕೂ ಮೊದಲು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ರೈತರ ರೂ. ೩೬,೩೫೯ ಕೋಟಿಯಷ್ಟು ಸಾಲ ಮನ್ನಾ ಮಾಡುವ ಮೂಲಕ ಕೃಷಿ ಸಾಲ ಮನ್ನಾ ಪ್ರವೃತ್ತಿಗೆ ನಾಂದಿ ಹಾಡಿತ್ತು.

Related posts

Leave a Reply