Header Ads
Breaking News

ಕೃಷ್ಣ ಮಠದ ಪಾಲಿಗೆ ಐತಿಹಾಸಿಕ ದಿನ : 40 ಕೋಟಿ ರೂ. ವೆಚ್ಚದ ಚಿನ್ನದ ಗೋಪುರ ಸಮರ್ಪಣೆ

ಉಡುಪಿ ಕೃಷ್ಣಮಠದ ಪಾಲಿಗೆ ಇಂದು ಐತಿಹಾಸಿಕ ದಿನ. ಪರ್ಯಾಯ ಪಲಿಮಾರು ಸ್ವಾಮಿಗಳ ಕನಸು ನನಸಾದ ಕ್ಷಣ! ಅಂದಾಜು 40 ಕೋಟಿ ವೆಚ್ಚದಲ್ಲಿ ನೂರು ಕೆ.ಜಿಗೂ ಅಧಿಕ ತೂಕದ ಚಿನ್ನವನ್ನು ಬಳಸಿ ಕೃಷ್ಣ ದೇವರ ಗರ್ಭಗುಡಿಗೆ ಸುವರ್ಣಗೋಪುರ ಅರ್ಪಿಸಲಾಯ್ತು. ಅಷ್ಟಮಠಾಧೀಶರು ಕಲಶಾಭಿಷೇಕ ಮಾಡಿದರೆ, ಸಾವಿರಾರು ಜನರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದ್ರು.ಮುಗಿಲು ಮುಟ್ಟಿದ ಗೋವಿಂದ ಜಪ.. ಗರ್ಭಗುಡಿಯ ಮುಡಿಗೇರಿದ ಮೂರು ಕಲಶಗಳಿಗೆ ವೈಭವದ ಅಲಂಕಾರ, ಅಷ್ಟಮಠಾಧೀಶರಿಂದ ನಿರಂತರ ನಾಲ್ಕು ಗಂಟೆಗಳ ಕಾಲ ಅಭಿಷೇಕ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಬಂದ ಸಹಸ್ರ ಸಹಸ್ರ ಭಕ್ತರು! ಉಡುಪಿಯ ಕೃಷ್ಣಮಠದ ಪಾಲಿಗೆ ಇಂದು ಮಹತ್ವದ ದಿನ. ಪಲಿಮಾರು ಸ್ವಾಮಿಗಳು ಕೃಷ್ಣಮಠದ ಗರ್ಭಗುಡಿಗೆ ಚಿನ್ನದ ಗೋಪುರ ಅರ್ಪಿಸಿದ್ದಾರೆ. ಒಂದು ವರ್ಷಗಳ ನಿರಂತರ ಕಾಮಗಾರಿಯ ಬಳಿಕ ಈ ಸುಂದರ ಗೋಪುರ ಕೃಷ್ಣಾರ್ಪಣಗೊಂಡಿದೆ. ಭಕ್ತರ ನೆರವಿನೊಂದಿಗೆ 40 ಕೋಟಿ ವೆಚ್ಚದಲ್ಲಿ ಈ ಗೋಪುರ ನಿರ್ಮಿಸಲಾಗಿದೆ. ನೂರು ಕೆಜಿಗೂ ಅಧಿಕ ಚಿನ್ನವನ್ನು ಈ ಗೋಪುರಕ್ಕೆ ಬಳಸಲಾಗಿದೆ. ಇಂದು ತತ್ವಹೋಮ, ಅಧಿವಾಸ ಹೋಮ, ಶಿಖರ ಪ್ರತಿಷ್ಟೆ, ಶಿಖರ ಕಲಶಪೂಜೆ, ಮಹಾ ಸುದರ್ಶನ ಹೋಮ ನಡೆಸಲಾಯ್ತು. ಮುಂಜಾನೆಯ ಶುಭಮುಹೂರ್ತದಲ್ಲಿ ಗೋಪುರ ಅರ್ಪಣೆಯಾದರೆ, ಇಡೀದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಪೇಜಾವರ ಶ್ರೀಗಳು ತಮ್ಮ ಇಳಿವಯಸ್ಸನ್ನೂ ನಾಚಿಸುವಂತೆ ಕೃಷ್ಣಮಠದ ಶಿಖರವೇರಿ ಅಭಿಷೇಕ ನಡೆಸಿದ್ದು ಭಕ್ತರಲ್ಲಿ ರೋಮಾಂಛನವುಂಟು ಮಾಡಿತು. ಕಲಶಾಭಿಷೇಕದ ವೇಳೆಯಲ್ಲೇ ಮಳೆಯ ಸಿಂಚನವಾದಾಗ ಭಕ್ತರು ಭಾವುಕರಾದರು. ನಿರಂತರ ಕೃಷ್ಣಜಪ ಹಾಗೂ ಗೋವಿಂದ ಘೋಷಣೆ ಮುಗಿಲುಮುಟ್ಟಿತ್ತು. ಐದು ಶತಮಾನಗಳ ಹಿಂದೆ ನಿರ್ಮಿತವಾದ ತಾಮ್ರದ ಗೋಪುರವನ್ನು ತೆರವು ಮಾಡಿ ಎರಡು ಹಂತಗಳ ಈ ಸುವರ್ಣ ಗೋಪುರ ನಿರ್ಮಾಣ ಮಾಡಲಾಗಿದೆ. ಮಠಕ್ಕೆ ಭೇಟಿ ಕೊಡುವ ಲಕ್ಷಾಂತರ ಭಕ್ತರಿಗೆ ಈ ಗೋಪುರ ಪ್ರಧಾನ ಆಕಷರ್ಣೆಯಾಗಲಿದೆ. ಮನುಷ್ಯನ ಮನಸ್ಸು ಚಿನ್ನದ ಮೇಲೆ ಹೆಚ್ಚು ಆಕರ್ಷಿತವಾಗೋದರಿಂದ ಕ್ಷೇತ್ರದ ವರ್ಚಸ್ಸು ಹೆಚ್ಚುತ್ತೆ ಅನ್ನೋದು ನಂಬಿಕೆ. ಬಂಗಾರದ ಕಿರಣಗಳು ತಾಕಿದರೆ ಮಾನವದೇಹದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತೆ ಅನ್ನುವ ವೈಜ್ಞಾನಿಕ ನಂಬಿಕೆಯೂ ಇದೆ.

 ದಕ್ಷಿಣ ಭಾರತದ ಪ್ರಸಿದ್ದ ವೈಷ್ಣವ ಕ್ಷೇತ್ರವಾದ ಉಡುಪಿಯ ಕೃಷ್ಣಮಠ ಇನ್ನು ಮುಂದೆ ಸುವರ್ಣ ಕ್ಷೇತ್ರವಾಗಿ ಕಂಗೊಳಿಸಲಿದೆ.ಮಠಕ್ಕೆ ಭೇಟಿಕೊಡುವ ಭಕ್ತರಿಗೆ ಈ ಗೋಪುರ ಪ್ರಧಾನ ಆಕರ್ಷಣೆಯಾಗಲಿದೆ.

Related posts

Leave a Reply

Your email address will not be published. Required fields are marked *