Header Ads
Header Ads
Breaking News

ಕೆಮ್ಮಿಂಜೆ ಗ್ರಾಮದಲ್ಲಿ ಕಿರು ಸೇತುವೆಗೆ ಬೇಡಿಕೆ

ಪುತ್ತೂರು : ಇದು ನಿನ್ನೆ ಮೊನ್ನೆಯ ಬೇಡಿಕೆಯಲ್ಲ, ಸಮಸ್ಯೆಯೂ ಅಲ್ಲ. ಬರೋಬ್ಬರಿ20ವರ್ಷಗಳ ಬೇಡಿಕೆ. ಈ ರಸ್ತೆಯಲ್ಲಿ ಕಿರುಸೇತುವೆ ರಚನೆಯಾಗಬೇಕೆಂಬ ಬೇಡಿಕೆಯನ್ನಿಡುತ್ತಾ ಬಂದಿದ್ದರೂ ಇದುವರೆಗೂ ಕಿರು ಸೇತುವೆ ರಚನೆಯಾಗಿಲ್ಲ ಎಂದು ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದಾರೆ ಇಲ್ಲಿಯ ಜನತೆ.ಇದು ಕೆಮ್ಮಿಂಜೆ ಗ್ರಾಮದ ಕೆಮ್ಮಿಂಜೆ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಕಿರು ಸೇತುವೆಯ ಬೇಡಿಕೆ ಈಡೇರದೆ ನೆನೆಗುದಿಗೆ ಬಿದ್ದಿರುವ ವಿಚಾರ.ಕೆಮ್ಮಿಂಜೆ ದೇವಸ್ಥಾನದ ಬಳಿಯಿಂದ ಕೆಮ್ಮಿಂಜೆ, ಮೊಟ್ಟೆತ್ತಡ್ಕ, ಬೆದ್ರಾಳ ಸಂಪರ್ಕ ರಸ್ತೆಗೆ ನಗರಸಭೆಯ ನಗರೋತ್ಥಾನ ಯೋಜನೆಯ ಅನುದಾನದಡಿ ಸುಮಾರು ಒಂದು ಕೋಟಿ ಅನುದಾನ ಮಂಜೂರುಗೊಂಡಿದೆ. ಈ ಅನುದಾನದಲ್ಲಿ ಸ್ಥಳೀಯ ಜನರ ಬಹುದಿನಗಳ ಬೇಡಿಕೆಯಾದ ಕೆಮ್ಮಿಂಜೆ ದೇವಸ್ಥಾನದ ಬಳಿಯ ಕಿರುಸೇತುವೆಯೂ ಸೇರಿದೆ.ರಸ್ತೆ ಅಭಿವೃದ್ಧಿ ಹಾಗೂ ಈ ಕಿರು ಸೇತುವೆ ರಚನೆಗೆ ಸ್ಥಳೀಯ ಜನತೆಯ ಹಲವಾರು ಮನವಿಗಳಿಗೆ ಸ್ಪಂದಿಸಿದ ನಿಟ್ಟಿನಲ್ಲಿ ನಗರಸಭೆ ಕಳೆದ ಸಾಲಿನಲ್ಲಿ ಈ ಅನುದಾನ ಮಂಜೂರುಗೊಳಿಸಿ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು. ಅಲ್ಲದೆ ಆಗಿನ ಶಾಸಕಿ ಶಕುಂತಳಾ ಶೆಟ್ಟಿಯವರು ಈ ರಸ್ತೆ ಕಾಮಗಾರಿಗೆ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆಯನ್ನೂ ನೀಡಿದ್ದಾರೆ.

ಆದರೆ ಕಾಮಗಾರಿ ಮಾತ್ರ ಇನ್ನೂ ಶುರುವಾಗಿಲ್ಲ ಎಂದು ಜನರು ಅಲವತ್ತುಕೊಂಡಿದ್ದಾರೆ.ಕೆಮ್ಮಿಂಜೆ ಗ್ರಾಮ ಸೇರಿದಂತೆ ಮೊಟ್ಟೆತ್ತಡ್ಕ ಪರಿಸರದಲ್ಲಿ ಹಲವಾರು ಮನೆಗಳಿದ್ದು, ಇಲ್ಲಿಯ ಜನತೆ ನಗರಕ್ಕೆ ಬರಲು ಈ ರಸ್ತೆಯನ್ನೇ ಬಳಸಿಕೊಂಡಿದ್ದಾರೆ. ಕೇವಲ ಮೂರು ಸಿಮೆಂಟ್ ಪೈಪ್‌ಗಳನ್ನು ನೀರಿನ ತೋಡಿಗೆ ಹಾಕಿ ಮೇಲಿನಿಂದ ಮಣ್ಣು ಹಾಕಿದ ಸ್ಥಿತಿಯಲ್ಲಿರುವ ಈ ಕಾಲುಸಂಕವನ್ನು ದಾಟಿ ಬರಬೇಕು. ಎರಡು ಮೂರು ದಿನಗಳ ಹಿಂದೆ ಸುರಿದ ಮಳೆಗೆ ಸಂಕದ ಮೇಲೆ ಹಾಕಿದ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಅಪಾಯ ಸ್ಥಿತಿಯಲ್ಲಿತ್ತು. ಇದನ್ನು ಸ್ಥಳೀಯರೇ ಕೆಂಪು ಕಲ್ಲು ಬಳಸಿ ತಾತ್ಕಾಲಿಕವಾಗಿ ದ್ವಿಚಕ್ರ ವಾಹನ ಸಾಗುವುದಷ್ಟಕ್ಕೇ ದುರಸ್ತಿ ಪಡಿಸಿದ್ದಾರೆ. ಇನ್ನೆನಾದರೂ ಭಾರೀ ಮಳೆ ಬಂದಲ್ಲಿ ಪೈಪ್ ಕೊಚ್ಚಿಕೊಂಡು ಹೋಗುವ ಭೀತಿ ಜತೆ ಪಕ್ಕದಲ್ಲಿರುವ ತೋಟಗಳು ಜಲಾವೃತಗೊಳ್ಳುವ ಸಂಭವವಿದೆ.ಇದೀಗ ಆಯ್ಕೆಯಾಗಿರುವ ನೂತನ ಶಾಸಕರಾದರೂ ಸ್ಥಳಕ್ಕೆ ಭೇಟಿ ನೀಡಿ ಹಲವಾರು ವರ್ಷಗಳ ನಮ್ಮ ಬೇಡಿಕೆಯನ್ನು ನನಸು ಮಾಡುವ ಆಶಾಭಾವನೆಯನ್ನು ಹೊಂದಿದ್ದಾರೆ ಸ್ಥಳೀಯ ಜನತೆ.ನಗರೋತ್ಥಾನ ಯೋಜನೆಯಡಿ ನಗರದ ಕೆಲವು ರಸ್ತೆಗಳ ಡಾಮರೀಕರಣಕ್ಕೆ ಸುಮಾರು 25 ಕೋಟಿ ಅನುದಾನ ಮಂಜೂರುಗೊಂಡಿದ್ದು, ಈ ಪೈಕಿ ಕೆಮ್ಮಿಂಜೆ ಬಳಿಯ ರಸ್ತೆಯ ಡಾಮರೀಕರಣ ಹಾಗೂ ಕಿರುಸೇತುವೆ ನಿರ್ಮಿಸಲು ಒಂದು ಕೋಟಿ ಅನುದಾನ ಇಡಲಾಗಿದೆ. ಅಲ್ಲದೆ ಮಾಜಿ ಶಾಸಕರು ಶಂಕುಸ್ಥಾಪನೆಯನ್ನೂ ಮಾಡಿದ್ದಾರೆ.

ನಗರದ ಬಲ್ನಾಡು, ಪೆರಿಯತ್ತೋಡಿ ಹಾಗೂ ದರ್ಬೆ-ಬೆದ್ರಾಳ ಮುಖ್ಯ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಪ್ರಗತಿಯಲ್ಲಿದೆ. ಮಳೆಗಾಲವಾದ್ದರಿಂದ ಕೆಮ್ಮಿಂಜೆ ರಸ್ತೆ ಕಾಮಗಾರಿಗೆ ಮುಂದುವರಿಸಲು ಸಾಧ್ಯವಾಗಿಲ್ಲ. ಮಳೆ ಕಮ್ಮಿಯಾದ ಮೇಲೆ ಶೀಘ್ರ ರಸ್ತೆ ಕಾಮಗಾರಿ ಸಹಿತ ಕಿರುಸೇತವೆ ಕಾಮಗಾರಿಗೆ ಚಾಲನೆ ನೀಡಲಾಗುವುದು.ಕಳೆದ ೨೦ ವರ್ಷಗಳಿಂದ ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿ ಕಿರು ಸೇತುವೆ ನಿರ್ಮಾಣದ ಬೇಡಿಕೆಯನ್ನು ಮನವಿ ಮೂಲಕ ಇಡುತ್ತಾ ಬಂದಿದ್ದೇವೆ. ಆದರೆ ಅನುದಾನ ಮಂಜೂರುಗೊಂಡು ಶಂಕುಸ್ಥಾಪನೆ ಮಾಡಿದರೂ ಕಾಮಗಾರಿಗೆ ಚಾಲನೆ ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ಪರಿಣಾಮ ಮಳೆಗಾಲವಾದ್ದರಿಂದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ರಸ್ತೆಯ ಇನ್ನೊಂದು ಬದಿಗೆ ಹೋಗಲು ಆಗುತ್ತಿಲ್ಲ. ಈ ಸೇತುವೆಯಲ್ಲಿ ದ್ವಿಚಕ್ರ ಸವಾರರು ಬಿದ್ದು ಕೈಕಾಲು ಮುರಿದುಕೊಂಡ ಘಟನೆಗಳೂ ಈ ಹಿಂದೆ ನಡೆದಿದೆ. ಆದ್ದರಿಂದ ಶೀಘ್ರ ಇಲ್ಲಿ ಕಿರು ಸೇತುವೆಯನ್ನು ನಿರ್ಮಿಸಬೇಕೆಂಬುದು ನಮ್ಮ ಬೇಡಿಕೆ.

Related posts

Leave a Reply