Header Ads
Header Ads
Breaking News

ಕೆಸರಿನಲ್ಲಿ ತೇಲಾಡುತ್ತಿರುವ ಪುತ್ತೂರು ಸಂತೆ,  ಸೂಕ್ತ ಸ್ಥಳಾವಕಾಶವಿಲ್ಲದೆ ಜನಸಾಮಾನ್ಯರಿಗೆ ತೊಂದರೆ

ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯುವ ಸಂತೆ ಮಳೆಯ ಅಬ್ಬರಕ್ಕೆ ಕೆಸರು ನೀರಿನಲ್ಲಿ ತೇಲಾಡುತ್ತಿದೆ. ದೂರದ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಗೊಂಡು ಅಲ್ಲಿ ವರ್ಕೌಟ್ ಆಗದೆ, ನಗರದ ಬೇರೆಲ್ಲೂ ಸೂಕ್ತ ಸ್ಥಳಾವಕಾಶವೂ ಸಿಗದೆ ಕೊನೆಗೆ ಜನರು, ಜನ ಪ್ರತಿನಿಧಿಗಳ ಹೋರಾಟಕ್ಕೆ ಮಣಿದು ಮತ್ತೆ ಕಿಲ್ಲೆ ಮೈದಾನಕ್ಕೆ ಮರಳಿದ ವಾರದ ಸಂತೆ ಮಳೆಗಾಲ ತೀವ್ರಗೊಳ್ಳುತ್ತಿದ್ದಂತೆ ಕೆಸರು ತಾಣವಾಗುತ್ತಿದೆ.
ನಗರದ ಕೇಂದ್ರ ಭಾಗದ ಕಿಲ್ಲೆ ಮೈದಾನದಲ್ಲಿ ನಡೆಯುವ ವಾರದ ಸಂತೆಯಲ್ಲಿ ಸುಮಾರು ಇನ್ನೂರರಷ್ಟು ವ್ಯಾಪಾರಿಗಳು ವ್ಯವಹಾರ ನಡೆಸುತ್ತಿದ್ದು, ಮಳೆಗಾಲದಲ್ಲಿ ಒಂದು ದಿನದ ಮಟ್ಟಿಗೆ ಟಾರ್ಪಾಲ್‌ನ ಅಡಿಯಲ್ಲಿ ವ್ಯಾಪಾರ ಮಾಡುತ್ತಾರೆ. ಮಳೆ ಸುರಿದಾಗ ಇಡೀ ಮೈದಾನ ಕೆಸರುಮಯವಾಗುತ್ತಿದ್ದು, ಅದರಲ್ಲೇ ಗ್ರಾಹಕರು ಬಂದು ತರಕಾರಿ ಮತ್ತಿತರ ದಿನವಹೀ ಸೊತ್ತುಗಳನ್ನು ಖರೀದಿಸುತ್ತಾರೆ. ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಪೂರ್ವ ದಿಕ್ಕಿನಲ್ಲಿ ಮಡಿವಾಳ ಕಟ್ಟೆ ಪಕ್ಕದಲ್ಲಿ ಖಾಸಗಿ ಜಮೀನು ಖರೀದಿಸಿ ಅಲ್ಲಿ ಸಂತೆ ಕಟ್ಟೆ ನಿರ್ಮಿಸುವ ಪ್ರಸ್ತಾಪ ಕೆಲ ವರ್ಷಗಳಿಂದ ಇದ್ದರೂ ಅದು ನನೆಗುದಿಗೆ ಬಿದ್ದಿದೆ.
ಹಿಂದೆ ಜೀವಂಧರ ಜೈನ್ ಅಧ್ಯಕ್ಷರಾಗಿದ್ದ ಜಮೀನು ಮಾಲೀಕರಲ್ಲಿ ಮಾತುಕತೆ ನಡೆಸಲಾಗಿತ್ತು. ಈಗ ಜಯಂತಿ ಬಲ್ನಾಡ್ ಅಧ್ಯಕ್ಷರಾದ ಮೇಲೂ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಯಿತು. ದರ ವಿಚಾರದಲ್ಲಿ ಒಮ್ಮತ ಸಾಧ್ಯವಾಗದ ಕಾರಣ ಮುಂದುವರಿಯಲಿಲ್ಲ. ಆ ಜಮೀನು ಖರೀದಿಸಿ ಅಲ್ಲಿ ಸಂತೆಕಟ್ಟೆ ನಿರ್ಮಿಸಲು ಒಟ್ಟು ನಾಲ್ಕು ಕೋಟಿ ರೂ. ಅಂದಾಜಿಸಲಾಗಿದೆ. ಅಷ್ಟು ದೊಡ್ಡ ಮೊತ್ತ ನಗರಸಭೆಯ ಪಾಲಿಗೆ ದೊಡ್ಡ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಕೈಗೆತ್ತಿಕೊಂಡಿಲ್ಲ. ಈ ಜಾಗ ಬಿಟ್ಟು ಬೇರೆಲ್ಲೂ ನಗರ ಕೇಂದ್ರದಲ್ಲಿ ಸಂತೆಕಟ್ಟೆಗೆ ಜಮೀನು ಲಭ್ಯವಾಗಿಲ್ಲ.

Related posts

Leave a Reply