Header Ads
Header Ads
Breaking News

ಕೆ.ಜೆ ಯೇಸುದಾಸ್ ರ 79ನೇಹುಟ್ಟುಹಬ್ಬ ಸಂಭ್ರಮ : ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಜೇಸುದಾಸ್

ಕುಂದಾಪುರ: ಶಾಸ್ತ್ರೀಯ ಸಂಗೀತಗಾರ, ದಕ್ಷಿಣ ಭಾರತದ ಸುಪ್ರಸಿದ್ದ ಗಾಯಕ, ಪದ್ಮಭೂಷಣ ಡಾ. ಕೆ.ಜೆ ಯೇಸುದಾಸ್ ಗುರುವಾರ ತಮ್ಮ 79ನೇ ಹುಟ್ಟುಹಬ್ಬವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ದೇವಿಗೆ ಚಂಡಿಕಾ ಹೋಮ ನೆರವೇರಿಸುವುದರ ಮೂಲಕ ಆಚರಿಸಿಕೊಂಡರು.ಬುಧವಾರ ಸಂಜೆ ತಮ್ಮ ಕುಟುಂಬಿಕರೊಂದಿಗೆ ಕೊಲ್ಲೂರಿಗೆ ಆಗಮಿಸಿದ ಅವರು ಗುರುವಾರ ಬೆಳಗ್ಗೆ ದೇವರ ದರ್ಶನ ಪಡೆದರು. ವರ್ಷಂಪ್ರತಿ ಕೊಲ್ಲೂರಿನಲ್ಲಿ ಜೇಸುದಾಸ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಹಿನ್ನೆಲೆಯಲ್ಲಿ ಕೇರಳ, ಕರ್ನಾಟಕ, ಮಹರಾಷ್ಟ್ರ ಹಾಗೂ ಇತರ ರಾಜ್ಯಗಳ ಜೇಸುದಾಸ್ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದು, ತಮ್ಮ ನೆಚ್ಚಿನ ಗಾಯಕನನ್ನು ಹತ್ತಿರದಿಂದ ನೋಡಿ ಸಂಭ್ರಮಪಟ್ಟರು.

ದೇವಳದ ಅರ್ಚಕ ಗೋವಿಂದ ಅಡಿಗರ ನೇತತದ್ವಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿತು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಜೇಸುದಾಸ್ ಅವರನ್ನು ದೇವಳದ ವತಿಯಿಂದ ಗೌರವಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಜೇಸುದಾಸ್ ಶಿಷ್ಯ ಹಾಗೂ ಅಭಿಮಾನಿ ಕಾಂಞಗಾಡ್ ರಾಮಚಂದ್ರನ್ ಅವರ ನೇತೃತ್ವದಲ್ಲಿ ಸತತ 17ನೇ ವರ್ಷದಲ್ಲಿ ದೇವಸ್ಥಾನದ ಸ್ವರ್ಣಮುಖಿ ಸಭಾಭವನದಲ್ಲಿ ಬೆಳಗಿನಿಂದ ಸಂಜೆಯವರೆಗೆ ಸಂಗೀತ ಸುಧೆ ನಡೆಯಿತು. ಈ ಸಂಗೀತೋತ್ಸವಕ್ಕೆ ಸ್ವತಃ ಜೇಸುದಾಸ್ ಭಕ್ತಿಗೀತೆ ಹಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಸಂಗೀತದ ಕುರಿತು ಚುಟುಕು ತರಬೇತಿ ನೀಡಿದರು. ಈ ವೇಳೆಯಲ್ಲಿ ನೆರೆದಿದ್ದ ಸಾವಿರಾರು ಮಂದಿ ಸಂಗೀತದ ಗಾನಸುಧೆಯಲ್ಲಿ ತಲ್ಲೀನರಾದರು.

Related posts

Leave a Reply