Breaking News

ಕೇಂದ್ರ ಸರ್ಕಾರ ಆರ್ಥಿಕತೆ ಮೇಲೆ ನಂಬಿಕೆಯನ್ನು ಮರು ಸ್ಥಾಪಿಸಿದೆ, ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿಕೆ

ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಹಲವು ಸುಧಾರಣಾ ಯೋಜನೆಗಳಿಂದ ಆರ್ಥಿಕತೆ ಮೇಲಿನ ನಂಬಿಕೆಯನ್ನು ಪುನಃಸ್ಥಾಪಿಸುವಲ್ಲಿ ನೆರವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಮೋದಿ ಸರ್ಕಾರದ ಮೂರು ವರ್ಷದ ಸಾಧನೆಗಳ ಬಗ್ಗೆ ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರೇ ಇರಲಿಲ್ಲ. ಹಿಂದಿನ ಸರ್ಕಾರದಿಂದ ಮೋದಿ ಸರ್ಕಾರಕ್ಕೆ ಸಿಕ್ಕಿದ್ದು ದುರ್ಬಲ ಆರ್ಥಿಕತೆಯ ಬಳುವಳಿ ಎಂದು ಟೀಕಿಸಿದರು.
ಆರ್ಥಿಕ ರಂಗದಲ್ಲಿ ಇಡೀ ವಿಶ್ವಕ್ಕೆ ಕಳೆದ ಮೂರು ವರ್ಷಗಳಲ್ಲಿ ಸವಾಲುಗಳಿದ್ದವು. ಮೂರು ವರ್ಷಗಳ ಹಿಂದೆ ಯೋಜನೆ ಸುಧಾರಣೆಯಲ್ಲಿ ತೀವ್ರ ಕುಸಿತ ಉಂಟಾಗಿತ್ತು ಮತ್ತು ಭಾರತದಲ್ಲಿ ರಚನಾತ್ಮಕ ಬದಲಾವಣೆಗಳಾಗಿದ್ದವು. ಭ್ರಷ್ಟಾಚಾರ ಮತ್ತು ಅನಿರ್ಧಾರದಿಂದಾಗಿ ವಿಶ್ವಾಸಾರ್ಹತೆ ವಿಷಯದಲ್ಲಿ ನಾವು ದುರ್ಬಲ ಆರ್ಥಿಕತೆಯನ್ನು ಬಳುವಳಿಯಾಗಿ ಪಡೆದಿದ್ದೆವು ಎಂದು ಹಿಂದಿನ ಯುಪಿ‌ಎ ಸರ್ಕಾರವನ್ನು ಆಪಾದಿಸಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದ ಸುಧಾರಣೆಗಳು ಭ್ರಷ್ಟಾಚಾರವನ್ನು ನಿಗ್ರಹಿಸಲು ಸಾಧ್ಯವಾಗಿದೆ. ಕಳೆದ ಮೂರು ವರ್ಷಗಳಲ್ಲಿ ನಾವು ಆರ್ಥಿಕತೆಯ ನಂಬಿಕೆಯನ್ನು ಮರು ಸ್ಥಾಪಿಸಿದ್ದೇವೆ. ವಿದೇಶಿ ನೇರ ಹೂಡಿಕೆಗೆ ಭಾರತ ಅತಿದೊಡ್ಡ ಗ್ರಾಹಕನಾಗಿದೆ ಎಂದರು.
ಈ ವರ್ಷ ಜನವರಿಯಿಂದ ಮಾರ್ಚ್ ವರೆಗಿನ ತ್ರೈಮಾಸಿಕದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಕುಂಠಿತವಾಗಿದ್ದು ಇದಕ್ಕೆ ಹಲವು ಕಾರಣಗಳಿವೆ. ಜಿಡಿಪಿಗಳ ಮೇಲೆ ಹಲವು ಅಂಶಗಳು ಪರಿಣಾಮ ಬೀರುತ್ತವೆ ಎಂದು ಹೇಳಿದ ಅವರು, ನೋಟು ಅಮಾನ್ಯತೆಗಿಂತ ಮುನ್ನವೇ ಆರ್ಥಿಕ ಬೆಳವಣಿಗೆ ಸ್ವಲ್ಪ ಕುಂಠಿತವಾಗಿತ್ತು
ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಅಂಕಿ ಅಂಶದ ಬಗ್ಗೆ ವಿರೋಧ ಪಕ್ಷ ಸುಳ್ಳು ಪ್ರಚಾರ ನಡೆಸುತ್ತಿದೆ ಎಂದು ಆಪಾದಿಸಿದರು. ಈ ಹಿಂದೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿವಿಧ ಸುಧಾರಣಾ ಯೋಜನೆಗಳ ಕುರಿತು ಆರೋಪ ಮಾಡುತ್ತಿದ್ದವು. ಇಂದು ಉದ್ಯೋಗ ಸೃಷ್ಟಿಯ ಕುರಿತು ಆರೋಪಿಸುತ್ತಿವೆ. ಸುಳ್ಳು ಪ್ರಚಾರ ಮಾಡಲು ಜನರಿಗೆ ಯಾವುದಾದರೊಂದು ವಿಷಯ ಬೇಕು. ಆರ್ಥಿಕ ವಲಯದಿಂದ ಹೊರಗೆ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಬೆಳವಣಿಗೆಯಾಗಿದೆ ಎಂದಾದರೆ ಅಲ್ಲಿ ಉದ್ಯೋಗ ಸೃಷ್ಟಿಯಾಗಿರಲೇಬೇಕು ಎಂದರು.

Related posts

Leave a Reply