
ಮಂಜೇಶ್ವರ: ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಕೇರಳದಿಂದ ಆಗಮಿಸುವವರಿಗೆ ಕೋವಿಡ್ ನೆಗೆಟಿವ್ ವರದಿ ಮತ್ತೆ ಕಡ್ಡಾಯ ಮಾಡಲಾಗಿದೆ. ಇಂದು ಬೆಳಿಗ್ಗೆ ಗಡಿ ಭಾಗಕ್ಕೆ ಆಗಮಿಸಿದ ಪೊಲೀಸರ ಪಡೆ ದಿಢೀರ್ ಆಗಿ ವಾಹನಗಳನ್ನು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ತಡೆಯೊಡ್ಡಿದಾಗ ಸ್ಥಳದಲ್ಲಿ ಕೆಲ ಸಮಯ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು. ಗಡಿ ಮುಚ್ಚುಗಡೆಯಾಗಿದೆ ಎಂಬ ಸುದ್ದಿ ಹರಡುತಿದ್ದಂತೆಯೇ ಜನ ಸ್ತೋಮವೇ ಸೇರಿತ್ತು. ಜಿಲ್ಲಾಡಳಿತ ತೀರ್ಮಾನದ ವಿರುದ್ಧ ಸಿಡಿದೆದ್ದ ಸ್ಥಳೀಯರು ಹಾಗೂ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆಗೆ ಸಜ್ಜಾಗಿದ್ದರು. ಇದೇ ವೇಳೆ ಪೊಲೀಸರು ಸಮಾಧಾನದ ಮೂಲಕ ನಾಳೆಯಿಂದ ಕೋವಿಡ್ ಪ್ರಮಾಣ ಪತ್ರ ಕಡ್ಡಾಯವಾಗಿಯೂ ತರಬೇಕಾಗಿದೆ ಎಂಬುದಾಗಿ ಪ್ರತಿಯೊಂದು ವಾಹನ ಸವಾರರಿಗೂ ಹೇಳಿ ಜಾಗೃತಿಯನ್ನು ಮೂಡಿಸಿದರು.