Header Ads
Breaking News

ಕೇವಲ ಉದ್ಘಾಟನೆಗಷ್ಟೇ ಸೀಮಿತಗೊಂಡಿದೆ ಉರ್ವ ಮಾರುಕಟ್ಟೆ ಸಂಕೀರ್ಣ : 5 ತಿಂಗಳು ಕಳೆದರೂ ಇನ್ನೂ ಆಗಿಲ್ಲ ಕಾರ್ಯಾರಂಭ

ನಮ್ಮಲ್ಲಿರುವ ಅನೇಕ ಸರ್ಕಾರಿ ಯೋಜನೆಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಾಗೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಮಾತಿಗೆ ಅದೆಷ್ಟೋ ಉದಾಹರಣೆಗಳು ಸಿಗುತ್ತಿವೆ. ಇತ್ತೀಚಿಗಿನ ಒಂದು ರೀಸೆಂಟ್ ಎಕ್ಸಾಂಪಲ್ ಅಂದರೆ ಮಂಗಳೂರಿನ ಉರ್ವ ಮಾರ್ಕೆಟ್‍ನಲ್ಲಿ ನಿರ್ಮಾಣಗೊಂಡಿರುವ ಮಾರುಕಟ್ಟೆ ಸಂಕೀರ್ಣ. ಹೌದು, ಕಟ್ಟಡ ಉದ್ಘಾಟನೆಗೊಂಡು ಐದು ತಿಂಗಳು ಕಳೆದಿದ್ದರೂ ಈಗ ಕಟ್ಟಡ ನಿಷ್ಪ್ರಯೋಜಕ ಸ್ಥಿತಿಯಲ್ಲಿದೆ.ಅದ್ಯಾಕೋ ಏನೋ, ಸಾರ್ವಜನಿಕರ ಅನುಕೂಲಕ್ಕೆ ಅಂತಾ ರೂಪುಗೊಳ್ಳುವ ಯೋಜನೆಗಳು ಅದ್ಯಾಕೋ ಜನರಿಗೆ ತಲುಪುತ್ತಲೇ ಇಲ್ಲ. ಇದಕ್ಕೊಂದು ಉತ್ತಮ ಉದಾಹರಣೆ ಮಂಗಳೂರಿನ ಉರ್ವಮಾರ್ಕೆಟ್‍ನಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ. ಹೌದು. ಮಂಗಳೂರಿನ ಉರ್ವ ಮಾರ್ಕೆಟ್‍ನಲ್ಲಿ ನಿರ್ಮಾಣಗೊಂಡಿರುವ ಮಾರುಕಟ್ಟೆ ಸಂಕೀರ್ಣ ಉದ್ಘಾಟನೆಗೊಂಡು ಐದು ತಿಂಗಳು ಕಳೆದಿದ್ದರೂ ಈಗ ಕಟ್ಟಡ ನಿಷ್ಪ್ರಯೋಜಕ ಸ್ಥಿತಿಯಲ್ಲಿದೆ. 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಉರ್ವ ಮಾರ್ಕೆಟ್‍ನ ಹೊಸ ಕಟ್ಟಡ ನಿಷ್ಪ್ರಯೋಜಕ ಸ್ಥಿತಿಯಲ್ಲಿದೆ. ಬೀದಿನಾಯಿಗಳ ಅಡ್ಡೆಯಾಗಿ ಮಾರ್ಪಟ್ಟಿದ್ದು, ತ್ಯಾಜ್ಯ ಕೊಂಪೆಯಾಗಿ ಮಾರ್ಪಟ್ಟಿದೆ.

ಮಂಗಳೂರು ನಗರದ ದೇರೆಬೈಲ್(ಉರ್ವ ಸ್ಟೋರ್) ಮತ್ತು ಬೋಳೂರು (ಉರ್ವ ಮಾರ್ಕೆಟ್) ಮಾರ್ಕೆಟ್‍ಗಳನ್ನು ಸಮಗ್ರ ಅಭಿವೃದ್ಧಿಪಡಿಸುವ ಸಲುವಾಗಿ ಮಂಗಳೂರು ಮಹಾನಗರ ಪಾಲಿಕೆ 2008ರಲ್ಲಿ 35 ವರ್ಷ ಗುತ್ತಿಗೆ ಅವಧಿಗೆ ಮುಡಾಕ್ಕೆ ಹಸ್ತಾಂತರಿಸಿತ್ತು. ಈ ಪೈಕಿ ಉರ್ವ ಮಾರ್ಕೆಟ್‍ನಲ್ಲಿ 12.29 ಕೋಟಿ ರೂ. ವೆಚ್ಚದ ಮಾರುಕಟ್ಟೆ ಸಂಕೀರ್ಣ ಕಾಮಗಾರಿಗೆ ಮುಡಾ 2016ರ ಡಿಸೆಂಬರ್ ತಿಂಗಳಲ್ಲಿ ಚಾಲನೆ ನೀಡಿ 2018ರ ಜನವರಿಯಲ್ಲಿ ಉದ್ಘಾಟನೆ ನಡೆಸಿದೆ. ಮಂಗಳೂರು ನಗರದಲ್ಲಿ ಮುಡಾ ಸಹಯೋಗದಲ್ಲಿ ನಿರ್ಮಾಣವಾದ ಮೊದಲ ಮಾರುಕಟ್ಟೆ ಸಹಿತ ವಾಣಿಜ್ಯ ಸಂಕೀರ್ಣ ಇದು. ಕಾಮಗಾರಿ ಆರಂಭಿಸುವ ಮುನ್ನ ಹಳೇ ಮಾರ್ಕೆಟ್ ಬಳಿ ತಾತ್ಕಾಲಿಕ ಮಾರ್ಕೆಟ್ ನಿರ್ಮಿಸಿ ಮೀನು ಮಾರಾಟ ಹಾಗೂ ಇತರ ಅಂಗಡಿಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗಿತ್ತು. ಈಗ ಸುಸಜ್ಜಿತ ಮಾರ್ಕೆಟ್ ಕಟ್ಟಡ ನಿರ್ಮಾಣವಾಗಿದ್ದರೂ, ಉದ್ಘಾಟನೆಗೆ ಮಾತ್ರ ಸೀಮಿತವಾಗಿದೆ. ಮಳಿಗೆಗಳನ್ನು ಹಂಚಿಕೆ ಮಾಡದ ಕಾರಣ ತಾತ್ಕಾಲಿಕ ಮಾರ್ಕೆಟ್‍ನಲ್ಲೇ ವ್ಯಾಪಾರ ಮುಂದುವರಿದಿದೆ.

ತಳ ಅಂತಸ್ತು, ನೆಲ ತಳ ಅಂತಸ್ತು, ನೆಲ ಮೇಲಂತಸ್ತು ಹಾಗೂ ಮೂರು ಅಂತಸ್ತುಗಳ ಉರ್ವ ಮಾರ್ಕೆಟ್ ಸಂಕೀರ್ಣ ಒಟ್ಟು 84,891 ಚದರ ಅಡಿ ವಿಸ್ತೀರ್ಣದಲ್ಲಿದೆ. ತಳ ಅಂತಸ್ತಿನಲ್ಲಿ(ಬೇಸ್‍ಮೆಂಟ್) 73 ಕಾರು, 40 ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, 5 ಶಾಪ್, ನೆಲ ತಳ ಅಂತಸ್ತಿನಲ್ಲಿ 21 ಮೀನು ಹಾಗೂ ಮಟನ್ ಸ್ಟಾಲ್, ನೆಲ ಮೇಲಂತಸ್ತಿನಲ್ಲಿ 65 ಹೂ, ಹಣ್ಣು, ತರಕಾರಿ ಹಾಗೂ ಇತರ ಸ್ಟಾಲ್‍ಗಳು ಮೊದಲ ಅಂತಸ್ತಿನಲ್ಲಿ ಕ್ಯಾಂಟೀನ್ ಹಾಗೂ ಇತರ 16 ಶಾಪ್‍ಗಳು, 2ನೇ ಅಂತಸ್ತಿನಲ್ಲಿ 8 ಹಾಗೂ 3ನೇ ಅಂತಸ್ತಿನಲ್ಲಿ 7 ಕಚೇರಿ ಮಳಿಗೆಗಳಿವೆ. ಮನಪಾ ಅಧೀನದಲ್ಲಿದ್ದ ಉರ್ವ ಮಾರ್ಕೆಟ್ ಅಭಿವೃದ್ಧಿ ಸಲುವಾಗಿ ಮುಡಾಕ್ಕೆ ಹಸ್ತಾಂತರಿಸಲಾಗಿತ್ತು. ಮುಡಾ ಕಟ್ಟಡ ನಿರ್ಮಿಸಿದ ಬಳಿಕ ಅದನ್ನು ಏಲಂ ಮಾಡದ ಕಾರಣ ಕಟ್ಟಡದ ನಿರ್ವಹಣೆಗಾಗಿ ಮತ್ತೆ ಮನಪಾಕ್ಕೆ ಹಸ್ತಾಂತರಿಸುವಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಹಿಂದಿನ ಅವಧಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು ಇನ್ನೂ ಸ್ಥಿರೀಕರಣವಾಗಿಲ್ಲ.

 ಉರ್ವ ಪರಿಸರದಲ್ಲಿ ಒಂದು ಸುಸಜ್ಜಿತ ಮಾರುಕಟ್ಟೆ ನಿರ್ಮಾಣಗೊಳ್ಳಬೇಕು ಎನ್ನುವುದು ಈ ಭಾಗದ ವ್ಯಾಪಾರಿಗಳ ಬಹುವರ್ಷಗಳ ಕನಸಾಗಿತ್ತು. ಕಳೆದ ಸರ್ಕಾರದ ಅವಧಿಯಲ್ಲಿ ಶಾಸಕ ಜೆ.ಆರ್. ಲೋಬೋ ಅವರ ಮೂಲಕ ಮಾರುಕಟ್ಟೆ ನಿರ್ಮಾಣಕ್ಕೆ ಕಾಲ ಕೂಡಿ ಬಂದು, ಅನುದಾನವೂ ಬಿಡುಗಡೆಗೊಂಡಿತ್ತು. ಆದರೆ ಇದೀಗ ಸುಸಜ್ಜಿತ ಕಟ್ಟಡ ವ್ಯರ್ಥವಾಗುತ್ತಿರುವುದು ಸ್ಥಳೀಯ ವ್ಯಾಪಾರಿಗಳಲ್ಲಿ ಬೇಸರ ಮೂಡಿಸಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಗಮನ ಹರಿಸಿದರೆ ಉರ್ವ ಮಾರ್ಕೆಟ್ ಕಟ್ಟಡದ ನಿರ್ಮಾಣಕ್ಕೆ ಸಾರ್ಥಕ್ಯವನ್ನು ಒದಗಿಸಬಹುದಾಗಿದೆ.

Related posts

Leave a Reply

Your email address will not be published. Required fields are marked *