Breaking News

ಕೊಕ್ಕಡ ಎಂಡೋ ಪೀಡಿತರ ವೇದನೆ, ಮುಂದುವರಿದ ಆಮರಣಾಂತ ಉಪವಾಸ

ಎಂಡೊ ಸಂತ್ರಸ್ತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿ ಕೊಕ್ಕಡದ ಆಟೋರಿಕ್ಷಾ ನಿಲ್ದಾಣದ ಬಳಿ ಹಾಕಿದ ಬೃಹತ್ ವೇದಿಕೆಯಲ್ಲಿ ಅನಿರ್ದಿಷ್ಟ ಅವಧಿಯ ಪ್ರತಿಭಟನೆ, ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭವಾಯಿತು.
ಕೊಕ್ಕಡದ ಎಂಡೊ ವಿರೋಧಿ ಹೋರಾಟ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಈ ಪ್ರತಿಭಟನೆಯಲ್ಲಿ ಹತ್ತಾರು ಎಂಡೊ ಪೀಡಿತರು ಪಾಲ್ಗೊಂಡಿದ್ದರು. ಕರುಳು ಕಿತ್ತು ಬರುವ ನರಳಾಟ, ಚೀರಾಟ. ವಯಸ್ಸು 30 ದಾಟಿದ ಯುವಕ ಮಗುವಿನಂತೆ ಅಂಗಾತ ಬಿದ್ದುಕೊಂಡಿರುವಂತದ್ದು. ಇನ್ನೂ ಕೆಲವರದ್ದು ಮುರುಟು ಕಟ್ಟಿದ ಕೈ ಕಾಲುಗಳು. ನೋಡಲು, ಅನುಭವಿಸಲು ಅಸಾಧ್ಯವಾಗದ ರೀತಿಯಲ್ಲಿ ಬದುಕು ಹೆಣೆಯುತ್ತಿರುವ ನೂರಾರು ಜೀವಗಳು ಅಲ್ಲಿದ್ದವು. ನನ್ನ ಮನೆಯಲ್ಲಿ ದುಡಿಯುವ ಗಂಡಸರಿಲ್ಲ, ದುಡಿಯುವ ವಯಸ್ಸಿನ ಜೀವ ದುಡಿಯಲಾರದ ಸ್ಥಿತಿಯಲ್ಲಿದೆ. ನರಳಾಟದ ಮಕ್ಕಳನ್ನು ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ. ದುಡಿದು ಸಂಪಾದಿಸುವಂತಿಲ್ಲ. ಈ ಪರಿಯ ಗೋಳಾಟದ ನರಳಾಟದ ಬದುಕು ನೀಡಿದ ಸರ್ಕಾರ ಎಂಡೋ ಪೀಡಿತರ ಹಕ್ಕಿನ ಸವಲತ್ತನ್ನು ನೀಡದೇ ಹೋದರೆ ಕೊಕ್ಕಡದಲ್ಲೇ ನಮ್ಮೆಲ್ಲರ ಪ್ರಾಣ ಪಕ್ಷಿ ಕಳಚಲಿದೆ ಎಂದು ವೇದಿಕೆ ಮಧ್ಯೆ ಕುಳಿತಿದ್ದ ಎಂಡೋ ಸಂತ್ರಸ್ತ ಮಹಿಳೆ ಕಮಲಾ ಕನ್ಯಾಡಿ ಹೇಳಿದರು.
ಎಂಡೊ ಪೀಡಿತ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರದೀಪ ಮಾತನಾಡಿ, ‘ನಮ್ಮ ಹಕ್ಕು ನಮಗೆ ನೀಡಿ. ಅದಕ್ಕಾಗಿ ನಮ್ಮನ್ನು ಮತ್ತೆ ಮತ್ತೆ ಬೀದಿಗಿಳಿಯುವಂತೆ ಮಾಡಬೇಡಿ’ ಎಂದರು. ಪ್ರತಿಭಟನೆಯ ಮುಂದಾಳು ಹರೀಶ್ ಪೂಂಜಾ ಮಾತನಾಡಿ, ಎಂಡೋಪೀಡಿತರ ಬವಣೆ ಬಗೆಹರಿಸಲು ಪ್ರಯತ್ನಿಸಬೇಕಾಗಿದ್ದ ರಾಜ್ಯ ಸರ್ಕಾರ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತಿದೆ. ಸರ್ಕಾರವನ್ನು ಎಚ್ಚರಿಸಲು ಎಂಡೋ ಪೀಡಿತರೊಂದಿಗೆ ಇಡೀ ನಾಗರಿಕ ಸಮಾಜ ಒಗ್ಗೂಡಿ ಹೋರಾಡಬೇಕಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ನನ್ನ 35 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಈ ರೀತಿಯ ಹೃದಯಕ್ಕೆ ವೇದನಾ ಮಯವಾದ ಸನ್ನಿವೇಶ ನಾನು ಕಂಡಿಲ್ಲ’ ಎಂದರು.
ಮಂತ್ರಿಗಳು ಬಂದು ಸ್ಪಂದಿಸಿದರೆ ಪ್ರತಿಭಟನೆಯನ್ನು ಸ್ಥಗಿತಗೊಳಿಸುವು ದಾಗಿ ತಿಳಿಸಿದರು. ಇದರ ಪರಿಣಾಮ ಅಧಿಕಾರಿಗಳು ಹಿಂತಿರುಗಿದರು. ಬೆಳ್ತಂಗಡಿ ರೋಟರಿ ಕ್ಲಬ್ ಪದಾಧಿಕಾರಿಗಳು, ವಕೀಲರಾದ ಧನಂಜಯ ರಾವ್, ಸುಬ್ರಹ್ಮಣ್ಯ ಅಗರ್ತ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು. 500ಕ್ಕೂ ಮಿಕ್ಕಿ ಎಂಡೋ ಸಂತ್ರಸ್ತರು ಈ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು. ನವೀನ್ ನೆರಿಯ ಸ್ವಾಗತಿಸಿ, ಪುರಂದರ ಗೌಡ ಕಡಿರ ನಿರೂಪಿಸಿದರು.

Related posts

Leave a Reply