
ಸಾರ್ವಜನಿಕ ಸ್ಥಳಗಳಲ್ಲಿ ಉಗ್ರ ವರ್ತನೆ ತೋರುತ್ತ, ನಾಗರಿಕ ಸಮಾಜದಲ್ಲಿ ಅನಾಗರಿಕ ಬದುಕು ಸಾಗಿಸುತ್ತಿದ್ದ ಮಾನಸಿಕ ಅಸ್ವಸ್ಥನ ರಕ್ಷಣಾ ಕಾರ್ಯಚರಣೆ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ, ಸ್ನೇಹಾಲಯ ಸಂಸ್ಥೆಯವರಿಂದ ಶನಿವಾರ ನಡೆದಿದೆ. ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುರ್ನವಸತಿ ಕೇಂದ್ರವು ಆಶ್ರಯ ಒದಗಿಸಿ ಮಾನವಿಯತೆ ಮೆರೆದಿದೆ.
ಬ್ರಹ್ಮಾವರದ ಕರ್ಜೆ ಪರಿಸರದಲ್ಲಿ ಮಾನಸಿಕ ಅಸ್ವಸ್ಥನ ಉಪಟಳದಿಂದ ಸಾರ್ವಜನಿಕರು ಭೀತಿಗೆ ಒಳಗಾಗಿದ್ದರು. ಮನೆ ಮಂದಿ, ಹಾಗೂ ಸಾರ್ವಜನಿಕರ ಮೇಲೆ ವಿನಾಕಾರಣ ಹಲ್ಲೆಗಳು, ಸ್ಥಳಿಯರ ಮನೆಗಳಿಗೆ ಅಕ್ರಮ ಪ್ರವೇಶ, ಪೀಠೋಪಕರಣಗಳ ಧ್ವಂಸ ಮೊದಲಾದ ವಿಕೃತ ಕೃತ್ಯಗಳು ಇತನಿಂದ ನಡೆಯುತ್ತಿದ್ದವು. ಇತನ ಉಪಟಳ, ಮಾರಣಾಂತಿಕ ಹಲ್ಲೆಗಳಿಂದ ಮುಕ್ತಿ ಪಡೆಯಲು ಸಾರ್ವಜನಿಕರು ಹಾಗೂ ಆತನ ಮನೆಯವರು ಕಳೆದ ಕೆಲವು ದಿನಗಳಿಂದ ಸನಿಹದಲ್ಲಿದ್ದ ಕೊಠಡಿಯೊಂದರಲ್ಲಿ ಬಂಧಿಸಿಟ್ಟಿದ್ದರೆಂದು ತಿಳಿದು ಬಂದಿದೆ. ನಂತರ ಸ್ಥಳಿಯ ಸಾಮಾಜಿಕ ಕಾರ್ಯಕರ್ತ ಹರೀಶ್ ಶೆಟ್ಟಿ ಕರ್ಜೆ ಅವರು, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ವಿಷಯ ಮುಟ್ಟಿಸಿದ್ದರು. ಬಳಿಕ ಅವರಿಂದ ಕಾರ್ಯಚರಣೆ ನಡೆದಿದೆ.
ವಿಷಯ ತಿಳಿದ ಜೋಸೆಫ್ ಕ್ರಾಸ್ತರು ಶನಿವಾರ ನಸುಕಿನ ಜಾವದಲ್ಲಿ ಮಂಜೇಶ್ವರದಿಂದ ಆಶ್ರಮ ಸಿಬ್ಬಂದಿಗಳನ್ನು ಕರೆದುಕೊಂಡು, ಅಂಬುಲೇನ್ಸ್ ವಾಹನದಲ್ಲಿ ಕರ್ಜೆಗೆ ಆಗಮಿಸಿದ್ದಾರೆ. ನಂತರ ಮಂಜೇಶ್ವರಕ್ಕೆ ಅಸ್ವಸ್ಥನ ಕರೆದುಕೊಂಡು ತೆರಳಿದ್ದಾರೆ. ಕೊನೆಗೂ ಸ್ಥಳೀಯ ನಿವಾಸಿಗಳು ಭಯದಿಂದ ಮುಕ್ತಿ ಪಡೆದಂತಾಗಿದೆ. ವಿಶು ಶೆಟ್ಟಿ, ಜೋಸೆಫ್ ಕ್ರಾಸ್ತ ಅವರ ಮಾನವಿಯತೆಯ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಮಾನಸಿಕ ಅಸ್ವಸ್ಥ ವ್ಯಕ್ತಿ ಕರ್ಜೆಯ ನಿವಾಸಿ ನರಸಿಂಹ ಕುಲಾಲ್ ಎಂದು ಗುರುತಿಸಲಾಗಿದೆ. ಕಡು ಬಡಕುಟುಂಬ ಇವರದಾಗಿದ್ದು. ಇತನಿಗೆ ಚಿಕಿತ್ಸೆಯನ್ನು ಈ ಮೊದಲು ಮನೆಯವರು ಒದಗಿಸಿದ್ದರೆಂದು ತಿಳಿದುಬಂದಿದೆ.