
ಮೂಡುಬಿದಿರೆ: ಕೊಡಂಗಲ್ಲು ಎಂಬ ಹಳ್ಳಿ ಪ್ರದೇಶದಲ್ಲಿ 50 ವರ್ಷಗಳ ಹಿಂದೆ ಸ್ಥಾಪನೆಗೊಂಡ ಸಿಂಡಿಕೇಟ್ ಬ್ಯಾಂಕ್ ಕೇಂದ್ರ ಸರ್ಕಾರದ ಬ್ಯಾಂಕ್ ವಿಲೀನ ಕಾನೂನಿನ ಪರಿಣಾಮ ಮೂಡುಬಿದಿರೆಗೆ ಸ್ಥಳಾಂತರಗೊಳ್ಳುವುದರಲ್ಲಿದೆ. ಈ ಭಾಗದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗವಾಗುತ್ತಿರುವ ಈ ಶಾಖೆಯನ್ನು ಸ್ಥಳಾಂತರ ಮಾಡದಂತೆ ಪ್ರಧಾನಮಂತ್ರಿ, ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ತಿಳಿಸಿದ್ದಾರೆ.
ಅವರು ಮೂಡುಬಿದರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಡಾ.ಟಿ.ಎಂ. ಎ ಪೈ ಅವರು 1970ರಲ್ಲಿ ಕೊಡಂಗಲ್ಲಿನಲ್ಲಿ ಸಿಂಡಿಕೇಟ್ ಬ್ಯಾಂಕ್ನ ವಿಸ್ತರಣಾ ಕೌಂಟರನ್ನು ತೆರೆಯುವ ಮೂಲಕ ಇಲ್ಲಿ ಬ್ಯಾಂಕ್ ಸೇವೆ ಆರಂಭಿಸಿದ್ದರು. ಸಾರ್ವಜನಿಕರ ಉತ್ತಮ ಸ್ಪಂದನೆಯಿಂದ ಕೆಲವೇ ವರ್ಷಗಳಲ್ಲಿ ಅದು ಪೂರ್ಣ ಪ್ರಮಾಣದ ಶಾಖೆಯಾಗಿ ಪರಿವರ್ತನೆಗೊಂಡು ಗ್ರಾಮೀಣ ಜನತೆಗೆ, ವಿದ್ಯಾರ್ಥಿಗಳಿಗೆ ಉತ್ತಮ ಸೇವೆಯನ್ನು ಒದಗಿಸುತ್ತಾ ಬಂದಿದೆ. ಬ್ಯಾಂಕ್ ಆರಂಭಕ್ಕೆ ಮೂರು ವರ್ಷಗಳ ಮೊದಲೇ ಅಂದರೆ 1967ಕ್ಕೆ ಮಹಾವೀರ ಕಾಲೇಜು ಕೊಡಂಗಲ್ಲಿನ ಆರಂಭಗೊಂಡಿತ್ತು. ಶಾಲಾ ಆವರಣದಲ್ಲೆ ಬ್ಯಾಂಕೊಂದು ಕಾರ್ಯಾಚರಿಸುತ್ತಿರುವುದು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಯಿತು. ಸರ್ಕಾರದ ಹೊಸ ನೀತಿಯನ್ವಯ ಇಲ್ಲಿನ ಶಾಖೆಯನ್ನು ಮೂಡುಬಿದಿರೆಯ ಕೆನರಾ ಬ್ಯಾಂಕ್ ಜತೆ ವಿಲೀನ ಮಾಡುವ ಪ್ರಕ್ರಿಯೆ ತೆರೆಮರೆಯಲ್ಲಿ ನಡೆಯುತ್ತಿದೆ ಎಂಬ ಮಾತು ಸ್ಥಳೀಯವಾಗಿ ಕೇಳಿಬರುತ್ತಿದೆ. ಹೀಗಾದ್ದಲ್ಲಿ ಕೊಡಂಗಲ್ಲು ಸುತ್ತ ಮುತ್ತಲಿನ ಜನ, ಇಲ್ಲಿನ ವಿದ್ಯಾರ್ಥಿಗಳು ಬ್ಯಾಂಕ್ ವ್ಯವಹಾರಕ್ಕೆ ಸುಮಾರು ಮೂರು ಕಿ.ಮೀ ದೂರದ ಮೂಡುಬಿದಿರೆ ಪಟ್ಟಣಕ್ಕೆ ಹೋಗಬೇಕಾಗುತ್ತದೆ. ಹೆಚ್ಚಿನ ಮಹಿಳೆಯರೆ ಈ ಬ್ಯಾಂಕ್ನ ಗ್ರಾಹಕರಾಗಿರುವುದು ವಿಶೇಷ. ಆದ್ದರಿಂದ ಗ್ರಾಮಿಣ ಪ್ರದೇಶದಲ್ಲಿರುವ ಇಲ್ಲಿನ ಶಾಖೆಯನ್ನು ವಿಲೀನಗೊಳಿಸದೆ ಇಲ್ಲೆ ಉಳಿಸಬೇಕು ಎಂದು ಅಭಯಚಂದ್ರ ಜೈನ್ ಒತ್ತಾಯಿಸಿದರು.