Header Ads
Breaking News

ಕೊಡೇರಿಯಲ್ಲಿ ಮೀನು ಹರಾಜು ಪ್ರಕ್ರಿಯೆಗೆ ವಿರೋಧ -ಮೀನುಗಾರರ ನಡುವೆ ಮಾರಾಮಾರಿ

ಕುಂದಾಪುರ: ಮೀನು ಹರಾಜು ಪ್ರಕ್ರಿಯೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ಮೀನುಗಾರರ ನಡುವೆ ಮಾರಾಮಾರಿ ನಡೆದ ಪರಿಣಾಮ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ ಘಟನೆ ಕೊಡೇರಿ ಕಿರು ಬಂದರುವಿನಲ್ಲಿ ನಡೆದಿದೆ.


ಉಪ್ಪುಂದ ಭಾಗದ ನಾಡ ದೋಣಿ ಮೀನುಗಾರರು ಮೀನು ಹರಾಜು ಪ್ರಕ್ರಿಯೆಗಾಗಿ ಕೊಡೇರಿ ಬಂದರುವಿಗೆ ಬಾರದಂತೆ ಕೊಡೇರಿ ಭಾಗದ ಮೀನುಗಾರರು ದೋಣಿಗಳನ್ನು ಅಡ್ಡಲಾಗಿ ನಿಲ್ಲಿಸಿ ತಡೆಯೊಡ್ಡಿದ್ದಾರೆ. ಈ ವೇಳೆಯಲ್ಲಿ ಎರಡೂ ತಂಡಗಳ ನಡುವೆ ಬಿರುಸಿನ ವಾಗ್ವಾದ ನಡೆದಿದ್ದು, ಪೊಲೀಸರು ಹಾಗೂ ಬೈಂದೂರಿನ ತಹಸೀಲ್ದಾರ್ ಅಡ್ಡಲಾಗಿ ನಿಲ್ಲಿಸಿದ ದೋಣಿಗಳನ್ನು ತೆಗೆಯಲು ವಿನಂತಿಸಿದರೂ ಕೊಡೇರಿ ಮೀನುಗಾರರು ಪಟ್ಟು ಬಿಡದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ಹರಾಜು ಪ್ರಕ್ರಿಯೆಗೆ ತಡೆಯೊಡ್ಡಿದ ಕಾರಣ ದೋಣಿಯಲ್ಲಿದ್ದ ಮೀನುಗಳು ಹಾಳಾಗುವ ಆತಂಕದಲ್ಲಿದ್ದ ಉಪ್ಪುಂದ ಮೀನುಗಾರರು ಕೊನೆಕ್ಷಣ ಸಂಜೆ ವೇಳೆಗೆ ಬಲಪ್ರಯೋಗದ ಮೂಲಕವಾದರೂ ದೋಣಿಯನ್ನು ಮುಂದಕ್ಕೆ ಸಾಗಿಸುವ ಯತ್ನ ನಡೆಸಿದರು. ಈ ವೇಳೆಯಲ್ಲಿ ಬಂದರುವಿಗೆ ಹೋಗುವ ಮಾರ್ಗಮಧ್ಯೆ ಅಡ್ಡಲಾಗಿಟ್ಟ ಒಂದು ದೋಣಿಯನ್ನು ಮಗುಚಿ ಹಾಕಿದ ಬಳಿಕ ಎರಡು ತಂಡಗಳ ನಡುವೆ ಮಾರಾಮಾರಿ ಆರಂಭವಾಯಿತು.
ಸ್ಥಳಕ್ಕಾಗಮಿಸಿದ ಎಡಿಶನಲ್ ಎಸ್‌ಪಿ ಕುಮಾರಚಂದ್ರ, ಕುಂದಾಪುರ ಉಪವಿಭಾಗದ ಎಎಸ್‌ಪಿ ಹರಿರಾಂ ಶಂಕರ್ ವಿವಿಧ ಠಾಣೆಯ ಠಾಣಾಧಿಕಾರಿಗಳು ಸ್ಥಳದಲ್ಲಿದ್ದು ಎರಡೂ ತಂಡಗಳ ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿದರು. ಪರಿಸ್ಥಿತಿ ನಿಯಂತ್ರಣಕ್ಕಾಗಿ ನಾಲ್ಕು ಸಿಆರ್‌ಪಿ ತುಕಡಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಎರಡೂ ತಂಡಗಳ ನಡುವೆ ಹೊಡೆದಾಟ ಬುಗಿಲೆದ್ದ ಪರಿಣಾಮ ಕೆಲಕ್ಷಣ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಕೂಡಲೇ ಪರಿಸ್ಥಿಯಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ನದಿಯಲ್ಲೇ ಗುಂಪುಗಳನ್ನು ಚದುರಿಸಲು ಮುಂದಾದ ಪೊಲೀಸರು ದೋಣಿಯನ್ನೇರಿ ಲಾಠಿ ಪ್ರಹಾರ ನಡೆಸಿದರು. ಈ ವೇಳೆಯಲ್ಲಿ ಮೀನುಗಾರರು ತಮ್ಮ ಪಟ್ಟು ಬಿಟ್ಟು ಓಡಲೆತ್ನಿಸಿದರು. ಇನ್ನೂ ಕೆಲ ಮೀನುಗಾರರು ನದಿಗೆ ಹಾರಿ ಈಜಿ ದಡ ಸೇರಿದರು.

Related posts

Leave a Reply

Your email address will not be published. Required fields are marked *