
ತುಳು ಸಂಸ್ಕೃತಿ ಉಳಿಯಬೇಕಾದರೆ ತುಳುನಾಡಿನಲ್ಲಿ ಕೃಷಿ ಸಂಸ್ಕೃತಿಯೂ ಉಳಿಯಬೇಕು. ತುಳುನಾಡಿನ ನೆಲ ಜಲ ಸೇರಿದಂತೆ ಇಲ್ಲಿ ಸಂಸ್ಕೃತಿಯು ವಿಭಿನ್ನವಾದುದು. ಆದರೆ ಇಂದು ಕೃಷಿ ಸಂಸ್ಕೃತಿಯು ನಮ್ಮಿಂದ ದೂರವಾಗುತ್ತಿದ್ದು ಈ ನಿಟ್ಟಿನಲ್ಲಿ ಯುವ ಸಮುದಾಯ ಎಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ತುಳು ಅಕಾಡೆಮಿಯ ಸದಸ್ಯ ತಾರನಾಥ ಕಾಪಿಕಾಡ್ ಅವರು ಹೇಳಿದರು.
ಅವರು ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಹಾಗೂ ತುಳು ಅಕಾಡೆಮಿ ಇದರ ಸಂಯುಕ್ತ ಆಶ್ರಯದಲ್ಲಿ ಕೊಣಾಜೆ ಅಣ್ಣೆರೆಪಾಲುವಿನಲ್ಲಿ ನಡೆದ ಬರವುದ ಜವನೆರ್ನ ಬುಲೆತ ಪರ್ಬ-ಗ್ರಾಮ ಸಾಮರಸ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ಅವರು, ನಮ್ಮ ತುಳುನಾಡಿನ ಗದ್ದೆಗಳಲ್ಲಿ ಯಾವಾಗ ಗದ್ದೆ ಹೋಗಿ ಆ ಜಾಗದಲ್ಲಿ ಕಂಗು ಬೆಳೆಗಳು ಬಂದವೋ ಆಗಲೇ ನಮ್ಮ ಬಹುತೇಕ ತುಳುಸಂಸ್ಕೃತಿ ವಿನಾಶದಂಚಿಗೆ ಹೋಗಿದೆ. ಅಲ್ಲದೆ ತುಳುವಿನ ಎಷ್ಟೋ ಸಂಗತಿಗಳು ಮರೆಯಾದವು. ಆದರೆ ಪ್ರೀತಿ ವಾತ್ಸಲ್ಯದ ಬದುಕು ನಮ್ಮಿಂದ ದೂರವಾಗಿ ಮನುಷ್ಯರ ನಡುವೆ ಅಪನಂಬಿಕೆಗಳೇ ಹೆಚ್ಚಾಗುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ಪ್ರೌಡಶಾಲೆಯ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ, ಗಟ್ಟಿ ಸಮಾಜದ ಮುಖಂಡರಾದ ಪದ್ಮನಾಭ ಗಟ್ಟಿ, ಪಂಚಾಯಿತಿ ಸದಸ್ಯರಾದ ಅಚ್ಯುತ ಗಟ್ಟಿ, ಮುತ್ತುಶೆಟ್ಟಿ, ಬೂಬ ಗಟ್ಟಿ, ಸ್ಥಳೀಯ ಮುಖಂಡರಾದ ಅಬ್ದುಲ್ ರಹಿಮಾನ್ ಕೋಡಿಜಾಲ್, ಕುಡುಬಿ ಸಮಾಜದ ಮುಖಂಡರಾದ ನರ್ಸು ಗೌಡ, ಪದ್ಮನಾಭ ಗಟ್ಟಿ ಕೆಳಗಿನ ಮನೆ, ಪ್ರಾಧ್ಯಾಪಕರಾದ ಡಾ.ನಾಗವೇಣಿ ಮಂಚಿ, ಯೋಜನಾಧಿಕಾರಿ ಡಾ. ಜೆಫ್ರಿ ರಾಡ್ರಿಗಸ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.