Header Ads
Breaking News

ಕೊನೆಗೂ ಪತ್ತೆಯಾಯಿತು ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್‌ನ ಅವಶೇಷಗಳು: ಮೀನುಗಾರರು?

ಉಡುಪಿಯ ಮಲ್ಪೆಯಿಂದ ತೆರಳಿದ್ದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆಯಾಗಿದೆ. ಆದ್ರೆ ನಾವಪತ್ತೆಯಾದ 7 ಮಂದಿ ಮೀನಗಾರರು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಹಲವಾರು ದಿನಗಳಿಂದ ಪ್ರತಿ ಫೋನ್ ಕರೆಗೂ ಕಾಯ್ತಾ ಇದ್ದ ಪತ್ನಿಯರ ಕನಸು ಹುಸಿಯಾಗಿದೆ. ಅಪ್ಪನ ಅಪ್ಪುಗೆಯನ್ನು ಕಳೆದುಕೊಂಡ ಪುಟ್ಟ ಮಕ್ಕಳ ಕನಸು ನೀರಾಗಿದೆ. ಇಂದು ಬರ್ತಾರೆ ನಾಳೆ ಬರ್ತಾರೆ ಎಂದು ಕಾದು ಕುಳಿತ ಹಿರಿ ಜೀವಗಳ ಆಸೆ ನಿರಾಸೆಯಾಗಿದೆ. ಇವ್ರ ಪರಿಸ್ಥಿತಿ ನೋಡ್ತಾ ಇದ್ರೆ ಕರುಳು ಚುರ್ರೆನಿಸುತ್ತೆ.

ಹೌದು.. ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಮಹಾರಾಷ್ಟ್ರದ ಅರಬ್ಬೀ ಸಮುದ್ರದ ಮಲ್ವಾನ್ ಪ್ರದೇಶದಲ್ಲಿ ಪತ್ತೆಯಾಗಿದೆ. ಆದ್ರೆ ನಾಪತ್ತೆಯಾದ ಮೀನುಗಾರರ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಡಿಸೆಂಬರ್ 13 ರಂದು ಉಡುಪಿ ಜಿಲ್ಲೆಯ ಮಲ್ಪೆಯಿಂದ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಕಾಣೆಯಾಗಿತ್ತು. ಮಾಲೀಕ ಉಡುಪಿಯ ಚಂದ್ರ ಶೇಖರ, ಮೀನುಗಾರರಾದ ದಾಮೋದರ, ಲಕ್ಷ್ಮಣ್, ಸತೀಶ್ ರವಿ, ಹರೀಶ್, ರಮೇಶ್, ಜೋಗಯ್ಯ ಎಂಬವರು ಕಾಣೆಯಾಗಿದ್ದು, ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ 5 ಮಂದಿ ಹಾಗೂ ಉಡುಪಿ ಜಿಲ್ಲೆಯ 2 ಮೀನುಗಾರರು ಸೇರಿದಂತೆ ಒಟ್ಟು ಏಳು ಜನ ಮೀನುಗಾರರು ನಾಪತ್ತೆಯಾಗಿದ್ದರು. ಘಟನೆ ಸಂಬಂಧ ಕುಟುಂಬದವರು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಮೀನುಗಾರರನ್ನು ಹುಡುಕಿ ಕೊಡುವಂತೆ ಮಲ್ಪೆ ಸೇರಿದಂತೆ ಕರಾವಳಿಯ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಡ ತಂದಿದ್ದರು. ಬೋಟಿನ ಪತ್ತೆ ಕಾರ್ಯಕ್ಕಾಗಿ ರಾಜ್ಯ ಸರ್ಕಾರ ಡಿಐಜಿ ನೇತೃತ್ವದ ತನಿಖಾ ತಂಡವನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದ್ದರೆ, ಕೇಂದ್ರ ಸರ್ಕಾರ ಸಟಲೈಟ್ ತಂತ್ರಜ್ಞಾನ ನೌಕಾದಳದ ಸಿಬ್ಬಂದಿಯನ್ನು ಹಾಗೂ ಮುಳುಗು ತಜ್ಞರ ಮೂಲಕ ಹುಡುಕಾಟ ನಡೆಸಿತ್ತು. ಆದರೆ ಅರಬ್ಬೀ ಸಮುದ್ರದಲ್ಲಿ ಅವಶೇಷಗಳಾಗಲಿ, ಶವವಾಗಲಿ ಸಿಗದ ಕಾರಣ ಉಗ್ರವಾದಿಗಳು ಅಥವಾ ಕಡಲಗಳ್ಳರು ಅಪಹರಿಸಿದ ಶಂಕೆ ವ್ಯಕ್ತಪಡಿಸಲಾಗಿತ್ತು.ಕಳೆದ ಐದು ತಿಂಗಳಿಂದ ನಾಪತ್ತೆಯಾದ ಮೀನುಗಾರರ ಸುಳಿವು ಸಿಗದೇ ಇರುವುದರಿಂದ ಉಡುಪಿಯ ಶಾಸಕ ಕೆ ರಘುಪತಿ ಭಟ್ ರವರ ನೇತೃತ್ವದಲ್ಲಿ ಮೀನುಗಾರರ ಕುಟುಂಬದ ಜೊತೆಗೆ ಪರಿಶೀಲನೆ ನಡೆಸಲು ಸಮುದ್ರಕ್ಕೆ ತೆರಳಿದ್ದರು.
ಮೀನುಗಾರರು ನಾಪತ್ತೆಯಾದ ಬಗ್ಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ನೀಡಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ರಘುಪತಿ ಭಟ್ ಅವರು ಮಾತುಕತೆ ಸಹ ನಡೆಸಿದ್ದರು. ಇದಾದ ಬಳಿಕ ಸ್ವತಃ ನಿರ್ಮಲಾ ಸೀತಾರಾಮನ್ ಅವರೇ ಉಡುಪಿಗೆ ಆಗಮಿಸಿ ನಾಪತ್ತೆಯಾದ ಮೀನುಗಾರರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಇದೇ ವೇಳೆ ಕೇಂದ್ರ ಸರಕಾರ ಮತ್ತಷ್ಟು ಪತ್ತೆ ಕಾರ್ಯಕ್ಕೆ ನೆರವು ನೀಡುವುದಾಗಿ ಭರವಸೆ ನೀಡುವ ಜೊತೆ ಖುದ್ದು ಮೀನುಗಾರರನ್ನು ದೆಹಲಿಗೆ ಕರೆಸಿಕೊಂಡು ಹಲವು ಮಾಹಿತಿ ಹಂಚಿಕೊಂಡಿದ್ದರು.ಇದೀಗ ನಾಲ್ಕೂವರೆ ತಿಂಗಳ ಬಳಿಕ ಬೋಟ್ ಪತ್ತೆಯಾಗಿದ್ದು, ಅದರಲ್ಲಿದ್ದ ಏಳು ಜನ ಮೀನುಗಾರರು ದುರಂತ ಸಾವನ್ನಪ್ಪಿರುವುದು ಬಹುತೇಕ ಖಚಿತವಾಗಿದೆ.ಒಟ್ಟಿನಲ್ಲಿ ಹಲವಾರು ದಿನಗಳಿಂದ ಕಾದು ಕೂತ ಮನೆಮಂದಿಯ ಕನಸು ಕಮರಿಹೋಗಿದ್ದು ಕಣ್ಣಿರಲ್ಲಿ ಕಾಲ ಕಳೆಯುವ ಪರಿಸ್ಥಿತಿ ಒದಗಿ ಬಂದಿದೆ.

Related posts

Leave a Reply

Your email address will not be published. Required fields are marked *