
ಕೊರೊನಾ ಹಿನ್ನೆಲೆಯಲ್ಲಿ ಹಿನ್ನೆಡೆಯಾಗಿರುವ ಪೌತಿ ಅದಾಲತ್ನ್ನು ಕೂಡಲೇ ಪುನರಾರಂಭಿಸಿ, ಮೂರು ತಿಂಗಳೊಳಗೆ ಫಲಾನುಭವಿಗಳಿಗೆ ದಾಖಲೆ ನೀಡಿ, ಪ್ರಕರಣ ಮುಕ್ತಾಯ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.ಮಿನಿ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಕಂದಾಯ ಇಲಾಖೆಯ 18 ವಿಭಾಗದ ಕೆಲಸ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರತಿ ತಿಂಗಳು ಎಲ್ಲಾ ತಾಲೂಕಿನಲ್ಲೂ ಪೌತಿ ಅದಾಲತ್ ನಡೆಸಲಾಗುತ್ತದೆ. ಆಕ್ಷೇಪ ಬಂದಲ್ಲಿ ತಹಸೀಲ್ದಾರ್ ವಿಚಾರಣೆ ನಡೆಸಿ ಆದೇಶ ಮಾಡುತ್ತಾರೆ. ಪಹಣಿ ಪತ್ರದ ಕಾಲಂ 3,9 ಹೊಂದಾಣಿಕೆ ಆಗದ 20 ಪ್ರಕರಣ ಜಿಲ್ಲೆಯಲ್ಲಿ ಬಾಕಿಯಿದ್ದು, ಆದ್ಯತೆ ಮೇಲೆ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ. ಸಾವಿರಕ್ಕೂ ಹೆಚ್ಚು 11 ಇ ನಕ್ಷೆ ಅರ್ಜಿ ವಿಲೇವಾರಿಗೆ ಬಾಕಿ ಇದ್ದು, ಒಂದು ತಿಂಗಳೊಳಗೆ ಎಲ್ಲಾ ಪ್ರಕರಣಗಳನ್ನು ಮುಗಿಸಲು ಸೂಚಿಸಲಾಗಿದೆ ಎಂದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ತಹಸೀಲ್ದಾರ್ ಆನಂದಪ್ಪ ಹೆಚ್.ನಾಯ್ಕ್ ಭಾಗಿಯಾಗಿದ್ರು.