Breaking News

ಕೊಳೆಯಿಂದ ನಲುಗಿರುವ ನೇಜಾರು ಕಲ್ಯಾಣಪುರ ಕೆರೆ, ಸದಾ ನೀರಿದ್ದರೂ ಇತಿಹಾಸ ಸ್ವಚ್ಚತೆ ಮರಳಿಸಲು ಮೊರೆ

ಇದೀಗ ಎಲ್ಲೆಡೆ ಕುಡಿಯುವ ನೀರಿನ ಬರ, ಅದೆಷ್ಟೋ ಕೆರೆಗಳು ಬತ್ತಿ ಬಿರುಕು ಬಿಟ್ಟಿವೆ. ಆದರೆ ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಅಗಸನ ಕೆರೆಯಲ್ಲಿ ಮಾತ್ರ ಮಳೆ ಬರಲಿ ಬಾರದೇ ಇರಲಿ ಸದಾ ಜೀವ ಸೆಲೆಯಾಗಿಯೇ ಇರುತ್ತದೆ.
ಸುಮಾರು ೫೦೦ರಿಂದ ೬೦೦ ವರ್ಷಗಳ ಹಿಂದಿನ ಐತಿಹಾಸಿಕ ಅಗಸನ ಕೆರೆ ಸರಿಯಾದ ನಿರ್ವಹಣೆಯಿಲ್ಲದೆ ಇಂದು ತ್ಯಾಜ್ಯಗಳಿಂದ ತುಂಬಿಕೊಂಡು ಗಬ್ಬೆದ್ದು ನಾರುತ್ತಿದೆ. ಸುತ್ತಮುತ್ತಲ ವಸತಿ ಪ್ರದೇಶದ, ಚರಂಡಿ ಕೊಳಚೆ ನೀರು ನೇರ ಬಂದು ಕೆರೆಯನ್ನು ಸೇರುವುದರಿಂದ ಕೆರೆಯ ನೀರು ಮಲಿನಗೊಂಡಿದೆ. ಇದರಿಂದ ಪರಿಸರ ಎಲ್ಲೆಡೆ ಗಬ್ಬು ವಾಸನೆ ಬರುತ್ತಿದೆ. ಹಿಂದೆ ಈ ಕೆರೆ ಸುಮಾರು ೩.೫೭ ಎಕ್ರೆ ವಿಸ್ತೀರ್ಣದಲ್ಲಿತ್ತು. ಇದೀಗ ಒತ್ತುವರಿವಾಗಿ ಕೆರೆ ಕಿರಿದಾಗುತ್ತಾ ಬಂದಿದೆ. ಹಿಂದೆ ಕುಡಿಯಲು ಯೋಗ್ಯವಾದ ಸುತ್ತಮುತ್ತಲಿನ ಜನರಿಗೆ ಗೃಹ ಬಳಕೆಗೂ ಅನುಕೂಲವಾಗಿತ್ತು.
ಈ ಕೆರೆಯಲ್ಲಿ ಹೂಳು ತೆಗೆಯುವ ಕಾರ್ಯ ನಡೆದಿಲ್ಲ. ಹಲವಾರು ವರ್ಷ ಹಿಂದೆ ಹೂಳು ತೆಗೆಯಲಾಗಿದ್ದರೂ ಹೂಳನ್ನು ಕೆರೆಯ ಸಮೀಪವೇ ಸುರಿದಿದ್ದರಿಂದ ಅದು ಮತ್ತೆ ಕೆರೆಯ ಪಾಲಾಗಿದೆ ಎನ್ನಲಾಗಿದೆ. ಕೆಲವರು ಸತ್ತ ನಾಯಿ, ಬೆಕ್ಕುಗಳನ್ನು ಗೋಣಿಚೀಲದಲ್ಲಿ ತಂದು ಇಲ್ಲಿಗೆ ಹಾಕುತ್ತಾರೆ. ರಸ್ತೆಯ ಪಕ್ಕದಲ್ಲೇ ಕೆರೆ ಇರುವುದರಿಂದ ಜನರು ಸುಲಭದಲ್ಲಿ ತ್ಯಾಜ್ಯವನ್ನು ಕೆರೆಗೆ ಎಸೆದು ಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಪಂಚಾಯತ್ ಕೆರೆಗೆ ತ್ಯಾಜ್ಯ ಎಸೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ರಾತ್ರಿ ವೇಳೆ ಕದ್ದು ಮುಚ್ಚಿ ಎಸೆಯುವವರನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ನೀರಿನ ಶೇಖರಣೆ ಮತ್ತು ಅಂತರ್ಜಲ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಕೆರೆಗಳನ್ನು ಪುನಶ್ಚೇತನಗೊಳಿಸಿ ಅಭಿವೃದ್ದಿ ಪಡಿಸುವಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಅವರು ದೊಡ್ಡ ಕ್ರಾಂತಿಯನ್ನು ಮಾಡಿದ್ದು ಜನಜನಿತವಾಗಿದ್ದು ಇಲ್ಲಿನ ಕೆರೆಯ ಅಭಿವೃದ್ಧಿ ಆಗಬಹುದೆಂಬ ನಿರೀಕ್ಷೆ ಜನರಲ್ಲಿದೆ.

Related posts

Leave a Reply