Breaking News

ಕೋಟೆಕಾರು ಬೀರಿಯಲ್ಲಿ ಪಶು ಆಸ್ಪತ್ರೆ,  ಸಚಿವ ಖಾದರ್‌ರಿಂದ ಕಟ್ಟಡಕ್ಕೆ ಶಂಕುಸ್ಥಾಪನೆ

ಪಶು ಸಂರಕ್ಷಣೆ, ಜಾನುವಾರು ಸಂತತಿ ಹೆಚ್ಚಿಸುವ ಉದ್ದೇಶವನ್ನು ಹೊಂದಿರುವ ರಾಜ್ಯ ಸರಕಾರದಿಂದ ಪಶುಗಳಿಗಾಗಿ ಹಮ್ಮಿಕೊಂಡ ವಿವಿಧ ಯೋಜನೆಗಳಿಂದಾಗಿ ಹೈನುಗಾರಿಕೆ ಸಾಕಷ್ಟು ಯಶಸ್ಸನ್ನು ಸಾಧಿಸಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.
ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪಶು ಆಸ್ಪತ್ರೆ ಕೋಟೆಕಾರು ಇದರ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ಕೋಟೆಕಾರು ಬೀರಿಯ ಪಶು ಆಸ್ಪತ್ರೆ ಆವರಣದಲ್ಲಿ ಗುರುವಾರ ನೆರವೇರಿಸಿ ಮಾತನಾಡಿದರು. ಹೈನುಗಾರಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೫೬ ಗೋವುಗಳನ್ನು ಸರಕಾರದ ವತಿಯಿಂದ ಫಲಾನುಭವಿಗಳಿಗೆ ವಿತರಿಸಲಾಗಿದೆ. ಇದನ್ನು ಸಾಕಿ ಸಲಹಿ ಅದರಿಂದ ಬಂದ ಆದಾಯದಲ್ಲಿ ಹೆಚ್ಚುವರಿ ಹಸುಗಳನ್ನು ಸಾಕುವುದರೊಂದಿಗೆ, ಮಾರುಕಟ್ಟೆಗೆ ಪೂರೈಸುವ ಹಾಲಿನ ಪ್ರಮಾಣವೂ ಜಾಸ್ತಿಯಾಗಿದೆ. ಇಂತಹ ಲಾಭಾಂಶವುಳ್ಳ ಹೈನುಗಾರಿಕೆ ಮತ್ತು ಪ್ರಾಣಿಗಳನ್ನು ಪೋಷಿಸುವ ನಿಟ್ಟಿನಲ್ಲಿ ಪಶು ಆಸ್ಪತ್ರೆಗಳ ಅಗತ್ಯತೆ ಹೆಚ್ಚಿದೆ. ಗ್ರಾಮೀಣ ಭಾಗದಲ್ಲಿ ಪಶು ಆಸ್ಪತ್ರೆಯನ್ನು ಸ್ಥಾಪಿಸುವುದರಿಂದ ಜನ ಕಡಿಮೆ ಖರ್ಚಿನಲ್ಲಿ ಪ್ರಾಣಿಗಳಿಗೆ ಚಿಕಿತ್ಸೆ ಕೊಡುವ ಅವಕಾಶ ಕಲ್ಪಿಸಿದಂತಾಗುತ್ತದೆ. ಈಗಾಗಲೇ ಪಾವೂರು ಪಂಚಾಯಿತಿ ವ್ಯಾಪ್ತಿಯಲ್ಲೂ ಸುಸಜ್ಜಿತ ಪಶು ಆಸ್ಪತ್ರೆ ತೆರೆಯಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಿಗಾಗಿ ರೂ. ೭೨ ಕೋಟಿ ಅನುದಾನ ಬಿಡುಗಡೆಯಾಗಿದೆ. ಒಂಭತ್ತು ತಿಂಗಳ ಅವಧಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಮುಗಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು ಮಲಾರ್, ಸೋಮೇಶ್ವರ ಜಿಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾಪಂ ಸದಸ್ಯರುಗಳಾದ ರವಿಶಂಕರ್, ಸುರೇಖಾ ಚಂದ್ರಹಾಸ್, ಸಿದ್ಧೀಖ್ ತಲಪಾಡಿ, ಪಶುಪಾಲನಾ ಹಾಗೂ ಪಶುವೈದ್ಯ ಸೇವೆಗಳ ಉಪನಿರ್ದೇಶಕ ಡಾ.ತಿಪ್ಪೇಸ್ವಾಮಿ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.

Related posts

Leave a Reply