Header Ads
Header Ads
Breaking News

ಕೋಡಿ ಅಳಿವೆಬಾಗಿಲು ಬ್ರೇಕ್ ವಾಟರ್ ಕಾಮಗಾರಿ ಅವಾಂತರ: ಸ್ಥಳಕ್ಕೆ ಶಾಸಕ ಹಾಲಾಡಿ ಭೇಟಿ

ಕುಂದಾಪುರ: ತಾಲೂಕಿನ ಕೋಡಿ ಅಳಿವೆಬಾಗಿಲು ಮತ್ತು ಗಂಗೊಳ್ಳಿಯಲ್ಲಿ 102ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬ್ರೇಕ್ ವಾಟರ್ ಕಾಮಗಾರಿ ಇದೀಗ ಮೀನುಗಾರರಿಗೆ ಸಂಕಷ್ಟ ತಂದೊಡ್ಡಿದ್ದು, ಈ ಬಗ್ಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋಡಿ ಅಳಿವೆಬಾಗಿಲು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು ಮೀನುಗಾರರ ಸಮಸ್ಯೆಯನ್ನು ಆಲಿಸಿದರು. ಈ ವೇಳೆ ಕೋಡಿ ಅಳಿವೆಬಾಗಿಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ೯೦೦ ಮೀಟರ್ ಹಾಗೂ ಗಂಗೊಳ್ಳಿಯಲ್ಲಿ 7೦೦ ಮೀ ಬ್ರೇಕ್ ವಾಟರ್ ಕಾಮಗಾರಿಯು ಅಂತಿಮ ಹಂತ ತಲುಪಿದ್ದು, ಅಸಮರ್ಪಕ ಕಾಮಗಾರಿಯಿಂದಾಗಿ ಕೋಡಿ ಮತ್ತು ಗಂಗೊಳ್ಳಿ ಮಧ್ಯಭಾಗದಲ್ಲಿ ಮರಳು ದಿಬ್ಬ ನಿರ್ಮಾಣಗೊಂಡಿದೆ. ಪರಿಣಾಮ ಕೋಡಿ ಭಾಗದ ಮೀನುಗಾರಿಕಾ ಬೋಟ್‌ಗಳು ಸಮುದ್ರ ಪ್ರವೇಶಿಸಲು ಮರಳು ದಿಬ್ಬ ತೊಂದರೆಯುಂಟು ಮಾಡುತ್ತಿದೆ ಎಂದು ಮೀನುಗಾರರು ಆರೋಪಿಸಿದರು.

ಬ್ರೇಕ್ ವಾಟರ್ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಮರಳನ್ನು ದಡಕ್ಕೆ ಹಾಕಬೇಕಿತ್ತು. ಬದಲಿಗೆ ನದಿಗೆ ಹಾಕಿದ್ದರಿಂದ ಮರಳೆಲ್ಲಾ ಒಂದೆಡೆ ಸೇರಿವೆ. ಇದರಿಂದಾಗಿ ಕೋಡಿ ಜಟ್ಟಿಯಿಂದ ಹೊರಡುವ ಎಲ್ಲಾ ಬೋಟುಗಳು ಮರಳು ದಿಬ್ಬಕ್ಕೆ ತಗಲುತ್ತದೆ. ಈ ಬಾರಿ ಅಗಸ್ಟ್ ತಿಂಗಳ ಮೊದಲಲ್ಲಿ ಮೀನುಗಾರಿಕೆಗೆ ಬೋಟುಗಳು ಹೊರಡಲಿದ್ದು, ಆದಷ್ಟು ಬೇಗ ಮರಳು ದಿಬ್ಬವನ್ನು ತೆರವುಗೊಳಿಸುವಂತೆ ಮೀನುಗಾರರು ಶಾಸಕರಲ್ಲಿ ಮನವಿ ಮಾಡಿಕೊಂಡರು.

ಮೀನುಗಾರರ ಸಮಸ್ಯೆ ಆಲಿಸಿದ ಶಾಸಕ ಹಾಲಾಡಿ, ಈ ಭಾರಿ ಬೋಟುಗಳು ಮೀನುಗಾರಿಕೆಗೆ ಹೊರಡುವ ಮುನ್ನವೇ ಮರಳು ದಿಬ್ಬಗಳನ್ನು ತೆರವುಗೊಳಿಸುವುದಾಗಿ ಆಶ್ವಾಸನೆ ನೀಡಿದರು. ಈಗಾಗಲೇ ಮೀನುಗಾರರ ಸಮಸ್ಯೆಯ ಕುರಿತು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದೇನೆ. ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ವರದಿ: ಶ್ರೀಕಾಂತ್ ಹೆಮ್ಮಾಡಿ ಕುಂದಾಪುರ

Related posts

Leave a Reply