Header Ads
Header Ads
Breaking News

ಕೋರ್ಟ್ ತೀರ್ಪಿನಿಂದ ನಮ್ಮ ಆಚರಣೆಗಳು ಬದಲಾಗಲ್ಲ:ಕೊಲ್ಲೂರಿನಲ್ಲಿ ಪಂದಳರಾಜ ಶಶಿಕುಮಾರ ವರ್ಮ ಹೇಳಿಕೆ

ಕುಂದಾಪುರ: ಹಿಂದೂ ಧರ್ಮದಲ್ಲಿ ಅದರದೆ ಆದ ನಂಬಿಕೆ ಇರುತ್ತದೆ. ಕೋರ್ಟ್ ತೀರ್ಪು ಬಂದ ಕೂಡಲೇ ಆ ನಂಬಿಕೆಗಳನ್ನು ಮುರಿಯಲು ಸಾಧ್ಯವಿಲ್ಲ. ಕೋರ್ಟ್ ತೀರ್ಪಿನಿಂದ ನಮ್ಮ ಸಾಂಪ್ರದಾಯಿಕ ನಂಬಿಕೆ, ಆಚರಣೆ, ಸಂಸ್ಕೃತಿ ಬದಲಾಗಲ್ಲ ಎಂದು ಶಬರಿಮಲೆ ಕ್ಷೇತ್ರದ ಆಡಳಿತದಾರರಾದ ಪಂದಳರಾಜ ಶಶಿಕುಮಾರ ವರ್ಮ ಹೇಳಿದರು.ಅವರು ಶುಕ್ರವಾರ ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ಮೂಕಾಂಬಿಕೆ ದರ್ಶನ ಪಡೆದ ಬಳಿಕ ಕೊಲ್ಲೂರಿನ ಶ್ರೀರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಕೋರ್ಟ್ ತೀರ್ಪಿನ ವಿರುದ್ದ ಈಗಾಗಲೇ ಅಯ್ಯಪ್ಪ ಸ್ವಾಮಿ ಭಕ್ತರು ಧರ್ಮಜಾಗೃತಿ ಅಭಿಯಾನ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಅವರೆಲ್ಲರ ಅಭಿಪ್ರಾಯವನ್ನು ಕ್ರೋಢೀಕರಿಸಿ ಮುಂದಿನ ತೀರ್ಮಾನಕ್ಕೆ ಬರಲಾಗುವುದು ಎಂದರು.

ಇನ್ನು ಎಲ್ಲಾ ದೇವಸ್ಥಾನಗಳಲ್ಲಿರುವ ವಸ್ತೃ ಸಂಹಿತೆ ಕುರಿತು ಪ್ರತಿಕ್ರಿಯಿಸಿರುವ ಅವರು, ಎಲ್ಲಾ ಕಡೆಗಳಲ್ಲಿ ಅದರದ್ದೇ ಆದ ಒಂದು ಸಂಸ್ಕೃತಿ ಇರುತ್ತೆ. ದೇವಸ್ಥಾನಗಳಲ್ಲಿ ತುಂಡು ಉಡುಗೆ ಉಟ್ಟು ದೇವರ ದರ್ಶನ ಪಡೆಯೋದು ನಮ್ಮ ಸಂಸ್ಕೃತಿ ಅಲ್ಲ. ಧಾರ್ಮಿಕ ಕೇಂದ್ರಗಳಿಗೆ ನಮಗಿಷ್ಟವಾದ ದಿರಿಸು ಧರಿಸಿ ಹೋಗುವುದು ಸರಿಯಲ್ಲ. ದೇವಸ್ಥಾನದ ಹೊರಗಡೆ ನಮ್ಮ ಚಪ್ಪಲಿಯನ್ನು ಬಿಡುತ್ತೇವೆ. ಚಪ್ಪಲಿ ಇಡಲೆಂದೆ ಒಂದು ಸ್ಥಳ ನಿಗದಿಪಡಿಸುತ್ತಾರೆ. ನ್ಯಾಯಾಲಯಗಳಲ್ಲೂ ವಕೀಲರು ಕಪ್ಪು ಕೋಟು ಧರಿಸುತ್ತಾರೆ. ಕೇವಲ ದೇವಸ್ಥಾನ ಅಂತ ಅಲ್ಲ. ಪ್ರತಿಯೊಂದು ಸ್ಥಳಗಳಲ್ಲಿ ಅದರದ್ದೇ ಆದ ಒಂದು ವಸ್ತೃ ಸಂಹಿತೆ ಇದ್ದೇ ಇರುತ್ತದೆ.

ಅದನ್ನೆಲ್ಲಾ ಮೀರಿ ನಾವು ನಡೆದುಕೊಳ್ಳಲಾಗಲ್ಲ ಎಂದರು.ಪ್ರತೀ ವರ್ಷ ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಮೂರರಿಂದ ನಾಲ್ಕು ಕೋಟಿ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಪ್ರಸ್ತುತ ಸುಪ್ರೀಂ ಕೋರ್ಟ್ ತೀರ್ಮಾನದಿಂದಾಗಿ ಭಕ್ತರು ಆತಂಕದಲ್ಲಿದ್ದಾರೆ. ನಿಜಕ್ಕೂ ದೇವಸ್ಥಾನದಲ್ಲಿ ಏನು ನಡೆಯುತ್ತಿದೆ ಎನ್ನುವ ವಿಚಾರ ಅವರಿಗೆ ಗೊತ್ತಿಲ್ಲ. ಸೋಶೀಯಲ್ ಮೀಡಿಯಾ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ನೋಡಿ ಭಕ್ತರು ಭಯಬೀತರಾಗಿದ್ದಾರೆ. ಇದರಿಂದಾಗಿ ಈ ಬಾರಿ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಬಹುದು. ಕಾದು ನೋಡೋಣ. ಇವೆಲ್ಲಾ ವಿವಾದಗಳು ಪರಿಹಾರ ಆಗಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಇನ್ನೂ ಹತ್ತು ದಿನಗಳಲ್ಲಿ ಇದೇ ವಿವಾದ ಮುಂದುವರೆಯುತ್ತೆ. ಇಂತಹ ವಿವಾದಗಳೆಲ್ಲವೂ ಹೆಚ್ಚಾಗಿ ಹಿಂದೂ ದೇವಾಗಳ ಮೇಲೆ ಆಗುತ್ತಿರುವುದು ದುರಂತ. ಚರ್ಚ್ ಗಳಲ್ಲಾಗಲಿ, ಮಸೀದಿಗಳಲ್ಲಾಗಲಿ ಇಂತಹ ವಿವಾದಗಳು ನಡೆಯಲ್ಲ. ಹೀಗಾಗಿ ಅಯ್ಯಪ್ಪ ಸ್ವಾಮಿ ಭಕ್ತರು ಮಾತ್ರರಲ್ಲದೇ ಹಿಂದೂ ಧರ್ಮದವರೂ ಇದರ ವಿರುದ್ದ ಧ್ವನಿ ಎತ್ತಿ ವಿವಾದವನ್ನು ಬಗೆಹರಿಸಬೇಕು ಎಂದರು.ಈ ವೇಳೆಯಲ್ಲಿ ಶಶಿಕುಮಾರ ಮರ್ಮ ಪತ್ನಿ ಮೀರಾ ವರ್ಮಾ, ಶಾಸಕ ಸುಕುಮಾರ ಶೆಟ್ಟಿ, ಕಾರ್ಯನಿರ್ವಣಾಧಿಕಾರಿ ಹೆಚ್. ಹಾಲಪ್ಪ, ವ್ಯವಸ್ಥಾಪನಾಸಮಿತಿ ಸದಸ್ಯ ರಮೇಶ್ ಗಾಣಿಗ, ರಾಮಕೃಷ್ಣ ಆಶ್ರಮ ಮುಖ್ಯಸ್ಥರಾದ ರಾಧಾಚಂದ್ರಘೋಷ್, ಧರ್ಮ ಜಾಗೃತಿ ಅಭಿಯಾನದ ಪ್ರಮುಖ ಗಿರೀಶ್ ಉಡುಪಿ ಮೊದಲಾದವರು ಇದ್ದರು.

Related posts

Leave a Reply