Header Ads
Header Ads
Breaking News

’ಕ್ಯಾರ್’ ಬೆನ್ನಲ್ಲೇ ಕಾಡುತ್ತಿದೆ ’ಮಹಾ’ ಚಂಡಮಾರುತದ ಭೀತಿ

ಅರಬ್ಬಿ ಸಮುದ್ರದಲ್ಲಿ ಕಳೆದ ವಾರ ಕಾಣಿಸಿಕೊಂಡಿದ್ದ ‘ಕ್ಯಾರ್’ ಚಂಡಮಾರುತವು ಒಮನ್ ನತ್ತ ತನ್ನ ದಿಕ್ಕು ಬದಲಿಸಿದರೂ ಮಂಗಳವಾರ ರಾತ್ರಿ ಮಂಗಳೂರು ಸಹಿತ ಜಿಲ್ಲೆಯ ಹಲವು ಕಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಮತ್ತೆ ಚಂಡಮಾರುತದ ಭೀತಿ ಎದುರಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಅದು ಚಂಡಮಾರುತವಾಗಿ ಮತ್ತೆ ಅರಬ್ಬೀ ಸಮುದ್ರದಲ್ಲಿ ತನ್ನ ಆರ್ಭಟ ತೋರ್ಪಡಿಸುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆಯು ತಿಳಿಸಿತ್ತು. ಅದರಂತೆ ಮಂಗಳವಾರ ರಾತ್ರಿಯೇ ಮಳೆ, ಗುಡುಗು, ಮಿಂಚು ಕಾಣಿಸಿಕೊಂಡಿದ್ದು, ಅ.೩೧ರವರೆಗೆ ಇದು ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಮಹಾ’ ಎಂದು ಹೆಸರಿಡಲಾಗಿರುವ ಈ ಚಂಡಮಾರುತ ಕೆಲವೇ ದಿನಗಳಲ್ಲಿ ಮಳೆಯೊಂದಿಗೆ ಮತ್ತೆ ಅಬ್ಬರಿಸುವ ಎಲ್ಲ ಸಾಧ್ಯತೆಗಳಿವೆ. ಪ್ರಸ್ತುತ ಕನ್ಯಾಕುಮಾರಿಯ ಕೇಪ್ ಕೊಮೊರಿನ್ ಪ್ರದೇಶದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದೆ. ಆರಂಭಿಕ ಹಂತದಲ್ಲಿ ಉತ್ತರ-ವಾಯವ್ಯದತ್ತ ಮುನ್ನಡೆದು, ಒಂದೆರಡು ದಿನಗಳಲ್ಲಿ ಆಗ್ನೇಯ ಅರಬ್ಬಿ ಸಮುದ್ರ ಪ್ರವೇಶಿಸಿ ಲಕ್ಷದ್ವೀಪ ಬಳಿ ವಾಯುಭಾರ ಕುಸಿತವಾಗಿ ಪರಿವರ್ತನೆಗೊಳ್ಳಲಿದೆ. ಸಮುದ್ರದ ಮೇಲ್ಮೈ ಉಷ್ಣಾಂಶ 29-30 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು, ಮುಂದಕ್ಕೆ ಪರಿಸ್ಥಿತಿಗಳು ಪೂರಕವಾಗಿ ತೀವ್ರತೆ ಹೆಚ್ಚಾಗಿ ಚಂಡಮಾರುತವಾಗಿ ಬದಲಾಗಲಿದೆ ಎನ್ನುತ್ತಾರೆ ಭಾರತೀಯ ಹವಾಮಾನ ಇಲಾಖೆ ತಜ್ಞರು. ಈಗಾಗಲೇ ಕರಾವಳಿಯಲ್ಲಿ ಗಾಳಿ-ಮಳೆಯೊಂದಿಗೆ ಅಬ್ಬರಿಸಿದ ‘ಕ್ಯಾರ್’ ಚಂಡಮಾರುತ ಭಾರತದಿಂದ ದೂರವಾಗಿದ್ದು, ಓಮನ್ ತೀರ ಸಮೀಪಿಸುತ್ತಿದೆ. ಮಹಾ ಕೂಡ ಅದೇ ಹಾದಿಯಲ್ಲಿ ಸಾಗುವ ಎಲ್ಲ ಸಾಧ್ಯತೆಗಳಿವೆ. ಈ ಚಂಡಮಾರುತದ ಪರಿಣಾಮ ಕರ್ನಾಟಕ ಕರಾವಳಿಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಸ್ಪಷ್ಟತೆ ಸಿಗಬಹುದು ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಎರಡು ದಿನದಿಂದ ಕರಾವಳಿ ತೀರದಲ್ಲಿ ಮಳೆಯ ಆರ್ಭಟ ಕಡಿಮೆಯಾಗಿತ್ತು. ಮಂಗಳವಾರ ಹಗಲಿಡೀ ಬಿಸಿಲು ಆವರಿಸಿದ್ದರೆ ರಾತ್ರಿ ಸುಮಾರು 8ಗಂಟೆಯ ಬಳಿಕ ಗುಡುಗು-ಮಿಂಚಿನ ಆರ್ಭಟದಿಂದ ಮತ್ತೆ ಆತಂಕದ ಛಾಯೆ ಸೃಷ್ಟಿಸಿದೆ. ಜಿಲ್ಲೆಯ ಮಂಗಳೂರು, ಉಳ್ಳಾಲ, ದೇರಳಕಟ್ಟೆ, ಸುರತ್ಕಲ್, ಬಂಟ್ವಾಳ ಸಹಿತ ತಾಲೂಕು ಕೇಂದ್ರಗಳು ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮಳೆಯಾಗಿದೆ.

Related posts

Leave a Reply

Your email address will not be published. Required fields are marked *