Breaking News

ಕ್ರೀಡಾಂಗಣವಾಗಬೇಕೆಂಬ ಹಂಬಲದಿಂದ ಜೋಪಡಿ ಹಾಕಿದರು, ಕೈರಂಗಳ ಆಟದ ಮೈದಾನದಲ್ಲಿ ಖಾಸಗಿ ವ್ಯಕ್ತಿ ಬಾಳೆಗಿಡ ನೆಟ್ಟರು

ಕಳೆದ ಕೆಲವು ದಶಕಗಳಿಂದ ಗ್ರಾಮೀಣ ಭಾಗದಲ್ಲಿ ಬಲು ದೊಡ್ಡ ಆಟದ ಬಯಲಾಗಿದ್ದ ಸುಮಾರು ೧.೭೦ ಎಕರೆ ಸ್ಥಳದಲ್ಲಿ ಏಕಾಏಕಿ ಖಾಸಗಿ ವ್ಯಕ್ತಿಯೊಬ್ಬರು ಬಾಳೆಗಿಡ ನೆಡುತ್ತಾ ಸಾಗಿದ್ದನ್ನು ಕಂಡ ಕ್ರೀಡಾಪಟುಗಳು ಅದಕ್ಕೆ ವಿರೋಧವನ್ನೂ ವ್ಯಕ್ತಪಡಿಸದೆ ಬಾಳೆಗಿಡಕ್ಕೆ ಹಾನಿಯೂ ಮಾಡದೆ ಬರೋಬ್ಬರಿ ೩೫ ಜೋಪಡಿ ಹಾಕಿದ್ದಾರೆ.
ಜೋಪಡಿ ಹಾಕಿದವರಲ್ಲಿ ಕೇವಲ ಕ್ರೀಡಾಪಟುಗಳ ಕುಟುಂಬ ಮಾತ್ರವಲ್ಲ, ನಿವೇಶನ ರಹಿತರು, ಬಾಡಿಗೆ ಮನೆಯಲ್ಲಿ ವಾಸವಿರುವವರು ಸೇರಿದ್ದಾರೆ. ಕಷ್ಟ ಕಾಲದಲ್ಲಿ ಸಿಕ್ಕಿದೆ, ಸಮಸ್ಯೆ ಬರದಿದ್ದರೆ ಮುಂದೆ ಮನೆ ಕಟ್ಟಿಕೊಳ್ಳುವುದು ಎಂಬ ನಂಬಿಕೆಯಲ್ಲಿದ್ದಾರೆ. ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ದುಗ್ಗಜ್ಜರಕಟ್ಟೆಯಲ್ಲಿ ಇರುವ ಇಲ್ಲಿ ಸುಮಾರು ೧.೭೦ ಎಕರೆ ಸ್ಥಳವೊಂದು ಆಟದ ಬಯಲಾಗಿ ಬಳಕೆಯಾಗುತ್ತಿತ್ತು. ಇಲ್ಲಿನ ಫ್ರೆಂಡ್ ಕ್ಲಬ್, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೈರಂಗಳ ಶ್ರೀಕೃಷ್ಣ ಗೇಮ್ಸ್ ಕ್ಲಬ್ ಸೇರಿದಂತೆ ಕೆಲವು ಸಂಘ ಸಂಸ್ಥೆಗಳು ಆಟಕ್ಕಾಗಿ ಈ ಮೈದಾನವನ್ನು ಬಳಸುತ್ತಿದ್ದರು. ಕೆಲವು ದಿನಗಳ ಹಿಂದೆ ಖಾಸಗಿ ವ್ಯಕ್ತಿಯೊಬ್ಬರು ಸ್ವಬಳಕೆಗಾಗಿ ಈ ಆಟದ ಮೈದಾನವನ್ನು ಬಳಸಲು ಯತ್ನಿಸುತ್ತಿದ್ದಾರೆ. ಈ ೧.೭೦ ಎಕರೆ ಮೈದಾನ ಯಾರ ಸುಪರ್ದಿಗೆ ಸೇರಿದ್ದು ಎಂದು ಆರ್‌ಟಿಸಿಯಲ್ಲಿ ನೋಡಿದಾಗ ಅದು ಯಾವ ಸಂಸ್ಥೆಯ ಹೆಸರಿನಲ್ಲೂ ಇಲ್ಲ, ವೈಯಕ್ತಿಕವಾಗಿಯೂ ಯಾರ ಹೆಸರಿನಲ್ಲಿ ಇಲ್ಲ. ಅದು ಪರಂಬೋಕು ಸ್ಥಳ.
ಸಮುದಾಯ ಅಭಿವೃದ್ಧಿಗಾಗಿ ಮೀಸಲಿಟ್ಟ ಸ್ಥಳ ಎಂಬುದನ್ನು ಅರಿತುಕೊಂಡು ಈ ಮೈದಾನವನ್ನು ಸುಂದರ ಸಾರ್ವಜನಿಕ ಕ್ರೀಡಾಂಗಣವನ್ನಾಗಿ ಪರಿವರ್ತಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗೆ ಮನವಿ ಸಲ್ಲಿಸಿದರು. ಅದರಂತೆ ಅವರು ಭೇಟಿ ನೀಡಿದ್ದರು. ಅಲ್ಲಿ ಸೂಕ್ತ ಉತ್ತರ ಸಿಗದ ಕಾರಣ ಆ ಕ್ರೀಡಾಂಗಣದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಬಾಳೆಗಿಡ ನೆಡಲು ಆರಂಭಿಸಿದರು. ತಡೆಹಿಡಿಯಲು ಮೂರು ತಿಂಗಳ ಹಿಂದೆಯೇ ಪಂಚಾಯಿತಿ ಆಡಳಿತದ ಗಮನಕ್ಕೂ ತರಲಾಗಿತ್ತು. ಗ್ರಾಮಕರಣಿಕರು ಪ್ರಯತ್ನಿಸಿದರಾದರೂ ಮರುದಿನ ಇನ್ನಷ್ಟು ಬಾಳೆಗಿಡಗಳನ್ನು ನೆಡಲಾಯಿತು. ಹಾಗಾಗಿ ಕ್ರೀಡಾಪಟುಗಳು, ನಿವೇಶನ ರಹಿತರು, ಬಾಡಿಗೆ ಮನೆಯಲ್ಲಿ ವಾಸಿಸುವವರು ಸೇರಿದಂತೆ ಸುಮಾರು ೩೫ ಕುಟುಂಬ ಜೋಪಡಿ ಹಾಕಿ ಸಣ್ಣ ಪ್ರತಿಭಟನೆ ತೋರಿದ್ದಾರೆ. ಜೋಪಡಿ ಹಾಕಿದವರಲ್ಲಿ ಸ್ವಂತ ಮನೆ ಇರುವವರು ಇದ್ದಾರೆ. ಕಾನೂನು ನಮ್ಮ ಪರವಾಗಿರಬಹುದು ಎಂಬ ಆಶಾಭಾವನೆ ಎಲ್ಲರಲ್ಲಿದೆ.

Related posts

Leave a Reply