Header Ads
Header Ads
Header Ads
Breaking News

ಕ್ಷೇಮದಲ್ಲಿ ‘ವಿಶ್ವ ಅಲ್ಝೀಮರ್ ದಿನ’ ಅಲ್ಝೀಮರ್‌ಗೆ ತುತ್ತಾದವರನ್ನು ಮಾನವೀಯತೆಯಿಂದ ವರ್ತಿಸಿ ಯೆನೆಪೋಯ ವೈದ್ಯಕೀಯ ವಿಭಾಗದ ಡಾ. ಪ್ರಭಾ ಅಧಿಕಾರಿ ಕಿವಿಮಾತು

ಉಳ್ಳಾಲ: ಅಲ್ಜೀಮರ್ ಕಾಯಿಲೆಗೆ ತುತ್ತಾದವರನ್ನು ಕಟ್ಟಿಹಾಕದೆ, ಹಿಂಸಿಸದೆ ಗೊತ್ತಿಲ್ಲದ ವಿಚಾರವನ್ನು ಕೇಳಿ ನೋಯಿಸದೆ, ಹಿಯ್ಯಾಳಿಸದೆ ಅವರೊಂದಿಗೆ ಮಾನವೀಯತೆಯಿಂದ ವರ್ತಿಸಿ ಎಂದು ಏಜ್ ಮಂಗಳೂರು ಸ್ಥಾಪಕ ಸದಸ್ಯೆ ಹಾಗೂ ಯೆನೆಪೋಯ ವೈದ್ಯಕೀಯ ವಿಭಾಗ ಮುಖ್ಯಸ್ಥೆ ಡಾ.ಪ್ರಭಾ ಅಧಿಕಾರಿ ಕಿವಿ ಮಾತು ಹೇಳಿದ್ದಾರೆ.

ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಮನೋವೈದ್ಯಶಾಸ್ತ್ರ ವಿಭಾಗ ಮತ್ತು ದೇರಳಕಟ್ಟೆ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿ ವತಿಯಿಂದ ಆಸ್ಪತ್ರೆಯ ‘ ಕ್ಷೇಮ ಸಂಧ್ಯಾ ’ ಕೇಂದ್ರದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ವಿಶ್ವ ಅಲ್ಝೀಮರ್ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ತಾಯಿಯಲ್ಲಿರುವ ಅಪೌಷ್ಠಿಕತೆಯಿಂದ ಹುಟ್ಟುವ ಮಗುವಿನ ಮೆದುಳು ಸರಿಯಾಗಿ ಬೆಳೆಯದೆ, ಮದ್ಯವಯಸ್ಸಿನಲ್ಲಿ ಮನಸ್ಸಿನ ಮೇಲೆ ಆಗುವ ಆಘಾತಗಳು, ಖಿನ್ನತೆಗೆ ಜಾರುವುದು, ದೂಮಪಾನ, ಮದ್ಯಪಾನಗಳಿಂದಲೂ ಅಲ್ಝೀಮರ್‌ಗೆ 65 ರ ಹರೆಯಕ್ಕಿಂತ ಮೇಲ್ಪಟ್ಟವರು ತುತ್ತಾಗುವ ಸಾಧ್ಯತೆಗಳಿವೆ. ಆದರೆ ಮನಸ್ಸನ್ನು ಸದೃಢವಾಗಿರಿಸಿಕೊಳ್ಳುವ ಮೂಲಕ ರೋಗದ ತಡೆಗಟ್ಟುವಿಕೆ ಸಾಧ್ಯ. ಮನಸ್ಸು ಆರೋಗ್ಯಯುತವಾಗಿದಲ್ಲಿ ವೃದ್ಧರಾಗಲು ಅಸಾಧ್ಯ, ವೃದ್ಧಾಪ್ಯದಲ್ಲೂ ಸದಾ ಕ್ರಿಯಶೀಲತೆಯಿಂದ ಕೂಡಿ, ಎಲ್ಲರ ಜತೆಗೆ ಬೆರೆತು, ಮನಸ್ಸಿಗೆ ಕೆಲಸವನ್ನು ಕೊಡುತ್ತಾ ಬಂದಲ್ಲಿ ಅಲ್ಝೀಮರ್ ಕಾಯಿಲೆ ಬಾರದಂತೆ ತಡೆಗಟ್ಟಬಹುದು. ವೃದ್ಧಾಪ್ಯದಲ್ಲಿರುವವರನ್ನು ಜತೆಗೂಡಿಸಿ ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮನಸ್ಸಿಗೆ ವ್ಯಾಯಾಮ ಕೊಡಲು ಉಚಿತವಾಗಿ ಕ್ಷೇಮ ಆಸ್ಪತ್ರೆ ಸ್ಥಾಪಿಸಿದ ಕ್ಷೇಮ ಸಂಧ್ಯಾ ಕೇಂದ್ರ ಇತರೆ ಆಸ್ಪತ್ರೆಗಳಿಗೂ ಮಾದರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇಮ ವೈದ್ಯಕೀಯ ಕಾಲೇಜಿನ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ವಹಿಸಿ ದೇಶದಲ್ಲಿ 5 ಮಿಲಿಯ ವಯಸ್ಕರು ಅಲ್ಝೀಮರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಸದ್ಯ ಯುವಜನರೇ ಹೆಚ್ಚಿರುವ ದೇಶದಲ್ಲಿ ಅಷ್ಟು ಜನಕ್ಕೆ ವಿವಿಧ ರೀತಿಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆದರೆ ಮುಂಬರುವ 30 ವರ್ಷಗಳಲ್ಲಿ ವಯಸ್ಕರ ಸಂಖ್ಯೆಯೂ ಹೆಚ್ಚಾಗಿ ಅವರನ್ನು ನಿಯಂತ್ರಣದಲ್ಲಿಡಲು ವ್ಯವಸ್ಥೆಗಳು ಇರಲು ಅಸಾಧ್ಯ. ಆದ್ದರಿಂದ ಅಂತಹ ಗಂಭೀರ ಸಮಸ್ಯೆ ಎದುರಾಗುವ ಮುನ್ನ ಅಲ್ಝೀಮರ್ ಕಾಯಿಲೆ ತಡೆಗಟ್ಟುವಿಕೆಗೆ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕಿದೆ. ಅಲ್ಲದೆ ಸಂಶೋಧನೆಗಳ ಮೂಲಕ ಅಲ್ಝೀಮರ್ ಕಾಯಿಲೆಗೆ ಔಷಧಿಗಳನ್ನು ಹುಡುಕುವ ಕಾರ್ಯವನ್ನು ಯುವಸಮುದಾಯ ಮಾಡಬೇಕಿದೆ ಎಂದರು.

ಈ ಸಂದರ್ಭ ಕ್ಷೇಮ ವೈದ್ಯಕೀಯ ಕಾಲೇಜಿನ ವೈಸ್ ಡೀನ್ ಡಾ.ಪ್ರಕಾಶ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಫಾತಿಮ ಡಿಸಿಲ್ವಾ ಮುಖ್ಯ ಅತಿಥಿಗಳಾಗಿದ್ದರು. ನಿಟ್ಟೆ ಮನೋವೈದ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಸತೀಶ್ ರಾವ್ ಸ್ವಾಗತಿಸಿದರು. ಶಾಲಿನಿ ಮ್ಯಾಥಿವ್ ಕಾರ್ಯಕ್ರಮ ನಿರ್ವಹಿಸಿದರು. ಅಗ್ನಿಟಾ ವಂದಿಸಿದರು. ಈ ಸಂದರ್ಭ ಕ್ಷೇಮ ಸಂಧ್ಯಾ ಕೇಂದ್ರದ ಸದಸ್ಯರಿಗೆ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಯಸ್ಕರನ್ನು ಸದಾ ಚಟುವಟಿಕೆಯಿಂದಿರಿಸಲು ಮತ್ತು ಮನಸ್ಸಿಗೆ ತರಬೇತಿಯನ್ನು ನೀಡಲು ಕೆ.ಎಸ್.ಹೆಗ್ಡೆ ಆಸ್ಪತ್ರೆ ವತಿಯಿಂದ ಉಚಿತವಾಗಿ ಆರಂಭಿಸಿದ ಕೇಂದ್ರವಾಗಿದೆ. ಒಂದು ವರ್ಷದ ಹಿಂದೆ ಸ್ಥಾಪಿಸಲಾದ ಕೇಂದ್ರದಲ್ಲಿ ಸದ್ಯ 14 ಮಂದಿ ಸದಸ್ಯರಿದ್ದಾರೆ. ಬೆಳಿಗ್ಗೆ ಪಂಪ್ ವೆಲ್ ನಿಂದ ಬಸ್ಸಿನ ಮೂಲಕ ಸಂಸ್ಥೆ ಕರೆತಂದು ಆಸ್ಪತ್ರೆಯಲ್ಲಿರುವ ಕೇಂದ್ರದಲ್ಲಿ ನಿರಂತರವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತದೆ. ಚೆಸ್, ಕ್ಯಾರಂ ಹೀಗೆ ಮನಸ್ಸಿಗೆ ತರಬೇತು ನೀಡುವ ಆಟದಲ್ಲಿ ಹಲವರು ತೊಡಗಿಕೊಂಡಲ್ಲಿ, ಇನ್ನು ಹಲವರು ಪುಸ್ತಕಗಳನ್ನು ಓದುತ್ತಾ, ಹಾಡು ಹಾಡುತ್ತಾ ಕಾಲ ಕಳೆಯುವವರಿದ್ದಾರೆ. ಅವರಿಗಾಗಿ ವಿಶ್ರಾಂತಿ ಪಡೆಯಲೆಂದು ಹಾಸಿಗೆ ವ್ಯವಸ್ಥೆ ಮತ್ತು ಅಡುಗೆ ಮಾಡಲು ಗ್ಯಾಸ್ ವ್ಯವಸ್ಥೆಯೂ ಕೇಂದ್ರದಲ್ಲಿ ಕಲ್ಪಿಸಲಾಗಿದೆ. ನಿಟ್ಟೆ ವಿ.ವಿ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅವರ ವಿಶೇಷ ಮುತುವರ್ಜಿಯಲ್ಲಿ ಕೇಂದ್ರದ ಸ್ಥಾಪನೆಯಾಗಿದೆ.

Related posts

Leave a Reply