Header Ads
Breaking News

ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನ ಜಾತ್ರಾ ಮಹೋತ್ಸವ ಪ್ರಯುಕ್ತ ಮೀನು ಹಿಡಿಯುವ ಸಂಪ್ರದಾಯ

ಸುರತ್ಕಲ್ ಸಮೀಪದ ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ಜಾತ್ರಾ ಮಹೋತ್ಸವ ಪ್ರಸಿದ್ಧವಾದುದು. ಮೇ ತಿಂಗಳಲ್ಲಿ ಬರುವ ವೃಷಭ ಸಂಕ್ರಮಣದಂದು ಇಲ್ಲಿ ಮೀನು ಹಿಡಿಯುವ ಸಂಪ್ರದಾಯ ಬಹಳ ಪ್ರಖ್ಯಾತಿ ಪಡೆದಿದೆ. ಈ ವಿಶೇಷ ಸಂದರ್ಭದಲ್ಲಿ ಪ್ರತೀ ವರ್ಷ ಜಿಲ್ಲೆಯ ನಾನಾ ಭಾಗಗಳಿಂದ ಜನರು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಈ ಬಾರಿಯೂ ಮೀನು ಹಿಡಿಯುವ ಸಂಪ್ರದಾಯ ವಿಶೇಷವಾಗಿ ನಡೆಯಿತು.

ತುಳುನಾಡಿನಲ್ಲಿ ಎರ್ಮಾಳು ಜೆಪ್ಪು ಖಂಡೇವು ಅಡೆಪು ನಾಣ್ಣುಡಿ ಇದೆ. ಉಡುಪಿ ಜಿಲ್ಲೆಯ ಎರ್ಮಾಳು ದೇವಳದಲ್ಲಿ ಜಾತ್ರೆ ಪ್ರಾರಂಭಗೊಳ್ಳುವ ಮೂಲಕ ಅವಿಭಜಿತ ದ.ಕ. ಉಡುಪಿ ಜಿಲ್ಲೆಯ ದೈವ ದೇವಸ್ಥಾನಗಳ ಜಾತ್ರೆಗಳು ಪ್ರಾರಂಭಗೊಂಡು ಸುರತ್ಕಲ್ ಸಮೀಪದ ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ಕ್ಷೇತ್ರದ ಜಾತ್ರೆಯೊಂದಿಗೆ ಎಲ್ಲಾ ಜಾತ್ರೆಗಳು ಮುಕ್ತಾಯವಾಗುತ್ತದೆ,.

ಚೇಳಾಯರು ಗ್ರಾಮದ ಖಂಡಿಗೆಯ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಸು ಕ್ಷೇತ್ರವು ಪಾವಂಜೆ ರಾಷ್ಟ್ರೀಯ ಹೆದ್ದಾರಿ ಸೇತುವೆ ಸಮೀಪ ನಂದಿನಿ ನದಿಯ ತಟದಲ್ಲಿದ್ದು ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಪ್ರತಿ ವರ್ಷ ಮೇ ತಿಂಗಳಲ್ಲಿ ಬರುವ ವೃಷಭ ಸಂಕ್ರಮಣದಂದು ನಡೆಯುತ್ತದೆ.

ಈ ನದಿಯಲ್ಲಿ ಮೀನು ಹಿಡಿಯುವ ಪದ್ದತಿ ಹಿಂದಿನಿಂದಲೂ ದೊಡ್ದ ಮಟ್ಟದಲ್ಲಿ ನಡೆಯುತ್ತದೆ. ವೃಷಭ ಸಂಕ್ರಮಣದಂದು ಬೆಳಿಗ್ಗೆ ೭ರ ಸುಮಾರಿಗೆ ದೈವಸ್ಥಾನಕ್ಕೆ ಸಂಭಂದ ಪಟ್ಟವರು ದೈವಕ್ಕೆ ಪ್ರಾಥನೆ ಸಲ್ಲಿಸಿ ನಂದಿನಿ ನದಿಯ ದಡಕ್ಕೆ ಆಗಮಿಸಿ ನದಿಗೆ ಪ್ರಸಾದ ಹಾಕಿ ಮೀನು ಹಿಡಿಯುವ ಸಂಪ್ರದಾಯಕ್ಕೆ ಚಾಲನೆ ದೊರೆಯುತ್ತದೆ. ಜನರು ಬೆಳಿಗ್ಗೆ ೭ಗಂಟೆಯಿಂದ ಮದ್ಯಾಹ್ನದವರೆಗೂ ಮೀನು ಹಿಡಿಯುತ್ತಾರೆ, ಹಿಡಿದ ಮೀನನ್ನು ಮನೆಗೆ ತೆಗೆದು ಕೊಂಡು ಹೋಗಿ, ಸತ್ತ ತಮ್ಮ ಹಿರಿಯರ ಪ್ರೇತಾತ್ಮಗಳಿಗೆ ಬಡಿಸುವ ಕ್ರಮ ಇಲ್ಲಿಯ ಜನರಲ್ಲಿದ್ದು, ಇದು ಈಗಲೂ ಹೆಚ್ಚಿನ ಮನೆಗಳಲ್ಲಿ ಆಚರಿಸಿಕೊಂಡೂ ಬರುತ್ತಿದ್ದಾರೆ, ವರ್ಷದಲ್ಲಿ ಒಂದು ದಿನ ಇಲ್ಲಿನ ಮೀನನ್ನು ಪದಾರ್ಥ ಮಾಡಿ ತಿನ್ನುವುದೇ ಇಲ್ಲಿನ ದೈವದ ಪ್ರಸಾದವೆಂದು ಭಕ್ತರು ನಂಬುವುದರಿಂದ ಜಾತ್ರೆಗೆ ವಿಶೇಷ ಪ್ರಾಮುಖ್ಯತೆ ದೊರೆತಿದೆ, ಅಲ್ಲದೆ ಇಲ್ಲಿನ ಮೀನು ಅತ್ಯಂತ ರುಚಿಕರವಾಗಿರುತ್ತದೆ ಎಂಬ ನಂಬಿಕೆ ಇದೆ. ಜಾತಿ ಮತ ಬೇಧವಿಲ್ಲದೆ ಉಭಯ ಜಿಲ್ಲೆಯ ಹೆಚ್ಚಿನವರು ಇದರಲ್ಲಿ ಬಾಗವಹಿಸುತ್ತಾರೆ, ಕೆಲವರು ವ್ಯಾಪಾರದ ದೃಷ್ಟಿಯಿಂದ ಇಲ್ಲಿ ಹಿಡಿದ ಮೀನನ್ನು ಅಲ್ಲಿಯೇ ಮಾರುತ್ತಾರೆ.

ಮೇಷ ಸಂಕ್ರಮಣ ವೃಷಭ ಸಂಕ್ರಮಣದವರೆಗಿನ ಒಂದು ತಿಂಗಳ ಅವಧಿಯಲ್ಲಿ ಈ ನದಿಯಲ್ಲಿ ಮೀನು ಹಿಡಿಯುವುದಕ್ಕೆ ನಿಷೇಧವಿದೆ. ಈ ಸಂದರ್ಭ ಮೀನು ಹಿಡಿಯುವ ಕ್ರಮ ಇಲ್ಲ, ಹಲವು ವರ್ಷದ ಹಿಂದೆ ನಿಷೇದದ ಸಂದರ್ಭ ಮೀನು ಹಿಡಿಯಲು ಕೆಲವರು ಮುಂದಾದಾಗ ಮೀನು ಹಿಡಿಯುವ ಬಲೆಗೆ ನಾಗರ ಹಾವು ಬಂದ ಉದಾಹರಣೆಗಳಿವೆ ಎಂಬುದನ್ನು ಹಿರಿಯರು ಹೇಳುತ್ತಾರೆ. ಈ ಬಾರಿ ಮಳೆ ಇಲ್ಲದ ಕಾರಣ ನೀರಿನ ಪ್ರಮಾಣ ಕಡಿಮೆಯಾಗಿದೆ. ಬೆಳಿಗ್ಗೆ ಮೀನು ಹಿಡಿಯುವ ಜಾತ್ರೆಯಾದರೆ ಕ್ಷೇತ್ರದಲ್ಲಿ ರಾತ್ರಿ ಧಾರ್ಮಿಕ ಕಾರ್ಯಕ್ರಮ ಬಳಿಕ ಧ್ವಜಾವರೋಹಣ ನಡೆಯುತ್ತದೆ ಅಲ್ಲಿಗೆ ತುಳುನಾಡಿನಲ್ಲಿ ಹೆಚ್ಚಿನ ಜಾತ್ರೆ, ನೇಮೋತ್ಸವಗಳು ಅಂತ್ಯಗೊಳ್ಳುತ್ತಿದೆ. ಏನೇ ಆಗಲಿ ಆಧುನಿಕ ಯುಗದಲ್ಲೂ ಇಂತಹ ಸಂಸ್ಕ್ರತಿಯೊಂದು ನಡೆದುಕೊಂಡು ಬರುತಿರುದು ವಿಶೇಷವೇ ಸರಿ.

Related posts

Leave a Reply

Your email address will not be published. Required fields are marked *