Header Ads
Header Ads
Header Ads
Breaking News

ಖಾಸಗಿ ವೈದ್ಯರ ಮುಷ್ಕರ ಹಿನ್ನಲೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೆ ಬಾಲಕಿ ಸಾವು ಪುತ್ತೂರು ಕಬಕ ನಿವಾಸಿ ಪೂಜ ಮೃತ ಬಾಲಕಿ

ರಾಜ್ಯದಾದ್ಯಂತ ನಡೆಯುತ್ತಿರುವ ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ವೈದ್ಯರ ಸೂಕ್ತ ಚಿಕಿತ್ಸೆ ದೊರಕದೆ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಎಂಬಲ್ಲಿ ನಡೆದಿದೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಪೂಜಾ ಸಾವನ್ನಪ್ಪಿದ ವಿದ್ಯಾರ್ಥಿನಿಯಾಗಿದ್ದು, ವೈದ್ಯರ ಮುಷ್ಕರಕ್ಕೆ ದಕ್ಷಿಣಕನ್ನಡ ಜಿಲ್ಲೆಯ ಮೊದಲ ಬಲಿ ಈಕೆಯಾಗಿದ್ದಾಳೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪೂಜಾ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಡಯಾಲಿಸೀಸ್ ಚಿಕಿತ್ಸೆ ಮಾಡಿಸಿಕೊಂಡು ಬರುತ್ತಿದ್ದಳು. ವಾರಕ್ಕೆ ಎರಡು ದಿನ ಡಯಾಲಿಸೀಸ್ ಚಿಕಿತ್ಸೆಯ ಅನಿವಾರ್ಯತೆಯಿದ್ದ ಪೂಜಾಳಿಗೆ ಮಂಗಳವಾರದಂದು ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಸಂಬಂಧ ಪುತ್ತೂರಿನ ಆಸ್ಪತ್ರೆಯಲ್ಲಿ ಡಯಾಲಿಸೀಸ್ ಗೆ ಪೋಷಕರು ಆಕೆಯನ್ನು ಕರೆದೊಯ್ದಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಆಕೆಯನ್ನು ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಪೂಜಾಳ ರಕ್ತದಲ್ಲಿ ಕೆಲವು ಬದಲಾವಣೆಯಾಗಿದ್ದು, ವೈದ್ಯರ ತಪಾಸಣೆಯ ಬಳಿಕವೇ ಡಯಾಲಿಸೀಸ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದರಿಂದಾಗಿ ಪೋಷಕರು ಆಕೆಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿರುವ ಆಕೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ವೈದ್ಯರು ಇಲ್ಲದ ಕಾರಣ ಮತ್ತೆ ಪೂಜಾಳನ್ನು ಮನೆಗೆ ಕರೆ ತಂದಿದ್ದಾರೆ. ನಿನ್ನೆ ಬೆಳಿಗ್ಗೆ ಕಾಲೇಜಿನ ಪರೀಕ್ಷೆಯನ್ನು ಬರೆದು ಮನೆಗೆ ಬಂದ ಪೂಜಾಳಿಗೆ ಮತ್ತೆ ಉಸಿರಾಟದ ತೊಂದರೆ ಜಾಸ್ತಿಯಾಗಿದೆ. ಈ ಕಾರಣಕ್ಕಾಗಿ ರಾತ್ರಿ ಆಕೆಯನ್ನು ಪುತ್ತೂರು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ಆಕೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದ ಹಿನ್ನಲೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಮೂರು ಹೆಣ್ಣುಮಕ್ಕಳಿರುವ ಬಡ ಕುಟುಂಬದ ಎರಡನೇ ಮಗಳಾಗಿರುವ ಪೂಜಾ ಆರು ತಿಂಗಳ ಹಿಂದ ಆಕೆಯ ತಂದೆಯನ್ನು ಕಳೆದುಕೊಂಡಿದ್ದಳು. ಕೂಲಿ ನಾಲಿ ಮಾಡಿ ಕುಟುಂಬವನ್ನು ಸಾಕುತ್ತಿದ್ದ ತಾಯಿ ಗೀತಾ ಕೂಲಿಯಲ್ಲಿ ಸಿಗುತ್ತಿದ್ದ ದುಡ್ಡಿನಲ್ಲೇ ಪೂಜಾಳಿಗೆ ವಾರಕ್ಕೆ ಎರಡು ಬಾರಿ ಡಯಾಲಿಸೀಸ್ ಮಾಡಿಸುತ್ತಿದ್ದರು. ಒಂದು ವೇಳೆ ಸೂಕ್ತ ಸಮಯದಲ್ಲಿ ವೈದ್ಯರು ಸಿಗುತ್ತಿದ್ದರೆ ಪೂಜಾ ಎಲ್ಲರಂತೆ ಇನ್ನೂ ಹಲವು ವರ್ಷ ಸಂತೋಷದಿಂದ ಬಾಳಿ ಬದುಕುತ್ತಿದ್ದಳು. ಆದರೆ ವೈದ್ಯರ ಮುಷ್ಕರ ಈಕೆಯನ್ನು ಬಲಿ ತೆಗೆದುಕೊಂಡಿದ್ದು, ಈಕೆಯ ಕುಟುಂಬಕ್ಕೆ ಸರಕಾರ ಹಾಗೂ ವೈದ್ಯರ ಸಂಘಗಳೇ ಪರಿಹಾರ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಸರಕಾರ ಹಾಗೂ ವೈದ್ಯರ ನಡುವಿನ ಕಚ್ಚಾಟದಿಂದಾಗಿ ಇದೀಗ ಬಡ ಕುಟುಂಬದ ಹೆಣ್ಣು ಮಗಳೊಬ್ಬಳು ಬಲಿಯಾಗುವಂತಾಗಿದೆ. ಹಣವಿದ್ದವರು ರಾಜ್ಯದಿಂದ ಹೊರಗೆ ಉತ್ತಮ ಚಿಕಿತ್ಸೆ ಪಡೆಯುವ ಅವಕಾಶವಿದ್ದು, ಬಡ ಕುಟುಂಬಗಳು ಮಾತ್ರ ಸಾವನ್ನೇ ಕೊನೆಯ ಆಯ್ಕೆಯನ್ನಾಗಿ ಆಯ್ದುಕೊಳ್ಳಬೇಕಾದ ಅನಿವಾರ್ಯತೆ ಇಂದು ಸೃಷ್ಟಿಯಾಗಿದೆ.

ವರದಿ: ಪ್ರವೀಣ್ ಪುತ್ತೂರು

Related posts

Leave a Reply